ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 35

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರಿ ಛಂದಸಾಮಹಮ್ ।
ಮಾಸಾನಾಂ ಮಾರ್ಗಶೀರ್ಷೋSಹಮೃತೂನಾಂ ಕುಸುಮಾಕರಃ ॥೩೫॥

ಬೃಹತ್ಸಾಮ ತಥಾ ಸಾಮ್ನಾಮ್ ಗಾಯತ್ರಿ ಛಂದಸಾಮ್ ಅಹಮ್ ।

ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮ ಆಕರಃ –ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು. [ಬೃಹತ್ =ಹಿರಿದಾದ, ಸ=ಸಾರವಸ್ತು ಮತ್ತು, ಅಮ=ಅರಿವಿಗೆಟುಕದವನಾದ್ದರಿಂದ ‘ಬೃಹತ್ಸಾಮ’ ಎನ್ನಿಸಿ ಬೃಹತ್ಸಾಮವೆಂಬ ಗಾನದಲ್ಲಿದ್ದೇನೆ.] ಛಂದಸ್ಸುಗಳಲ್ಲಿ ಗಾಯತ್ರಿ ನಾನು. [ಗಾಯ =ಗಾಯಕರನ್ನು ತ್ರಿ=ಸಲಹುವುದರಿಂದ ‘ಗಾಯತ್ರಿ’ ಎನ್ನಿಸಿ ಗಾಯತ್ರಿ ಛಂದಸ್ಸಿನಲ್ಲಿದ್ದೇನೆ.] ತಿಂಗಳಲ್ಲಿ ಮಾರ್ಗಶಿರ ನಾನು. [ದಾರಿಯ ಕೊನೆಯಲ್ಲಿರುವುದರಿಂದ ‘ಮಾರ್ಗಶೀರ್ಷ’ ಎನ್ನಿಸಿ ಮಾರ್ಗಶಿರಮಾಸದಲ್ಲಿದ್ದೇನೆ.] ಋತುಗಳಲ್ಲಿ ವಸಂತ ನಾನು. [ಕು=ಕೆಟ್ಟ, ಸು= ಒಳ್ಳೆಯ, ಮಾ=ಅರಿವನ್ನು, ಕರ=ನೀಡುವುದರಿಂದ ‘ಕುಸುಮಾಕರ’ ಎನ್ನಿಸಿ ವಸಂತ ಋತುವಿನಲ್ಲಿದ್ದೇನೆ.]

ಸಾಮಗಾನದಲ್ಲಿ ಅನೇಕ ವಿಧ. ಸಪ್ತ ಸ್ವರವನ್ನು ಬಳಸಿ ಹಾಡುವುದು ಸಾಮವೇದದಲ್ಲಿ ಮಾತ್ರ. ಇದು ಋಗ್ವೇದ ಯಜುರ್ವೇದದಲ್ಲಿ ಇಲ್ಲ. ಎಲ್ಲ ಸಾಮಗಳಲ್ಲಿ ಸಪ್ತಸ್ವರದ ಬಳಕೆ ಇಲ್ಲ. ಈ ರೀತಿ ಸಪ್ತಸ್ವರವಿರುವ ಸಾಮದಲ್ಲಿ “ಬೃಹತ್ಸಾಮವೆಂಬ ಗಾನ ನಾನು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹತ್ಸಾಮಃ’ – ಹಿರಿದಾದ, ಸಾರಭೂತನಾದ ಮತ್ತು ನಮ್ಮ ಅರಿವಿಗೆಟುಕದೆ ಅಮಿತವಾಗಿರುವ ಭಗವಂತ ‘ಬೃಹತ್ಸಾಮಃ’

ಪದ್ಯದ ರೂಪದಲ್ಲಿ ಒಂದು ಅಪೂರ್ವವಾದ ಅರ್ಥವನ್ನು, ಅಧ್ಯಾತ್ಮದ ಸಂದೇಶವನ್ನು ತುಂಬಿಡುವಂತಾದ್ದು-ಛಂದಸ್ಸು. ಇದು ನಮ್ಮ ಅಭಿಪ್ರಾಯವನ್ನೂ ಲಯಬದ್ಧವಾಗಿ ವ್ಯಕ್ತಪಡಿಸುವ ವಿಧಾನ. ಛಂದಸ್ಸಿನಲ್ಲಿ ಪ್ರಧಾನವಾಗಿ ಏಳು ಛಂದಸ್ಸುಗಳಿವೆ. 24 ಅಕ್ಷರದ ಗಾಯತ್ರಿ, 28 ಅಕ್ಷರದ ಉಷ್ಣಿಕ್, 32 ಅಕ್ಷರದ ಅನುಷ್ಪುಪ್, 36 ಅಕ್ಷರದ ಬೃಹತೀ, 40 ಅಕ್ಷರದ ಪಂಕ್ತಿ, 44 ಅಕ್ಷರದ ತ್ರಿಷ್ಪುಪ್ ಮತ್ತು 48 ಅಕ್ಷರದ ಜಗತೀ. ಈ ಛಂದಸ್ಸುಗಳಲ್ಲಿ ಭಗವಂತನ ವಿಶೇಷ ವಿಭೂತಿ ಇರುವ ಛಂದಸ್ಸು ‘ಗಾಯತ್ರಿ’. ಇದು ಭಗವಂತನ ಹೆಸರು ಕೂಡಾ ಹೌದು. ‘ಗಾಯತಂ ತ್ರಾಯತೆ ಇತಿ ಗಾಯತ್ರಿಃ’. ಯಾರು ಭಗವಂತನನ್ನು ಈ ಮಂತ್ರದಿಂದ ಸ್ತೋತ್ರ ಮಾಡುತ್ತಾರೋ ಅವರನ್ನು ಆತ ರಕ್ಷಣೆ ಮಾಡುತ್ತಾನೆ. ಗಾಯತ್ರಿ ಛಂದಸ್ಸು ಏಳು ಛಂದಸ್ಸುಗಳಲ್ಲಿ ಮೊದಲನೆಯದು. ಎಂಟು ಅಕ್ಷರದ ಮೂರು ಪಾದಗಳುಳ್ಳ ಗಾಯತ್ರಿ ಎಲ್ಲದರ ಪಂಚಾಂಗ(Foundation)ದಂತಿದೆ. ಋಗ್ವೇದದಲ್ಲಿನ ಹೆಚ್ಚಿನ ಮಂತ್ರಗಳು ಗಾಯತ್ರಿ ಛಂದಸ್ಸಿನಲ್ಲಿದೆ. ಸಮಸ್ತ ವೇದಗಳ ‘ವೇದಮಾತ’ ಎನ್ನಿಸಿಕೊಂಡಿರುವ ಗಾಯತ್ರಿ ಮಂತ್ರವಿರುವುದು ‘ಗಾಯತ್ರಿ’ ಛಂದಸ್ಸಿನಲ್ಲಿ. ಹೀಗೆ ಗಾಯತ್ರಿ ಇತರ ಛಂದಸ್ಸಿಗೆ ಮಾತೃಸ್ಥಾನೀಯವಾಗಿದೆ. ಗಾಯತ್ರಿ ಅಧ್ಯಾತ್ಮದ ಮೂಲಭೂತವಾದ ಮುಖವನ್ನು ಹೊಂದಿರತಕ್ಕಂತಹ ಮಂತ್ರ. ಸೂರ್ಯನಲ್ಲಿರುವ ಸೌರಶಕ್ತಿಯನ್ನು ನಮಗೆ ಹರಿಸುತ್ತ, ಸೌರಮಂಡಲದಲ್ಲಿರುವ ನಮ್ಮ ಜೀವಪ್ರಧಾನವಾದ ಭಗವಂತನ ಸ್ತೋತ್ರ ಮಾಡುವುದು ಗಾಯತ್ರಿ. ‘ಇಡೀ ಬ್ರಹ್ಮಾಂಡದ ನಿಯಾಮಕನಾಗಿದ್ದು, ಸೌರ ಶಕ್ತಿಯಿಂದ ಬಂದು, ನಮ್ಮ ಆತ್ಮದ ಒಳಗೆ ನಮ್ಮ ಹೃದಯ ಕಮಲದಲ್ಲಿ ‘ಧೀ’ ಶಕ್ತಿಯನ್ನು ಪ್ರೇರಣೆ ಮಾಡುವಂಥ ಶಕ್ತಿ ಭಗವಂತ’ ಎನ್ನುವ ಸಮಷ್ಟಿ ಚಿಂತನ ಇರುವ ಮಂತ್ರ ಗಾಯತ್ರಿ. ಗಾಯತ್ರಿ ವಿಶಿಷ್ಟವಾಗಿ(Exclusively) ವೈದಿಕ ಛಂದಸ್ಸಾಗಿ ಬಳಕೆಯಾಗಿದೆ. ಲೌಕಿಕವಾಗಿ ಇದರ ಬಳಕೆ ಇಲ್ಲ. ಗಾಯತ್ರಿಗೆ ಈ ವಿಶಿಷ್ಠ ಸ್ಥಾನ ಭಗವಂತನ ವಿಶೇಷ ವಿಭೂತಿಯಿಂದ ಬಂತು.

[ಇಲ್ಲಿ ಒಂದು ವಿಷಯವನ್ನು ನಾವು ತಿಳಿದಿರಬೇಕು: ಐತರೇಯ ಉಪನಿಷತ್ತಿನಲ್ಲಿ ಬೃಹತೀ ಛಂದಸ್ಸನ್ನು ಶ್ರೇಷ್ಠ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಅಭಿಮಾನಿ ದೇವತಾ ತಾರತಮ್ಯದಲ್ಲಿ ನೋಡಿದಾಗ ಗಾಯತ್ರಿ ಅಭಿಮಾನಿ ದೇವತೆಯರು ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಅಗ್ನಿಪತ್ನಿ ಸ್ವಾಹ. ಬೃಹತೀ ಛಂದಸ್ಸನ್ನು ನೋಡಿದಾಗ ಅಲ್ಲಿ ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಬೃಹಸ್ಪತಿಪತ್ನಿ ತಾರ ಅಭಿಮಾನಿ ದೇವತೆಗಳು. ಅಗ್ನಿಪತ್ನಿ ಸ್ವಾಹಕ್ಕಿಂತ ತಾರ ದೇವತಾ ತಾರತಮ್ಯದಲ್ಲಿ ಎತ್ತರದಲ್ಲಿರುವುದರಿಂದ, ದೇವತಾ ತಾರತಮ್ಯವನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿ ಹಾಗೆ ಹೇಳಿದ್ದಾರೆ. ಈ ವಿಚಾರ ತಿಳಿದಾಗ ಇಲ್ಲಿ ಗೊಂದಲವಿಲ್ಲ.]

“ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ” ಎನ್ನುತ್ತಾನೆ ಕೃಷ್ಣ. ಮಾರ್ಗಶಿರಮಾಸ-ಮಾಸಗಳಲ್ಲಿ ಮೊದಲನೇ ಮಾಸ; ಕಾರ್ತಿಕ ಕೊನೆಯ ಮಾಸ. ಈ ಕಾರಣಕ್ಕಾಗಿ ಕಾರ್ತಿಕ ಮಾಸದಲ್ಲಿ (ಮಾರ್ಗಶಿರ ಮಾಸದ ಮೊದಲು) ದೀಪಾವಳಿಯನ್ನು ಆಚರಿಸುತ್ತಾರೆ. ಒಂದು ವರ್ಷವನ್ನು ಕೃತಜ್ಞತೆಯಿಂದ ಕಳುಹಿಸಿಕೊಡುವುದು ದೀಪಾವಳಿಯ ಮಹತ್ವ. ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಅಂದರೆ ಮೊದಲನೆಯದು. ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ. ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡ ಮಾರ್ಗಶಿರ ಎನ್ನಬಹುದು(ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ). ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ನಾಮ ‘ಮಾರ್ಗಶೀರ್ಷ’. ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ‘ಮಾರ್ಗಶೀರ್ಷ’. ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ‘ಕುಸುಮಾಕರನಾಗಿ’ ನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ‘ಕುಸುಮಾಕರಃ’.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *