ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 34

ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ ।
ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥೩೪॥

ಮೃತ್ಯುಃ ಸರ್ವ ಹರಃ ಚ ಅಹಮ್ ಉದ್ಭವಃ ಚ ಭವಿಷ್ಯತಾಮ್ ।

ಕೀರ್ತಿಃ ಶ್ರೀಃ ವಾಕ್ ಚ ನಾರೀಣಾಂ ಸ್ಮೃತಿಃ ಮೇಧಾ ಧೃತಿಃ ಕ್ಷಮಾ –ಎಲ್ಲವನ್ನೂ ಕಬಳಿಸುವ ಮೃತ್ಯುದೇವತೆ [ಸಾಯಿಸುವವನಾದ್ದರಿಂದ ‘ಮೃತ್ಯು’ನಾಮಕನಾಗಿ, ಯಮನ ಪರಿವಾರ ದೇವತೆಯಾದ ಮೃತ್ಯುವಿನಲ್ಲಿದ್ದು ಅವನಿಗೆ ಎಲ್ಲವನ್ನು ಕಬಳಿಸುವ ಶಕ್ತಿಯಿತ್ತವನು] ನಾನು. ಮುಂದೆ ಆಗುವವರನ್ನು ಹುಟ್ಟಿಸುವವನೂ ನಾನು. ಹೆಂಗಸರಲ್ಲಿ ಕೀರ್ತಿಯ ದೇವತೆ ನಾನು; ಶ್ರೀದೇವಿ ನಾನು; ವಾಗ್ದೇವಿ ನಾನು. ಸ್ಮರಣಶಕ್ತಿಯ ದೇವತೆ ನಾನು; ಧಾರಣಶಕ್ತಿಯ ದೇವತೆ ನಾನು; ಸಹನೆಯ ದೇವತೆ ನಾನು; ಕ್ಷಮಾ ದೇವಿ ನಾನು.[ಕೀರ್ತನೀಯವಾಗಿ ‘ಕೀರ್ತಿ’ ಎನ್ನಿಸಿ ಕೀರ್ತಿದೇವಿಯಲ್ಲಿದ್ದೇನೆ; ಆಶ್ರಯನಾಗಿ ‘ಶ್ರೀ’ ಎನ್ನಿಸಿ ಶ್ರೀದೇವಿಯಲ್ಲಿದ್ದೇನೆ; ವಕ್ತಾರನಾಗಿ ‘ವಾಕ್’ ಎನ್ನಿಸಿ ವಾಗ್ದೇವಿಯಲ್ಲಿದ್ದೇನೆ; ಸ್ಮರಣೀಯನಾಗಿ ‘ಸ್ಮೃತಿ’ ಎನ್ನಿಸಿ ಸ್ಮೃತಿದೇವಿಯಲ್ಲಿದ್ದೇನೆ; ಅರಿವಿನ ಮೂರ್ತಿಯಾಗಿ ‘ಧೃತಿ’ ಎನ್ನಿಸಿ ಧೃತಿದೇವಿಯಲ್ಲಿದ್ದೇನೆ; ತಪ್ಪುಗಳನ್ನು ಮನ್ನಿಸುವವನಾಗಿ ‘ಕ್ಷಮಾ’ ಎನ್ನಿಸಿ ಕ್ಷಮಾದೇವಿಯಲ್ಲಿದ್ದೇನೆ.]

ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನು ಕಬಳಿಸುವ ಮೃತ್ಯುದೇವತೆ ಕೂಡಾ ಹೌದು. ಪ್ರಳಯಕಾಲ ನಂತರ ಸೃಷ್ಟಿಯನ್ನು ಪುನಃ ನಿರ್ಮಾಣ ಮಾಡುವವನೂ ಅವನೆ. ಸ್ತ್ರೀ ರೂಪದಲ್ಲಿನ ತನ್ನ ವಿಭೂತಿಯನ್ನು ಹೇಳುತ್ತ ಕೃಷ್ಣ ಇಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರಲ್ಲಿ ತನ್ನ ವಿಭೂತಿಯನ್ನು ವಿವರಿಸಿದ್ದಾನೆ. ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ -ಇವುಗಳ ಅಭಿಮಾನಿ ದೇವತೆಯರು ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರು. ಇವರಲ್ಲಿ ಸ್ತ್ರೀ ರೂಪ ವಿಭೂತಿಯಾಗಿ ಭಗವಂತ ನಿಂತಿದ್ದಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *