ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 33

ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ ॥೩೩॥

ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।

ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್ ವಿಶ್ವತೋಮುಖಃ –ಅಕ್ಷರಗಳಲ್ಲಿ ಮೊದಲ ಅಕಾರ ನಾನು. [‘ಅ’ ಎಂದು ಕರೆಸಿಕೊಂಡು, ‘ಅಕಾರ’ ಎನ್ನಿಸಿ ಅ-ಕಾರದಿಂದ ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ ಇರುವುದರಿಂದ ‘ದ್ವಂದ್ವ’ ಎನ್ನಿಸಿ ದ್ವಂದ್ವ ಸಮಾಸದಲ್ಲಿದ್ದೇನೆ.] ಅಳಿವಿರದ ನಾನೆ [ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೆ.

ಹಿಂದೆ ಶಬ್ದಗಳಲ್ಲಿ ಓಂಕಾರವನ್ನು ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತ ಹೇಳುತ್ತಾನೆ: “ಅಕ್ಷರಾಣಾಮಕಾರೋಸ್ಮಿ” ಎಂದು. ‘ಅ’ ಪೂರ್ತಿಯಾಗಿ ಭಗವಂತನ ಎಲ್ಲ ಗುಣಗಳನ್ನೂ ಹೇಳುವ ವಿಶಿಷ್ಠ ಅಕ್ಷರ. ಅ- ಅಂದರೆ ‘ಅಲ್ಲ’. ಭಗವಂತ ‘ಅಲ್ಲ’. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ ಪ್ರಪಂಚದಿಂದ ವಿಲಕ್ಷಣ. ಇಂತಹ ಭಗವಂತ ‘ಇಲ್ಲ’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಹೀಗೆ ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ಅ-ಕಾರವಾಚ್ಯನಾಗಿ ‘ಅ’ಕಾರದಲ್ಲಿ ತುಂಬಿದ್ದಾನೆ.

ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತ ಕೃಷ್ಣ ಹೇಳುತ್ತಾನೆ: “ದ್ವಂದ್ವಃ ಸಾಮಾಸಿಕಸ್ಯ” ಎಂದು. ನಮಗೆ ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು ಪದ, ಅಥವಾ ಎರಡೂ ಪದ(ಬಹುವ್ರೀಹಿ) ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ. ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ. ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ ಭಗವಂತ ದ್ವಂದ್ವಃ.

ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ ‘ಧಾತ’. ಇಂತಹ ಭಗವಂತ ವಿಶ್ವತೋಮುಖಃ. ಆತ ಎಲ್ಲೆಡೆ ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ ಎಡೆಯಿಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *