ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 30

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ ।
ಮೃಗಾಣಾಂ ಚ ಮೃಗೇಂದ್ರೋSಹಂ ವೈನತೇಯಶ್ಚ ಪಕ್ಷಿಣಾಮ್ ॥೩೦॥

ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಮ್ ಕಾಲಃ ಕಲಯತಾಮ್ ಅಹಮ್ ।

ಮೃಗಾಣಾಮ್ ಚ ಮೃಗೇಂದ್ರಃ ಅಹಮ್ ವೈನತೇಯಃ ಚ ಪಕ್ಷಿಣಾಮ್ –ದಿತಿಯ ವಂಶದವರಲ್ಲಿ ಹಿರಿಯನಾದ ಪ್ರಹ್ಲಾದ ನಾನು [ಹಿರಿಯ ಆನಂದದಿಂದ ‘ಪ್ರಹ್ಲಾದ’ ಎನ್ನಿಸಿ ಪ್ರಹ್ಲಾದನಲ್ಲಿದ್ದೇನೆ.] ಲೆಕ್ಕಿಗರಲ್ಲಿ ಕಾಲ ನಾನು. [ಕೊಲ್ಲುವವನಾದ್ದರಿಂದ ‘ಕಾಲ’ ಎನ್ನಿಸಿ ಕಾಲದೇವತೆಯಲ್ಲಿದ್ದೇನೆ.] ಮೃಗಗಳಲ್ಲಿ ಸಿಂಹ ನಾನು. [ಮೃಗ=ಭಗವಂತನನ್ನರಸುವ ಭಕ್ತರಿಗೆ, ಇಂದ್ರ =ಒಡೆಯನಾದ್ದರಿಂದ ‘ಮೃಗೇಂದ್ರ’ ಎನ್ನಿಸಿ ಸಿಂಹದಲ್ಲಿದ್ದೇನೆ.] ಹಕ್ಕಿಗಳಲ್ಲಿ ಗರುಡ ನಾನು. [ವಿನತ =ಶರಣಾದವರಿಗೆ ಆಸರೆಯಾಗಿ ‘ವೈನತೇಯ’ ಎನ್ನಿಸಿ ಗರುಡನಲ್ಲಿದ್ದೇನೆ.]

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ. ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ. ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕನ್ನು ಹಾಳುಗೆಡುವವರು. ಆದರೆ ಇಂಥಹ ದೈತ್ಯವಂಶದ ಆದಿಯಲ್ಲಿ ಹುಟ್ಟಿದ ಪ್ರಹ್ಲಾದ-ಎಲ್ಲರಿಗಿಂತ ಭಿನ್ನ. ಇದಕ್ಕೆ ಕಾರಣ ಭಗವಂತ ಈತನಲ್ಲಿ ವಿಶೇಷವಾಗಿ ಸನ್ನಿಧಾನವಿತ್ತಿರುವುದು. ದೈತ್ಯ ವಂಶದಲ್ಲಿ ಹುಟ್ಟಿ, ಆ ಸ್ವಭಾವದಿಂದ ಕಳಚಿಕೊಂಡು ಬಹಳ ಎತ್ತರಕ್ಕೇರಿದವ ಪ್ರಹ್ಲಾದ. ಈ ಕಾರಣದಿಂದ ದೈತ್ಯರಲ್ಲೇ ವಿಶೇಷ ವಿಭೂತಿ ಈತ. ಪ್ರಹ್ಲಾದನ ಮೇಲೆ ಭಗವಂತನ ವಿಶೇಷ ಅನುಗ್ರಹ. ಆತ ಗರ್ಭದಲ್ಲಿದ್ದಾಗಲೇ ಆತನಿಗೆ ದೇವರ್ಷಿ ನಾರದರ ಮೂಲಕ ಅಧ್ಯಾತ್ಮ ಉಪದೇಶ ಪಡೆಯುವ ಭಾಗ್ಯ ದೊರೆಯಿತು. ಈತ ದ್ರುವನಂತೆ ತನ್ನ ಐದನೇ ವಯಸ್ಸಿನಲ್ಲಿ ದೇವರನ್ನು ಕಂಡ ಸಾಧಕ. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ ಬಹಳ ಮುಖ್ಯವಾದ ಸಂದೇಶವನ್ನು ನೀಡಿದ್ದಾನೆ. ‘ಭಗವಂತ ಭಯಾನಕ ಅಲ್ಲ, ಪ್ರೀತಿಯಿಂದ ಭಗವಂತನ ಬಳಿಗೆ ಹೋದರೆ ಆತ ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ; ಭಗವಂತನ ಪೂಜೆ ಒಂದು ವ್ಯಾಪಾರವಲ್ಲ, ನಮ್ಮ ಯಾವುದೋ ಬಯಕೆಯನ್ನು ಸಾಧಿಸಿಕೊಳ್ಳುವುದಕ್ಕೋಸ್ಕರ ನಾವು ದೇವರ ಪೂಜೆ ಮಾಡಬಾರದು; ನಮ್ಮ ನಿಷ್ಕಾಮ ಭಕ್ತಿ ಭಗವಂತನಿಗೆ ಇಷ್ಟ; ಈ ರೀತಿ ಭಗವಂತನನ್ನು ಪೂಜಿಸುವುದರಿಂದ ನಾವು ಸದಾ ಆನಂದದಿಂದಿರಬಹುದು’ ಎನ್ನುವ ಸತ್ಯವನ್ನು ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ. ಇಲ್ಲಿ ಬರುವ ಭಗವಂತನ ನಾಮ ಪ್ರಹ್ಲಾದಃ. ಎಂದೂ ದುಃಖವಿಲ್ಲದ ಪೂರ್ಣವಾದ ಆನಂದಮೂರ್ತಿ ಭಗವಂತ ಪ್ರಹ್ಲಾದಃ.

ಕೃಷ್ಣ ಹೇಳುತ್ತಾನೆ: “ಕಾಲಃ ಕಲಯತಾಮ್ ಅಹಮ್” ಎಂದು. ಈ ಜಗತ್ತಿನಲ್ಲಿ ಅನಾಧಿ ಅನಂತ ಕಾಲದಲ್ಲಿ ನಡೆಯತಕ್ಕ ಪ್ರತಿಯೊಂದು ಹುಟ್ಟು-ಸಾವು ಪೂರ್ವನಿಶ್ಚಿತ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಲ ಎನ್ನುವ ಪದ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ, ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ. ಇವೆಲ್ಲದರಲ್ಲೂ ಭಗವಂತನ ವಿಶೇಷ ವಿಭೂತಿ ಅಡಗಿದೆ. ಭಗವಂತ ಕಾಲಃ ನಾಮಕನಾಗಿ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು ‘ಕಲ’ ಎನ್ನುವ ಧಾತುವಿನಿಂದ ಬಂದ ಪದ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ ‘ಕಲೆ’ ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ ‘ಕಾಲ ಪುರುಷನಾಗಿ’ ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ನಮ್ಮ ಉದ್ಧಾರ ಕೆಲವೊಮ್ಮೆ ‘ಬದುಕಿನಲ್ಲಿ’ದ್ದರೆ ಇನ್ನು ಕೆಲವೊಮ್ಮೆ ನಮ್ಮ ‘ಸಾವಿನಲ್ಲಿ’; ಕೆಲವೊಮ್ಮೆ ನಮ್ಮ ‘ಮಾನದಲ್ಲಿ’, ಇನ್ನು ಕೆಲವೊಮ್ಮೆ ನಮ್ಮ ‘ಅವಮಾನದಲ್ಲಿ’.; ಕೆಲವೊಮ್ಮೆ ನಮ್ಮ ‘ಜ್ಞಾನದಲ್ಲಿ’ ನಮ್ಮ ಉದ್ಧಾರವಿದ್ದರೆ, ಇನ್ನು ಕೆಲವೊಮ್ಮೆ ನಮ್ಮ ‘ಅಜ್ಞಾನದಲ್ಲಿ’ ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ ‘ಅಹಂಕಾರದಲ್ಲಿ’ ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ ‘ಕಾಲ ಪುರುಷನಾಗಿ’ ಬೆಳೆದು ನಿಲ್ಲುತ್ತಾನೆ. ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ ‘ಸಮಯ’. ಪ್ರತಿಯೊಂದು ಕ್ರಿಯೆಯ ಹಿಂದೆ ‘ಕಾಲ’ ಸರ್ವ ಕಾರಣವಾಗಿರುತ್ತದೆ. ಕಾಲನಿಯಾಮಕ ಭಗವಂತ ಕಾಲಃ. ಜ್ಞಾನಕಾರಕವಾದ ಅವತಾರಗಳಿಂದ (ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ ‘ಕಾಲವಾದ’ ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ ‘ಕಾಲನಾದ’. ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲನಿಯಾಮಕ ಭಗವಂತ ಕಾಲಃ.

ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಮತ್ತು ಬಲಿಷ್ಠ ಪ್ರಾಣಿಯಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಭೂಮಿಯಲ್ಲಿ ಹೆಚ್ಚು ಬಲಿಷ್ಠ ಮತ್ತು ದೊಡ್ಡ ಪ್ರಾಣಿ ಆನೆ. ಆದರೆ ಇಂಥಹ ಆನೆಯನ್ನೂ ಕೂಡಾ ಸಂಹಾರ ಮಾಡಬಲ್ಲ ಕಾಡಿನ ರಾಜ ಮೃಗೇಂದ್ರ-ಸಿಂಹ. ಮೃಗಗಳಲ್ಲೇ ಶ್ರೇಷ್ಠ ಮೃಗ ಎನ್ನಿಸಿಕೊಳ್ಳುವ ವಿಭೂತಿಯಾಗಿ ಭಗವಂತ ಸಿಂಹದಲ್ಲಿ ಕೂತ. ಇಲ್ಲಿ ಬರುವ ಭಗವಂತನ ನಾಮ ‘ಮೃಗೇಂದ್ರಃ’. ಭಗವಂತನ ಸಾಧನೆಯಲ್ಲಿ ನಿಂತವರಿಗೆ ಮಾರ್ಗದರ್ಶಕನಾಗಿ ನಿಲ್ಲುವ(ಮೃಗ) ಸರ್ವಶ್ರೇಷ್ಠ ಭಗವಂತ ‘ಮೃಗೇಂದ್ರಃ’.

ಪ್ರಾಣಿಯ ನಂತರ ಪಕ್ಷಿಗಳಲ್ಲಿ ಭಗವಂತನ ವಿಭೂತಿ. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ‘ಗರುಡ’. ಹೊಟ್ಟೆಯ ಭಾಗ ಬೆಳ್ಳಗಿರುವ ಹದ್ದಿನ ಜಾತಿಯ ಪಕ್ಷಿ ಗರುಡ. ಭಗವಂತನ ವಾಹನ ಗರುಡ ವಿನುತೆಯ ಮಗ ಆದ್ದರಿಂದ ಈತನನ್ನು ವೈನತೇಯ ಎನ್ನುತ್ತಾರೆ. ತನಗೆ ಶರಣಾಗುವ ಭಕ್ತರಿಗೆ(ವಿನತ) ಆಸರೆಯಾಗಿ ‘ವೈನತೇಯ’ ಎನ್ನಿಸಿ ಭಗವಂತ ಗರುಡನಲ್ಲಿ ಸನ್ನಿಹಿತನಾಗಿದ್ದಾನೆ. ಭಗವಂತನನ್ನು ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ಗರುಡ-ಭಗವಂತನ ವಿಶೇಷ ವಿಭೂತಿ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *