ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 29

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ ।
ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥೨೯॥

ಅನಂತಃ ಚ ಅಸ್ಮಿ ನಾಗಾನಾಮ್ ವರುಣಃ ಯಾದಸಾಮ್ ಅಹಮ್ ।

ಪಿತೄಣಾಮ್ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಮ್ ಅಹಮ್ –ನಾಗರಹಾವುಗಳಲ್ಲಿ ಶೇಷ ನಾನು. [ಅಳಿವಿರದ್ದರಿಂದ ‘ಅನಂತ’ ಎನ್ನಿಸಿ ಶೇಷನಲ್ಲಿದ್ದೇನೆ.] ಜಲಚರಗಳ ಒಡೆಯ ವರುಣ [ವರ=ಹಿರಿದಾದ, ಣ=ಆನಂದಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು ಅವನಿಗೆ ಜಲಚರಗಳ ಒಡೆತನವನ್ನಿತ್ತವನು] ನಾನು. ಪಿತೃದೇವತೆಗಳಲ್ಲಿ ಅರ್ಯಮ ನಾನು. [ಅರ್ಯ=ಅರಿಯಬೇಕಾದವನು ಮತ್ತು ಮಾ=ಅರಿತವನು ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ.] ದಂಡಿಸುವವರಲ್ಲಿ ಯಮ[ನಿಯಮಿಸುವುದರಿಂದ ‘ಯಮ’ ಎನ್ನಿಸಿ, ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆಯಿತ್ತವನು]ನಾನು.

ಸರ್ಪಗಳ ಜಾತಿಯಲ್ಲಿ ಹೆಡೆ ಉಳ್ಳದ್ದು ‘ನಾಗರ’. ನಾಗರದಲ್ಲಿ ಅತ್ಯಂತ ಶ್ರೇಷ್ಠ ‘ಶೇಷ’. ಬಲರಾಮನಾಗಿ, ಲಕ್ಷ್ಮಣನಾಗಿ, ಸದಾ ಭಗವಂತನ ಹಾಸಿಗೆಯಾಗಿ ಇರುವ ಬಹಳ ದೊಡ್ಡ ದೇವತೆ ಶೇಷ. ಶೇಷ ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ. ಹೀಗಾಗಿ ಭೂಮಿಯನ್ನು ಶೇಷ ಹೊತ್ತಿದ್ದಾನೆ ಎನ್ನುತ್ತಾರೆ. ಇಂತಹ ಶೇಷನಲ್ಲಿ ಭಗವಂತ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಹೆಡೆಯಿರುವ ಹಾವುಗಳಿಗೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿದ, ಎಂದೂ ಅಳಿವಿರದ ಶೇಷಶಯನ ಭಗವಂತ ‘ಅನಂತಃ’.

“ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ ‘ವರುಣ’ ನಾನು” ಎನ್ನುತ್ತಾನೆ ಕೃಷ್ಣ. ನೀರಿನ ಆವರಣದಲ್ಲಿ ಅನೇಕ ಜಲಚರ ಪ್ರಾಣಿಗಳಿಗೆ ಬದುಕು ಕೊಡುವ ವರುಣನೊಳಗೆ ವಿಶೇಷ ವಿಭೂತಿಯಾಗಿ ಭಗವಂತ ತುಂಬಿದ. ಇಲ್ಲಿ ಬರುವ ಭಗವಂತನ ನಾಮ ವರುಣಃ. ಹಿರಿದಾದ ಆನಂದ ಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು, ಅವನಿಗೆ ಜಲಚರಗಳ ಒಡೆತನವಿತ್ತ ಭಗವಂತ ‘ವರುಣಃ’.

ಭೂಮಿಯಿಂದ ದೇಹತ್ಯಾಗ ಮಾಡಿ ಹೋದ ಜೀವಗಳನ್ನು ನಿಯಂತ್ರಿಸುವ ದೇವತಾ ಶಕ್ತಿ-ಪಿತೃದೇವತೆಗಳು. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬ ಅರ್ಯಮನಲ್ಲಿ ಭಗವಂತ ವಿಶೇಷ ಶಕ್ತಿಯಾಗಿ ನಿಂತ. “ಅರಿಯಬೇಕಾದವನು(ಅರ್ಯ) ಮತ್ತು ಅರಿತವನು(ಮಾ) ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ” ಎನ್ನುತ್ತಾನೆ ಕೃಷ್ಣ.

ಪಾಪ ಮಾಡಿದ ಜೀವಗಳನ್ನು ನಿಯಂತ್ರಿಸುವವ ಯಮ. ಯಮನೊಳಗೆ ಭಗವಂತನ ವಿಶೇಷ ಸನ್ನಿಧಾನವಿದೆ. ಯಮನಲ್ಲಿದ್ದು ನಿಯಮಿಸುವ ಭಗವಂತ ‘ಯಮಃ’. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *