ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 28

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥

ಆಯುಧಾನಾಮ್ ಅಹಮ್ ವಜ್ರಮ್ ಧೇನೂನಾಮ್ ಅಸ್ಮಿ ಕಾಮಧುಕ್ ।

ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಮ್ ಅಸ್ಮಿ ವಾಸುಕಿಃ – ಆಯುಧಗಳಲ್ಲಿ ವಜ್ರಾಯುಧ ನಾನು. [ಅರಿವರ್ಜಿತನಾದ್ದರಿಂದ ‘ವಜ್ರ’ ಎನ್ನಿಸಿ ವಜ್ರಾಯುಧದಲ್ಲಿದ್ದೇನೆ.] ಹಸುಗಳಲ್ಲಿ ಕಾಮಧೇನು ನಾನು. [ಕಾಮ=ಬಯಸಿದ್ದನ್ನು, ಧುಕ್=ಕರೆಯುವುದರಿಂದ ‘ಕಾಮಧುಕ್’ ಎನ್ನಿಸಿ ಕಾಮಧೇನುವಿನಲ್ಲಿದ್ದೇನೆ.] ಸಂತಾನವನ್ನೀಯುವ ಕಾಮದೇವ [ಕಂ=ಸುಖದ, ದರ=ಹಲವು ಬಗೆಗಳನ್ನು, ಪ=ಉಣ್ಣಿಸುವುದರಿಂದ ‘ಕಂದರ್ಪ’ ಎನ್ನಿಸಿ ಕಾಮದೇವನಲ್ಲಿದ್ದು ಅವನಿಗೆ ಹುಟ್ಟಿನ ಸೆಳೆತದ ಶಕ್ತಿಯನ್ನಿತ್ತವನು] ನಾನು. ಹಾವುಗಳಲ್ಲಿ ವಾಸುಕಿ ನಾನು. [ವಾಸು=ಎಲ್ಲೆಡೆ ವಾಸಮಾಡಿ, ಕಿ=ಸುಖವನ್ನೀಯುವುದರಿಂದ ‘ವಾಸುಕಿ’ ಎನ್ನಿಸಿ ವಾಸುಕಿಯಲ್ಲಿದ್ದೇನೆ.]

ಆಯುಧಗಳಲ್ಲಿ ಸರ್ವಶ್ರೇಷ್ಠ ಆಯುಧ ಭಗವಂತ ಧರಿಸುವ ಸುದರ್ಶನ. ಭಗವಂತನ ಆಯುಧವನ್ನು ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. ಕೃಷ್ಣ ಹೇಳುತ್ತಾನೆ “ಆಯುಧಗಳಲ್ಲಿ ವಜ್ರಾಯುಧ ನಾನು” ಎಂದು. ಈ ವಜ್ರಾಯುಧ ಇಂದ್ರನ ಆಯುಧ. ಇದಕ್ಕೆ ಮೂರು ಲೋಕವನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತ ಕೊಟ್ಟ. ವ್ರತ್ರನನ್ನು ಸಂಹಾರ ಮಾಡಲು ಭಗವಂತನ ಆದೇಶದಂತೆ ದಧೀಚಿ ಎನ್ನುವ ಮುನಿಯ ಪೂರ್ಣ ತಪಸ್ಸಿನ ಫಲವನ್ನು ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಂದಾಗ ಕಾಣುವ ಸಿಡಿಲು-ಮಿಂಚನ್ನು ವಜ್ರಾಯುಧದ ಪ್ರತೀಕವೆನ್ನುತ್ತಾರೆ. ಈ ಆಯುಧದಲ್ಲಿ ಭಗವಂತ ‘ವಜ್ರಃ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. ‘ವರ್ಜನಾತ್ ಇತಿ ವಜ್ರಃ’. ಶತ್ರುಗಳನ್ನು, ಸಮಸ್ತ ದೋಷವನ್ನು, ವರ್ಜನೆ ಮಾಡುವ ಭಗವಂತ ವಜ್ರಃ.

ಅಸ್ತ್ರದ ಬಗ್ಗೆ ಹೇಳಿದ ಕೃಷ್ಣ ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವನ್ನು ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತಾನೆ. ಪ್ರಾಣಿಗಳಲ್ಲೇ ಶ್ರೇಷ್ಠ ಪ್ರಾಣಿ-ಧೇನು(ಹಸು). ನಮ್ಮ ಜೀವಮಾನವಿಡೀ ನಮಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಠ ವಿಭೂತಿ ಹಸು. ಈ ಕಾರಣಕ್ಕಾಗಿ ಕೃಷ್ಣ ಬಾಲಕನಿದ್ದಾಗಿ ಗೋಪೂಜೆಯನ್ನು ಚಾಲ್ತಿಗೆ ತಂದ. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯವಲ್ಲ. ಯಾವುದರಿಂದಲೂ ಗುಣವಾಗದ ಚರ್ಮರೋಗಕ್ಕೆ ಗೋಮಯ ಮತ್ತು ಮೃತ್ತಿಕೆ(ಕೆಂಪು ಮಣ್ಣು)ಯಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. ಮನೆ ಮುಂದೆ ಸಗಣಿ ಸಾರಿಸುವುದರಿಂದ ಅಲ್ಲಿ ಕ್ರಿಮಿ ಕೀಟ ಇಲ್ಲವಾಗುತ್ತದೆ. ಗೋಮಯದಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ ಎಂದು ಮಹಾಭಾರತದಲ್ಲಿ ಬರುವ ಒಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. ಭಗವಂತ ಬಯಸಿದ್ದನ್ನು ಕೊಡುವ ‘ಕಾಮಧುಕ್’ ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯಾಗಿ ನಿಂತ.

ಈ ಪ್ರಪಂಚದಲ್ಲಿರುವ ಜೀವಿಗಳಲ್ಲಿ ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತ(Sexual desire)ವಾಗಿ ನಿಂತಿರುವವ- ಸಂತಾನವನ್ನೀಯುವ ಕಾಮದೇವ. ಈ ಕಾಮದೇವ(ಕಂದರ್ಪ)ನಲ್ಲಿ ಭಗವಂತನ ವಿಶಿಷ್ಠ ಶಕ್ತಿ ಅಡಗಿದೆ. ಸೃಷ್ಟಿಯಲ್ಲಿ ಸಂತಾನ ಕ್ರಿಯೆ ನಡೆಯುವುದಕ್ಕೋಸ್ಕರ ಅಧಮ್ಯ ಬಯಕೆಯನ್ನು ಎಲ್ಲರೊಳಗೆ ತುಂಬಿ, ಅಲ್ಲಿ ಭಗವಂತ ಕೂತ. ಈ ಕಾರಣದಿಂದ ಭಗವಂತನ ಅನುಗ್ರಹವಿಲ್ಲದೆ ಲೀಲಾಜಾಲವಾಗಿ ಯಾರೂ ಕೂಡ ಈ ಶಕ್ತಿಯಿಂದೀಚೆಗೆ ಬರಲಾರರು. ಬಲವಂತವಾಗಿ ಅದನ್ನು ಬಿಡಲಾಗದು. ಭಗವಂತ ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. ಮನುಷ್ಯನಿಗೆ ಅನೇಕ ರೀತಿಯ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ, ವಿಚಿತ್ರ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುವ ಭಗವಂತ ‘ಕಂದರ್ಪಃ’.

ಕಾಮದೇವ-ಮನ್ಮಥನ ನಂತರ ಕಾಮದ ಸಂಕೇತವಾದ ಸರ್ಪದ ಬಗ್ಗೆ ಕೃಷ್ಣ ವಿವರಿಸುತ್ತಾನೆ. ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು ಸರ್ಪ ಎನ್ನುತ್ತಾರೆ. ಸರೀಸೃಪಗಳಿಗೆಲ್ಲ ರಾಜ ವಾಸುಕಿ. ಭಗವಂತ ‘ವಾಸುಕಿಃ’ ನಾಮಕನಾಗಿ ನಿಂತು, ವಾಸುಕಿಗೆ ಈ ಸ್ಥಾನವನ್ನು ಕೊಟ್ಟ. ಭಗವಂತ ಇಲ್ಲದ ಸ್ಥಳವಿಲ್ಲ. ಎಲ್ಲೆಡೆ ವಾಸಮಾಡುವ ಭಗವಂತ ‘ವಾಸುಕಿಃ.’.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *