ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 27

ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗಳು ಹೀಗೆ ಬ್ರಹ್ಮ ತೇಜಸ್ಸು ಮತ್ತು ಅವರು ಮಾಡುವ ವೇದಾಧ್ಯಾಯನ, ತಪಸ್ಸು, ಯಜ್ಞ-ಎಲ್ಲದರ ಬಗ್ಗೆ ಹೇಳಿದ ಕೃಷ್ಣ, ಮುಂದಿನ ಶ್ಲೋಕದಲ್ಲಿ ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತಾನೆ.

ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ ।
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ ॥೨೭॥

ಉಚ್ಚೈಃಶ್ರವಸಮ್ ಅಶ್ವಾನಾಮ್ ವಿದ್ಧಿ ಮಾಮ್ ಅಮೃತ ಉದ್ಭವಮ್ ।

ಐರಾವತಮ್ ಗಜೇಂದ್ರಾಣಾಮ್ ನರಾಣಾಮ್ ಚ ನರಾಧಿಪಮ್—ಕುದುರೆಗಳಲ್ಲಿ ಕಡಲಲ್ಲಿ ಮೂಡಿಬಂದ ಉಚ್ಚೈಃಶ್ರವಸ್ಸನ್ನು, ಹಿರಿಯಾನೆಗಳಲ್ಲಿ ಐರಾವತವನ್ನು, ಮನುಜರಲ್ಲಿ ಒಡೆಯನಾದ ಅರಸನನ್ನು[ಉನ್ನತಕೀರ್ತಿ ಪಡೆದು ‘ಉಚ್ಚೈಃಶ್ರವಸ್’ ಎನ್ನಿಸಿ ಉಚ್ಚೈಃಶ್ರವದಲ್ಲಿರುವವನು, ಐರಾ=ಲಕ್ಷ್ಮಿಗೆ, ಅವನ=ರಕ್ಷಕನಾಗಿ ‘ಐರಾವತ’ ಎನ್ನಿಸಿ ಐರಾವತದಲ್ಲಿರುವವನು, ನರರಿಗೆಲ್ಲ ಒಡೆಯನಾದ್ದರಿಂದ ‘ನರಾಧಿಪ’ ಎನ್ನಿಸಿ ಅರಸನಲ್ಲಿರುವವನು] ನಾನೆಂದು ತಿಳಿ.

ಹಿಂದೆ ಸೇನೆಯಲ್ಲಿ ಮುಖ್ಯವಾದ ಅಂಗಗಳಾಗಿ ಕುದುರೆ ಮತ್ತು ಆನೆಗಳನ್ನು ರಾಜರು ಬಳಸುತ್ತಿದ್ದರು. ಕೃಷ್ಣ ಈ ಶ್ಲೋಕದಲ್ಲಿ ಕುದುರೆ, ಆನೆ ಮತ್ತು ರಾಜರಲ್ಲಿ ತನ್ನ ವಿಶೇಷ ವಿಭೂತಿಯನ್ನು ಹೇಳಿದ್ದಾನೆ. ಕೃಷ್ಣ ಹೇಳುತ್ತಾನೆ “ಸಮುದ್ರ ಮಥನದಲ್ಲಿ ಅಮೃತದ ಜೊತೆಗೆ ಹುಟ್ಟಿದ ಅಶ್ವ ‘ಉಚ್ಚೈಃಶ್ರವಸ್ಸು’ ಮತ್ತು ಹಿರಿಯಾನೆ ‘ಐರಾವತ’ ನಾನೆಂದು ತಿಳಿ” ಎಂದು. ಈ ಎರಡೂ ಪ್ರಾಣಿಗಳು ಬಹಳ ವಿಶೇಷ ಪ್ರಾಣಿಗಳು. ಕುದುರೆ ಮತ್ತು ಆನೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು. ಇವು ತನ್ನನ್ನು ಪ್ರೀತಿಯಿಂದ ಸಾಕುವ ಧನಿಗೆ ಎಂದೂ ಮೋಸ ಮಾಡುವುದಿಲ್ಲ. ಇನ್ನು ನರರಲ್ಲಿ ಶ್ರೇಷ್ಠ ‘ನರಾಧಿಪ’. ಮನುಕುಲಕ್ಕೆ ನಾಯಕರಾಗಿ ನಿಂತು ಧರ್ಮನಿಷ್ಠರಾಗಿ ಜನಪಾಲನೆ ಮಾಡುವ ಮುಖಂಡರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ, ಪರೀಕ್ಷಿತ ಇತ್ಯಾದಿ ರಾಜರನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.

ಇಲ್ಲಿ ಬಂದಿರುವ ಭಗವಂತನ ಹೆಸರು ಉಚ್ಚೈಃಶ್ರವಸ್ಸು, ಐರಾವತಃ ಮತ್ತು ನರಾಧಿಪಃ. ‘ಶ್ರವಸ್ಸು’ ಎಂದರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿರುವ ಕೀರ್ತಿ ಹೊಂದಿರುವ, ಮಹಾಜ್ಞಾನಿಯಾದ ಭಗವಂತ ಈ ಸೃಷ್ಟಿ-ಸ್ಥಿತಿ-ಸಂಹಾರವೆಂಬ ಮಹಾಕರ್ಮವನ್ನು ಸದಾ ಮಾಡುತ್ತಿರುವ ‘ಉಚ್ಚೈಃಶ್ರವಸ್ಸು’ . ಐರಾ ಎಂದರೆ ಭೂದೇವಿಯಲ್ಲಿ ಸನ್ನಿಹಿತಳಾಗಿರುವ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿರುವ ಭಗವಂತ ‘ಐರಾವತಃ’. ನರರಿಗೆ, ಸರ್ವ ಜೀವಜಾತಕ್ಕೆ ಅಧಿಪತಿಯಾಗಿ, ಅರಸರಲ್ಲಿ ಸನ್ನಿಹಿತನಾಗಿರುವ ಭಗವಂತ ‘ನರಾಧಿಪಃ’.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *