ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 24

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥೨೪॥

ಪುರೋಧಸಾಮ್ ಚ ಮುಖ್ಯಮ್ ಮಾಮ್ ವಿದ್ಧಿ ಪಾರ್ಥ ಬೃಹಸ್ಪತಿಮ್ ।

ಸೇನಾನೀನಾಮ್ ಅಹಮ್ ಸ್ಕಂದಃ ಸರಸಾಮ್ ಅಸ್ಮಿ ಸಾಗರಃ — ಓ ಪಾರ್ಥಾ, ಪುರೋಹಿತರಲ್ಲಿ ಹಿರಿಯನಾದ ಬೃಹಸ್ಪತಿ ನಾನು.[ಬೃಹತ್=ಹಿರಿಯರಿಗು, ಪತಿ=ಒಡೆಯನಾಗಿ ‘ಬೃಹಸ್ಪತಿ’ಯಲ್ಲಿದ್ದೇನೆ.] ದಳವಾಯಿಗಳಲ್ಲಿ ಸ್ಕಂದ ನಾನು.[ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ.] ನೀರಾಸರೆಗಳಲ್ಲಿ ಕಡಲು ನಾನು. [ಸಾ=ಸಾರವನ್ನು ಗರ=ಉಣ್ಣುವುದರಿಂದ, ‘ಸಾಗರ’ ಎನ್ನಿಸಿ ಕಡಲಿನಲ್ಲಿದ್ದೇನೆ.]

ನಾವು ಪೂಜಿಸುವ ಭಗವಂತನ ಪ್ರತೀಕವನ್ನು ಹೇಳಿದಮೇಲೆ ಎಲ್ಲವುದಕ್ಕೂ ಮುಖ್ಯವಾಗಿ ಬೇಕಾಗಿರುವ ಪುರೋಹಿತರ ಬಗ್ಗೆ ಇಲ್ಲಿ ಹೇಳಲಾಗಿದೆ. ಕೃಷ್ಣ ಹೇಳುತ್ತಾನೆ “ಪುರೋಹಿತರಲ್ಲಿ ನನ್ನ ಸನ್ನಿಧಾನವಿದೆ” ಎಂದು. ಋಗ್ವೇದದ ಪ್ರಥಮ ಸೂಕ್ತದಲ್ಲಿ ಹೇಳುವಂತೆ: ” ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |” ಇಲ್ಲಿ ಹೇಳುವ ‘ಹೋತಾ’ ಋಗ್ವೇದದ ಪುರೋಹಿತ. ಹಿಂದೆ ಒಂದು ಯಾಗ ಮಾಡುವಾಗ ಅಲ್ಲಿ ಹದಿನಾರು ಮಂದಿ ಪುರೋಹಿತರಿರುತ್ತಿದ್ದರು. ಋಗ್ವೇದಕ್ಕೆ: ‘ಹೋತಾ’ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಮೈತ್ರಾವರುಣ, ಅಚ್ಛಾವಾಕ, ಗ್ರಾಮಸ್ತುತ್) ಸಹಾಯಕರು. ಯಜುರ್ವೇದಕ್ಕೆ: ಅಧ್ವರ್ಯು ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರತಿಪ್ರಸ್ಥುತಾ, ನೇಷ್ಟಾ, ಉನ್ನೇತಾ) ಸಹಾಯಕರು. ಸಾಮವೇದಕ್ಕೆ: ಉದ್ಗಾತಾ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರಸ್ತೋತಾ, ಪ್ರತಿಹರ್ತಾ, ಸುಬ್ರಹ್ಮಣ್ಯ) ಸಹಾಯಕರು. ಈ ಎಲ್ಲರ ಮೇಲ್ವಿಚಾರಕರಾಗಿ, ಯಜ್ಞದಲ್ಲಿ ಯಾವುದೇ ಲೋಪದೋಷ ಬರದಂತೆ ನೋಡಿಕೊಳ್ಳುವವರು ಸರ್ವವೇದ ಪಾರಂಗತ ಪ್ರಧಾನ ಪುರೋಹಿತರು. ಅವರಿಗೆ ‘ಬ್ರಹ್ಮಾ’ ಎಂದು ಹೆಸರು. ಇವರಿಗೂ ಮೂರು ಮಂದಿ(ಬ್ರಾಹ್ಮಾಣಾಇಚ್ಛಂಸಿ, ಅಗ್ನೀಧ್ರ, ಪೋತಾ) ಸಹಾಯಕರು. ಹೀಗೆ ಭಗವಂತನ ವಿಶೇಷ ಸನ್ನಿಧಾನವಿರುವ ಹದಿನಾರು ಮಂದಿ ಪುರೋಹಿತರು ಸೇರಿ ಯಜ್ಞ ನೆರವೇರಿಸುತ್ತಿದ್ದರು. ಪುರೋಹಿತರ ಸ್ಥಾನ ಸಮಾಜದಲ್ಲಿ ಅತ್ಯಂತ ಹಿರಿದು. ಆದರೆ ಇಂದಿನ ಪುರೋಹಿತರು ಹಿಂದಿನಷ್ಟು ಸ್ಥಾನಮಾನವನ್ನು ಸಮಾಜದಲ್ಲಿ ಗಳಿಸುತ್ತಿಲ್ಲ. ಪುರೋಹಿತರು ನಮಗೆ ಹಿತವಾದುದ್ದನ್ನು ನಮ್ಮಿಂದ ಮೊದಲೇ ತಿಳಿದು ನಮ್ಮನ್ನು ತಿದ್ದಿ ಆ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವವರು. ನಮ್ಮ ಅಭಿವೃದ್ಧಿಗೆ ಪೂರಕವಾಗಿರತಕ್ಕಂತಹ ಕ್ರಿಯೆಗಳನ್ನು ಮಾಡಿ ನಾವು ಅಭಿವೃದ್ಧಿಹೊಂದುವಂತೆ ಮುಂಜಾಗ್ರತೆ ಕೊಡುವ ಗುರುಸ್ಥಾನದಲ್ಲಿರುವ ಸಲಹೆಗಾರರು. ಇಡೀ ಸಮಾಜಕ್ಕೆ ಇವರು ಮಾರ್ಗದರ್ಶಕರು. ಪೌರೋಹಿತ್ಯ ಬಹಳ ಜವಾಬ್ದಾರಿಯುತ ಕೆಲಸ. ಒಂದು ಧಾರ್ಮಿಕ ನಡೆಯಲ್ಲಿ ಸಂಶಯಬಂದಾಗ ಸಮಾಜಕ್ಕೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಪುರೋಹಿತನ ಜವಾಬ್ದಾರಿ ಬಹಳ ದೊಡ್ಡದು. ಮಂತ್ರ ಹೇಳುವಾಗ ಯಾವುದಾದರು ಲೋಪವಾದರೆ, ತಪ್ಪು ಮಾಡಿದರೆ, ಅದಕ್ಕೆ ಪುರೋಹಿತ ಕಾರಣನಾಗುತ್ತಾನೆ. ಆದ್ದರಿಂದ ಭಗವಂತನ ವಿಶೇಷ ಸನ್ನಿಧಾನ ಅಲ್ಲಿದೆ. ಭೂಮಿಯ ಎಲ್ಲಾ ಪುರೋಹಿತರಿಗಿಂತ ದೊಡ್ಡ ಪುರೋಹಿತರು ಇಬ್ಬರು. ದೈತ್ಯ ಪುರೋಹಿತರಾದ ಶುಕ್ರಾಚಾರ್ಯರು ಮತ್ತು ದೇವತೆಗಳ ಪುರೋಹಿತರಾದ ಬೃಹಸ್ಪತಿಯಾಚಾರ್ಯರು. ಬೃಹಸ್ಪತಿ ದೇವತಾ ತಾರತಮ್ಯದಲ್ಲಿ ಹತ್ತನೇ ಕಕ್ಷೆಯಲ್ಲಿದ್ದಾರೆ. ಇವರು ದೇವಲೋಕದಲ್ಲಿ ದೇವತೆಗಳಿಗೆ ಮತ್ತು ದೇವೇಂದ್ರನಿಗೆ ಸಲಹೆಗಾರರು. ದೇವತೆಗಳಿಗೆ ಪುರೋಹಿತರಾಗಿರುವ ಇವರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ದೇವತಾ ತಾರತಮ್ಯದಲ್ಲಿ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹತ್ತನೇ ಕಕ್ಷೆಯಲ್ಲಿರುವ ಬೃಹಸ್ಪತಿಯಾಚಾರ್ಯರಿಗೆ ನಮಸ್ಕರಿಸಿ ಅವರ ಮಾರ್ಗದರ್ಶನದಂತೆ ನಡೆಯಲು ಅವರಲ್ಲಿರುವ ಭಗವಂತನ ಸನ್ನಿಧಾನವೇ ಕಾರಣ. ಇದನ್ನು ನೆನಪಿಸುವಂತೆ ಕೃಷ್ಣ ದೇವೇಂದ್ರನ ಅವತಾರವಾದ ಅರ್ಜುನನನ್ನು ಇಲ್ಲಿ ‘ಪಾರ್ಥಾ’ ಎಂದು ಸಂಬೋಧಿಸಿದ್ದಾನೆ.

ಇನ್ನೊಂದು ಮುಖದಲ್ಲಿ ನೋಡಿದರೆ ವೇದಗಳಲ್ಲಿ ಬೃಹಸ್ಪತಿ ಎಂದರೆ ಪ್ರಾಣದೇವರು. ಸರಸ್ವತಿ ಭಾರತಿಯರ ಪತಿ-ಬೃಹಸ್ಪತಿಗಳು. ಇವರೇ ಬ್ರಹ್ಮ-ವಾಯು. ಇವರು ಸಮಸ್ತ ದೇವತೆಗಳಿಗೂ ಪುರೋಹಿತರು. ಭಗವಂತ ಪ್ರಾಣದೇವರಲ್ಲಿ ಗಾನದ(ಕಂಠಸಿರಿ) ವಿಶೇಷ ವಿಭೂತಿಯಾಗಿ ನೆಲೆಸಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹಸ್ಪತಿ’. ಬೃಹತ್ ಅಂದರೆ ಹಿರಿಯರು, ಪತಿ ಅಂದರೆ ಒಡೆಯ. ಬ್ರಹ್ಮಾದಿ ಸಕಲ ದೇವತೆಗಳಿಗೂ ಒಡೆಯನಾದ, ಪುರೋಹಿತರಿಗೂ ಪುರೋಹಿತ ಭಗವಂತ ‘ಬೃಹಸ್ಪತಿ’.

ಅಧ್ಯಾತ್ಮ ಯೋಧರಾದ ಪುರೋಹಿತರ ಬಗ್ಗೆ ಹೇಳಿದ ಕೃಷ್ಣ, ಈಗ ಯುದ್ಧದಲ್ಲಿ ವಿಜಯ ತಂದುಕೊಟ್ಟು ರಕ್ಷಣೆ ಮಾಡುವ ಯೋಧರಲ್ಲಿ ತನ್ನ ವಿಶೇಷ ವಿಭೂತಿಯನ್ನು ವಿವರಿಸುತ್ತಾನೆ. ದೇವತೆಗಳು ಬೃಹಸ್ಪತಿಯಾಚಾರ್ಯರ ಮಾರ್ಗದರ್ಶನದಲ್ಲಿ ಸಂಪಾದಿಸಿದ ಸಂಪತ್ತನ್ನು ಅಸುರರು ಅಪಹರಿಸಿದಾಗ, ಅವರ ವಿರುದ್ಧ ಹೋರಾಡಿ ಅದನ್ನು ಹಿಂದಕ್ಕೆ ತಂದುಕೊಟ್ಟವ ಸ್ಕಂದಃ. ಭಗವಂತ ‘ಸ್ಕಂದಃ ನಾಮಕನಾಗಿ ಸೇನಾನಿಯಲ್ಲಿ ನಿಂತು ನಡೆಸುತ್ತಾನೆ. ಸ್ಕಂದನಿಗೆ ಸೇನಾಧಿಪತಿಯಾಗಿ ತಾರಕಾಸುರನನ್ನು ಸಂಹಾರ ಮಾಡುವಂತಹ ಶಕ್ತಿ ಕೊಟ್ಟಂತಹ, ಅಂತರಂಗದ ಒಳಗೆ ಕುಳಿತ ಅಂತರ್ಯಾಮಿ ತತ್ವ-ಭಗವಂತ. ಸೇನಾನಿಯ ಬಗ್ಗೆ ಹೇಳುವಾಗ ಇಲ್ಲಿ ಸೇನಾನಿಯಾಗಿ ಕೀರ್ತಿ ಪಡೆದ ಕರ್ನಾಟಕದ ಹೆಮ್ಮೆಯ ಪುತ್ರ ‘ಕಾರ್ಯಪ್ಪ’ ಅವರನ್ನು ನೆನೆಸಿಕೊಳ್ಳಬಹುದು. ಭಗವಂತನ ವಿಶೇಷ ಸನ್ನಿದಾನದಿಂದಾಗಿ ಸೇನಾಧಿಪತಿಯಲ್ಲಿ ಅಂಥಹ ವಿಶೇಷ ಶಕ್ತಿ ಬರುತ್ತದೆ.

ಇಲ್ಲಿ ಬಂದಿರುವ ಭಗವಂತನ ನಾಮ ಸ್ಕಂದಃ. ‘ಸ್ಕಂದಃ’ ಎಂದರೆ ಇಡೀ ಜಗತ್ತನ್ನು ಸಂಹಾರ ಮಾಡುವ ಶಕ್ತಿ. “ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ” ಎಂದಿದ್ದಾನೆ ಕೃಷ್ಣ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಸರಸಾಮಸ್ಮಿ ಸಾಗರಃ” ಎಂದು. ಭೂಮಿಯ ಮೇಲಿನ ಅಪಾರ ಸಂಪತ್ತಿನ ತಾಣ ಮೇರು ಪರ್ವತವಾದರೆ, ರಸದಿಂದ ಸಹಿತವಾದ, ಜಲಾಶಯಗಳಲ್ಲಿ ಬಹಳ ದೊಡ್ಡದಾಗಿರುವುದು ಸಾಗರ. “ಅದರಲ್ಲಿ ವಿಭೂತಿಯಾಗಿ ನಾನಿದ್ದೇನೆ” ಎನ್ನುತ್ತಾನೆ ಕೃಷ್ಣ. ಭೂಮಿಯ ಯಾವಭಾಗದಲ್ಲಿ ಬಾವಿ ತೋಡಿದರೂ ಸಿಹಿ ನೀರು. ಆದರೆ ಅಪರಂಪಾರವಾದ ಸಾಗರದ ನೀರು ಉಪ್ಪು. ಇದು ಏಕೆ ಎಂದು ನಮಗೆ ಗೊತ್ತಿಲ್ಲ. ರಷ್ಯದ ವಿಖ್ಯಾತ ಮನಃಶಾಸ್ತ್ರಜ್ಞ ವಿಲಿಕೋ^ಸ್ಕಿ(Velikovsky) ತನ್ನ ‘Worlds in Collision’ ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ: “ನಾವು ವಿಶ್ವದ ವಿಸ್ಮಯವನ್ನೆಲ್ಲ ಭೇದಿಸಿದ ಭ್ರಮೆಯಲ್ಲಿದ್ದೇವೆ, ಆದರೆ ನಮಗೆ ಏನೂ ಗೊತ್ತಿಲ್ಲ” ಎಂದು. ಇಂದು ಸಮುದ್ರದ ನೀರು ಉಪ್ಪು ಏಕೆ, ಬಾವಿಯ ನೀರು ಸಿಹಿ ಏಕೆ ಎನ್ನುವುದೂ ನಮಗೆ ಗೊತ್ತಿಲ್ಲ. ಭಗವಂತ ಇತರ ಎಲ್ಲಾ ರಸವನ್ನು ಹಣ್ಣಿನಲ್ಲಿಟ್ಟ. ಆದರೆ ರಸದ-ರಸ ಲವಣರಸ ಉಪ್ಪನ್ನು ಮಾತ್ರ ಯಾವ ಹಣ್ಣಿನಲ್ಲೂ ಇಡದೆ-ಸಮುದ್ರದ ನೀರಿನಲ್ಲಿಟ್ಟ. ಈ ಸಮುದ್ರ ಒಂದು ವಿಸ್ಮಯ. ಭೂಮಿ ಮೇಲಿನ ಪ್ರಾಣಿ ವೈವಿದ್ಯಕ್ಕಿಂತ ಹೆಚ್ಚು ವೈವಿದ್ಯ ಸಮುದ್ರದಲ್ಲಿದೆ. ಭಗವಂತ ಸಮುದ್ರವನ್ನು ಸೃಷ್ಟಿ ಮಾಡಿ ಅದರಲ್ಲಿ ಸಾಗರಃ ಶಬ್ದವಾಚ್ಯನಾಗಿ ತುಂಬಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ಸಾಗರಃ. ಸಾರ+ಗರ-ಸಾಗರ. ಸಾರವಾಗಿರುವುದನ್ನು ಸ್ವೀಕರಿಸುವ ಭಗವಂತ ಸಾರಃ. ಎಲ್ಲಕ್ಕಿಂತ ಮಹತ್ತಾದ ಸಾರ-ಲವಣ, ಅದರಲ್ಲಿ ತುಂಬಿರುವ ಭಗವಂತ ಸಾಗರಃ. ಸಾರಂ ಗರತಿ ದದಾತೀತಿ ಸಾಗರಃ. ಜಗತ್ತಿಗೆ ಜೀವನದ ಸಾರ ಸರ್ವಸ್ವವನ್ನು ಕೊಡುವ ಭಗವಂತ ಸಾಗರಃ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *