ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 23

ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ ।
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ॥೨೩॥

ರುದ್ರಾಣಾಮ್ ಶಂಕರಃ ಚ ಅಸ್ಮಿ ವಿತ್ತ ಈಶಃ ಯಕ್ಷರಕ್ಷಸಾಮ್ ।

ವಸೂನಾಮ್ ಪಾವಕಃ ಚ ಅಸ್ಮಿ ಮೇರುಃ ಶಿಖರಿಣಾಮ್ ಅಹಮ್—ರುದ್ರರಲ್ಲಿ [ಹನ್ನೊಂದು ಮಂದಿ] ಪ್ರಧಾನ ರುದ್ರ ನಾನು. [ಶಂ=ಸುಖವನ್ನು, ಕರ=ಕರುಣಿಸುವುದರಿಂದ ‘ಶಂಕರ’ ಎನ್ನಿಸಿ ಶಂಕರನಲ್ಲಿದ್ದೇನೆ.] ಯಕ್ಷ-ರಾಕ್ಷಸರ ಪಡೆಯ ಒಡೆಯ ಕುಬೇರ [ವಿತ್ತ=ಸಿರಿಗೆ, ಈಶ=ಒಡೆಯನಾದ್ದರಿಂದ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನಿತ್ತವನು] ನಾನು. [ಎಂಟು ಮಂದಿ] ವಸುಗಳಲ್ಲಿ ಅಗ್ನಿದೇವ ನಾನು. [ಪಾವನಗೊಳಿಸುವುದರಿಂದ ‘ಪಾವಕ’ ಎನ್ನಿಸಿ ಅಗ್ನಿಯಲ್ಲಿದ್ದೇನೆ.] ಚೆಲುಕೋಡಿನ ಬೆಟ್ಟಗಳಲ್ಲಿ ಮೇರು ನಾನು. [ಈರು=ಬೇರೊಬ್ಬ ಪ್ರೇರಕ, ಮಾ=ಇರದ್ದರಿಂದ ‘ಮೇರು’ ಎನ್ನಿಸಿ ಮೇರು ಗಿರಿಯಲ್ಲಿದ್ದೇನೆ.]

ಮನಸ್ಸಿನಲ್ಲಿನ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಮನಸ್ಸಿನ ಅಭಿಮಾನಿಯಾದ ಶಿವನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ: “ರುದ್ರರಲ್ಲಿ ಶಂಕರ ನಾನು” ಎಂದು. ರುದ್ರರು ಹನ್ನೊಂದು ಮಂದಿ. ರೈವತ, ಓಜ, ಭವ, ಭೀಮ, ವಾಮದೇವ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುದ್ನಿ, ವಿರೂಪಾಕ್ಷ, ಮತ್ತು ಗಣಪ್ರಧಾನನಾದ ಮಹಾದೇವ. (ಈ ಏಕಾದಶ ರುದ್ರರಿಗೆ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರು ಉಲ್ಲೇಖ ಮಾಡಿದ್ದಾರೆ). ನಮ್ಮ ಮನಸ್ಸನ್ನು ನಿಯಂತ್ರಿಸುವ ‘ರುದ್ರ’-ಮಹಾದೇವ ಅಥವಾ ಶಿವ. ಆತನಿಗೆ ‘ಶಂಕರ’ ಎಂದು ಹೆಸರು. ರುದ್ರ ಎಂದರೆ ರೋದಯತಿ ಇತಿ ರುದ್ರಃ-ದುಃಖ ಕೊಡುವವನು ಎನ್ನುವ ಒಂದು ಅರ್ಥ. ಭಗವಂತ ದುಃಖ ಕೊಡುವುದು ಕೇವಲ ದುಷ್ಟರಿಗೆ. ಇನ್ನೊಂದು ಅರ್ಥದಲ್ಲಿ ನೋಡಿದರೆ- ರುಜಂ ದ್ರಾವಯತಿ ಇತಿ ರುದ್ರಃ. ಅಂದರೆ ನಮ್ಮಲ್ಲಿರುವ ರೋಗವನ್ನು ಪರಿಹಾರ ಮಾಡಿ ಸುಖಕೊಡುವವನು. ಮೂಲತಃ ರೋಗ ಮಾನಸಿಕ. ನಮ್ಮ ಮನಸ್ಸು ದೃಢವಾಗಿದ್ದರೆ ಕಾಯಿಲೆ ಬರುವುದಿಲ್ಲ. ಒಂದು ವೇಳೆ ಕಾಯಿಲೆ ಬಂದರೆ ಅದನ್ನು ಎದುರಿಸಬಲ್ಲೆ ಎನ್ನುವ ದೃಢಮನಸ್ಸು ಇದ್ದರೆ-ಮನಸ್ಸೇ ಆ ರೋಗವನ್ನು ಗುಣಪಡಿಸಬಲ್ಲದು.

‘ಶಂಕರ’ ಎಂದರೆ ಸುಖವನ್ನು, ಸಂತೋಷವನ್ನು ಕೊಡುವವ. ಆರೋಗ್ಯವಂತ ದೇಹವೇ ಜೀವನದಲ್ಲಿ ಬಹಳ ದೊಡ್ಡ ಸುಖ. ಯಾವುದೇ ಪುಣ್ಯ ಕರ್ಮ ಸಾಧನೆ ಮಾಡಲು ಆರೋಗ್ಯವಂತ ದೇಹ ಬೇಕು. ‘ರುದ್ರ’ ಶರೀರಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಕಾರಣ. ನಮ್ಮ ಮನಸ್ಸಿನಲ್ಲಿ ಕೂತು ಮಾನಸಿಕ ತುಮುಲವನ್ನು ಹೋಗಲಾಡಿಸಿ, ಆರೋಗ್ಯವಂತ ಶರೀರ ಕೊಟ್ಟು, ಆನಂದ ಕೊಡುವವ ರುದ್ರ. ಋಗ್ವೇದದ ಶಿವಸ್ತುತಿಯಲ್ಲಿ ಶಿವನನ್ನು “ಭಿಶಕ್ತಮಾಂ ತ್ವ ಭಿಶಜಮ್” ಎಂದು ಸ್ತುತಿಸಿದ್ದಾರೆ. ಅಂದರೆ “ನೀನು ವೈದ್ಯರ ವೈದ್ಯ” ಎಂದರ್ಥ. ಈ ಕಾರಣಕ್ಕಾಗಿ ಶಿವನನ್ನು ‘ವೈದ್ಯನಾಥ’ ಎಂದೂ ಕರೆಯುತ್ತಾರೆ.

ರುದ್ರನನ್ನು ಮಹಾದೇವ ಎಂದು ಕರೆಯಲು ಅನೇಕ ಕಾರಣವಿದೆ. ಇಲ್ಲಿ ‘ದೇವ’ ಅಂದರೆ ಇಂದ್ರಿಯ.(ದೇವತೀತಿ ದೇವಂ ಇಂದ್ರಿಯಂ). ಶಿವ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಎಲ್ಲರಿಗಿಂತ ದೊಡ್ಡವ. ದೇವತಾ ತಾರತಮ್ಯದಲ್ಲಿ ನೋಡಿದರೆ-ಹನ್ನೊಂದು ಮಂದಿ ರುದ್ರರಲ್ಲಿ ಹತ್ತುಮಂದಿ ರುದ್ರರು ಹದಿನೆಂಟನೇ ಕಕ್ಷೆಯಲ್ಲಿದ್ದರೆ, ಶಿವ ಅದಕ್ಕಿಂತ ಬಹಳ ಎತ್ತರದಲ್ಲಿ ಐದನೇ ಕಕ್ಷೆಯಲ್ಲಿದ್ದಾನೆ. ಶಿವ ಭಗವಂತನ ಸಂಹಾರ ಕರ್ಮದಲ್ಲಿ ವಾಯುದೇವರೊಂದಿಗೆ ಅಂಗಭೂತನಾಗಿ ಸಹಾಯಕಾರಿಯಾಗಿರುವ ಬಹಳ ದೊಡ್ಡ ಶಕ್ತಿ. ಭಗವಂತ ‘ಶಂಕರ’ ನಾಮಕನಾಗಿ ಶಿವನಲ್ಲಿ ನಿಂತಿದ್ದಾನೆ. ನಮ್ಮನ್ನು ಭಗವಂತನ ಉಪಾಸನೆಯ ದಾರಿಯಲ್ಲಿ ಕರೆದೊಯ್ದು, ಭಗವತ್ ಸಾಕ್ಷಾತ್ಕಾರಕ್ಕೆ ಮನಸ್ಸನ್ನು ಅಣಿಮಾಡುವವರೇ ರುದ್ರದೇವರು. ಆದ್ದರಿಂದ ಇದು ಭಗವಂತನ ಬಹಳ ದೊಡ್ಡ ವಿಭೂತಿ.

ಇಲ್ಲಿ ಬಂದಿರುವ ಭಗವಂತನ ನಾಮ ‘ಶಂಕರಃ’. ‘ಶಂ’ ಎಂದರೆ ಸುಖ, ‘ಕರ’ ಎಂದರೆ ಕರುಣಿಸುವವ. ಸ್ವಯಂ ಆನಂದ ಸ್ವರೂಪನಾಗಿದ್ದು, ದುಃಖಮಯವಾದ ಸಂಸಾರವನ್ನು ಖಂಡಿಸಿ- ನಮಗೆ ಮುಕ್ತಿ ಕೊಡುವ ಭಗವಂತ ‘ಶಂಕರಃ’.

ನಮ್ಮ ಅಂತರಂಗದ ಸಂಪತ್ತಿನ ಅಭಿಮಾನಿಯಾದ ಶಿವನ ಬಗ್ಗೆ ಹೇಳಿದ ಕೃಷ್ಣ, ಮುಂದೆ ನಮಗೆ ಬಾಹ್ಯವಿತ್ತವನ್ನು ಕೊಡುವ ಕುಬೇರನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಮ್ಮ ದೇಹದ ಅಭಿಮಾನಿ ಮತ್ತು ಬಾಹ್ಯವಿತ್ತದ ಅಭಿಮಾನಿ ಕುಬೇರ. ಆತನ ಆಡಳಿತದಲ್ಲಿರುವವರು ಯಕ್ಷರು ಮತ್ತು ರಾಕ್ಷಸರು. ಯಕ್ಷರು ಎಂದರೆ ನರ ಮಾಂಸವನ್ನು ನಿರ್ದಯವಾಗಿ ಭಕ್ಷಣೆ ಮಾಡುವವರು. ರಾಕ್ಷಸರು ಯಕ್ಷರಿಗಿಂತ ಉತ್ತಮರು. ಆದರೆ ಇವರೂ ಕ್ರೂರಿಗಳು. ಇವರಿಂದ ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.

ಇಲ್ಲಿ ಬಂದಿರುವ ಭಗವಂತನ ನಾಮ ‘ವಿತ್ತೇಶಃ’. ವಿತ್ತ ಎಂದರೆ ಸಿರಿ, ಈಶ ಎಂದರೆ ಒಡೆಯ. ಭಗವಂತ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು, ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನು ಕೊಟ್ಟ ಮತ್ತು ಆತನನ್ನು ಬಾಹ್ಯ ಸಂಪತ್ತಿನ ಒಡೆಯನನ್ನಾಗಿ ಮಾಡಿದ. ಇದು ಕುಬೇರನಲ್ಲಿ ಭಗವಂತನ ವಿಶೇಷ ವಿಭೂತಿ.

ವೇದದಲ್ಲಿ ಬರುವ ದೇವತಾಗಣವನ್ನು ಪರಿಗಣನೆ ಮಾಡುವಾಗ, ಆದಿತ್ಯ-ವಸು-ರುದ್ರಗಣ ಮೂರು ಜೊತೆಜೊತೆಯಾಗಿ ಬರುತ್ತವೆ. ಮೂರು ಹೊತ್ತಿನ ಸವನದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಕೂಡ ಈ ದೇವತಾಗಣದಲ್ಲಿರುವ ಭಗವಂತನಿಗೆ. ಅಷ್ಟವಸುಗಳಲ್ಲಿ ಇರತಕ್ಕ ಭಗವಂತನಿಗೆ ಪ್ರಾತಃಕಾಲದಲ್ಲಿ ಅಷ್ಟಾಕ್ಷರ ಮಂತ್ರ ಗಾಯತ್ರಿ ಮೂಲಕ ಆಹುತಿ ಕೊಡುತ್ತಾರೆ. ಮದ್ಯಾಹ್ನದ ಸವನ ಏಕಾದಶ ರುದ್ರರಿಗೆ ಸಂಬಂಧಪಟ್ಟಿದ್ದು. ಇದಕ್ಕಾಗಿ ಇಲ್ಲಿ ಹನ್ನೊಂದು ಅಕ್ಷರದ ‘ತ್ರಿಷ್ಟುಪ್’ ಬಳಸುತ್ತಾರೆ. ಸಂಜೆಯ ಸವನ ದ್ವಾದಶಾದಿತ್ಯರಿಗೆ ಸಂಬಂಧಪಟ್ಟಿದ್ದು. ಅದಕ್ಕಾಗಿ ಅಲ್ಲಿ ದ್ವಾದಶಾಕ್ಷರದ ‘ಜಗತಿ’ಯನ್ನು ಬಳಸುತ್ತಾರೆ. ಕೃಷ್ಣ ಆದಿತ್ಯ ಮತ್ತು ರುದ್ರರ ಬಗ್ಗೆ ಹೇಳಿದ. ಈಗ ಇಲ್ಲಿ ವಸುಗಳ ಬಗ್ಗೆ ಹೇಳುತ್ತಾ ಹೇಳುತ್ತಾನೆ: “ವಸುಗಳಲ್ಲಿ ‘ಅಗ್ನಿ’ ನಾನು” ಎಂದು. ವಸುಗಳು ಎಂಟು ಮಂದಿ. ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ ದೋಷ, ವಸ್ತು ಮತ್ತು ವಿಭಾವಸು. ಇವರಿಗೆ ಇನ್ನೂ ಅನೇಕ ಹೆಸರಿದೆ. ಐದನೆಯವನಾದ ಅಗ್ನಿಗೆ ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ ಹೆಸರಿದೆ. ಇತರ ವಸುಗಳೆಲ್ಲರೂ ದೇವತಾ ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದರೆ, ‘ಅಗ್ನಿ’ ಅವರಿಗಿಂತ ಎತ್ತರದಲ್ಲಿ ಹದಿನೈದನೆ ಕಕ್ಷೆಯಲ್ಲಿದ್ದಾನೆ. ಭೂ ಸ್ತರದಲ್ಲಿ ಭಗವಂತನನ್ನು ಆರಾಧನೆ ಮಾಡುವ ಶ್ರೇಷ್ಠ ಪ್ರತೀಕ ಅಗ್ನಿ. ಇಡೀ ಜಗತ್ತನ್ನು ಪಾವನಗೊಳಿಸುವ ಶಕ್ತಿಯಾದ ಭಗವಂತ ಅಗ್ನಿಯಲ್ಲಿ ‘ಪಾವಕಃ’ ನಾಮಕನಾಗಿ ಕೂತು ಆತನಿಗೆ ಈ ಶ್ರೇಷ್ಠ ಸ್ಥಾನವನ್ನು ಕೊಟ್ಟ.

ಅಗ್ನಿಯಲ್ಲಿ ಭಗವಂತನ ತೇಜಸ್ಸಿದೆ. ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ಈ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಅಗ್ನಿಯ ಸಂಪರ್ಕಕ್ಕೆ ಬರುವ ವಸ್ತು ಪಾವನವಾಗುತ್ತದೆ. ಅಗ್ನಿಯಲ್ಲಿದ್ದು ಅಗ್ನಿಗೆ ಇಂತಹ ತೇಜಸ್ಸನ್ನು ಕೊಟ್ಟ ಭಗವಂತ ಜಗತ್ತನ್ನು ಪಾವನಗೊಳಿಸುವ ಪಾವಕಃ. ಎಲ್ಲರನ್ನು ಪಾವನಗೊಳಿಸುವ ಭಗವಂತ ದೇವತೆಗಳಿಗೂ ಕೂಡಾ ಅವಕ(ರಕ್ಷಕ).

ವಿತ್ತೇಶ ಕುಬೇರನ ಬಗ್ಗೆ ಹೇಳಿದ ಕೃಷ್ಣ ಮುಂದೆ ಭೂಮಿಯಲ್ಲಿ ಸಂಪತ್ತಿನ ನೆಲೆಯಾದ ಮೇರು ಪರ್ವತದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮೇರು ಪರ್ವತವನ್ನು ಹೇಮಾದ್ರಿ(ಚಿನ್ನದ ಬೆಟ್ಟ) ಎಂದು ಕರೆಯುತ್ತಾರೆ. ಅದು ವಸುಗಳ ನೆಲೆ. ಕೃಷ್ಣ ಹೇಳುತ್ತಾನೆ: “ಬೆಟ್ಟಗಳಲ್ಲಿ ಮೇರು ನಾನು” ಎಂದು. ಹಿಮಾಲಯದಲ್ಲಿನ ಪರ್ವತ ಶ್ರೇಣಿಯಲ್ಲಿರುವ, ಮನುಷ್ಯ ಮಾತ್ರಕ್ಕೆ ಗೊತ್ತಿರದ ಸಂಪತ್ತಿನ ಬಗ್ಗೆ ಸ್ವಾಮಿರಾಮ್ ಅವರು “ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್ “ ಎನ್ನುವ ಪುಸ್ತಕದಲ್ಲಿ ತಮ್ಮ ಸ್ವತಃ ಅನುಭವವನ್ನು ಹಂಚಿಕೊಂಡಿದ್ದಾರೆ. ಯುದ್ಧದಲ್ಲಿ ಪೂರ್ಣ ಸಂಪತ್ತು ನಾಶವಾದಾಗ ಧರ್ಮರಾಯ ಬೆಟ್ಟಗಳ ಸಾಲಿನಲ್ಲಿ ಹುದುಗಿಟ್ಟ ಸಂಪತ್ತನ್ನು ತರಿಸಿ ಯಜ್ಞ ಮಾಡಿದ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ಈ ವಿಚಾರ ಹಿಮಾಲಯದಲ್ಲಿ ತಪಸ್ಸು ಮಾಡುವ ಕೆಲವು ಯೋಗಿಗಳಿಗೂ ತಿಳಿದಿದೆ. ಇಂಥಹ ಸಂಪತ್ತಿನ ನೆಲೆ ಮೇರು.

ಇಲ್ಲಿ ಬಂದಿರುವ ಭಗವಂತನ ನಾಮ ‘ಮೇರುಃ’. ಮಾ+ಈರು-ಮೇರು. ಸಮಸ್ತ ಚೈತನ್ಯದಲ್ಲಿ ಸರ್ವ ಶ್ರೇಷ್ಠಳಾದ ತಾಯಿ ಮಹಾಲಕ್ಷ್ಮಿಗೂ ಸಹ ಪ್ರೇರಕನಾಗಿ ನಿಂತಿರುವವ ಭಗವಂತ. ಇಂತಹ ಭಗವಂತನಿಗೆ ಇನ್ನೊಬ್ಬ ಪ್ರೆರಕನಿಲ್ಲ. ಆದ್ದರಿಂದ “ಮೇರುಃ” ಭಗವಂತನ ಅನ್ವರ್ಥನಾಮ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *