ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 22

ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ ।
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ॥೨೨॥

ವೇದಾನಾಮ್ ಸಾಮ ವೇದಃ ಅಸ್ಮಿ ದೇವಾನಾಮ್ ಅಸ್ಮಿ ವಾಸವಃ ।

ಇಂದ್ರಿಯಾಣಾಮ್ ಮನಃ ಚ ಅಸ್ಮಿ ಭೂತಾನಾಮ್ ಅಸ್ಮಿ ಚೇತನಾ –ವೇದಗಳಲ್ಲಿ ಸಾಮವೇದ ನಾನು. [ಸಾಮ= ಎಲ್ಲೆಡೆಯು ಸಮನಾಗಿದ್ದು, ವೇದ= ಜ್ಞಾನರೂಪನಾದ್ದರಿಂದ ‘ಸಾಮವೇದ’ ಎನ್ನಿಸಿ ಸಾಮವೇದದಲ್ಲಿದ್ದೇನೆ.] ದೇವತೆಗಳಲ್ಲಿ ಇಂದ್ರ ನಾನು. [ವಾಸ= ಎಲ್ಲ ನೆಲೆಗಳಲ್ಲು, ವ=ಇರುವವನಾಗಿ- ‘ವಾಸವ’ ಎನ್ನಿಸಿ ದೇವೇಂದ್ರನಲ್ಲಿದ್ದೇನೆ.] ಇಂದ್ರಿಯಗಳಲ್ಲಿ ಮನಸ್ಸು ನಾನು. [ಅರಿವು ನೀಡುವುದರಿಂದ ‘ಮನಸ್’ ಎನ್ನಿಸಿ ಮನಸ್ಸಿನಲ್ಲಿದ್ದೇನೆ.] ಜೀವಿಗಳ ಚೈತನ್ಯ ನಾನು. [ಚೇತಸ್ =ಎಲ್ಲ ಜೀವಿಗಳ ನೆನಪಿನ ಗಂಟನ್ನು, ನಾ=ಬಿಡಿಸುವುದರಿಂದ ‘ಚೇತನಾ’ ಎನ್ನಿಸಿ ಚೇತನಾಶಕ್ತಿಯಲ್ಲಿದ್ದೇನೆ.]

ಆಕಾಶದಲ್ಲಿ-ಸೂರ್ಯ, ಚಂದ್ರ, ನಕ್ಷತ್ರ, ಗಾಳಿಯಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಆಕಾಶದ ವಿಶೇಷ ಗುಣವಾದ ಶಬ್ದದ ಬಗ್ಗೆ ಹೇಳುತ್ತಾನೆ. ಶಬ್ದದ ವಿಭೂತಿ-ವೇದ. ವೇದದಲ್ಲಿ ವಿಶಿಷ್ಟ-ಸಾಮವೇದ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ, ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ವೇದದಲ್ಲಿ ತಾರತಮ್ಯವಿಲ್ಲ. ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ. ಸಾಮವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಪ್ರಾಣದೇವರ ಹಾಡು ‘ಸಾಮಗಾನ’ ಭಗವಂತನಿಗೆ ಅತೀ ಇಷ್ಟ. ಸಾಮವೇದದ ವೈಶಿಷ್ಟ್ಯ ‘ನಾದ’. ಒಂದು ಶಬ್ದವನ್ನು ಹೇಗೆ ಒಡೆದರೂ, ಅದನ್ನು ಹೇಗೆ ಪದಪಾಠ ಮಾಡಿದರೂ, ಅದರಲ್ಲಿ ಯಾವ ನಾದ ತುಂಬಿದರೂ, ಅದು ಭಗವಂತನ ನಾಮದೇಯವಾಗುತ್ತದೆ ಎನ್ನುವ ಪ್ರಯೋಗ ಸಾಮವೇದ. ಋಗ್ವೇದ ಮತ್ತು ಯಜುರ್ವೇದದಲ್ಲಿ ಮಂತ್ರಗಳ ಹಾಗು ಶಬ್ದಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ದದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ(Exclusive quality). ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ-ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ ‘ಸಾಮ’ ಭಗವಂತನ ಅನ್ವರ್ಥ ನಾಮ. ಎಲ್ಲ ಶಬ್ದಗಳು ಭಗವದ್ ಪರ ಎನ್ನುವುದನ್ನು ಋಗ್ವೇದ ತೋರಿಸಿದರೆ, ಶಬ್ದವಷ್ಟೇ ಅಲ್ಲ, ಎಲ್ಲ ಘೋಷಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದನ್ನು ಸಾಮವೇದ ತೋರಿಸುತ್ತದೆ.

ಭಗವಂತ ‘ಸಾಮಃ’ ಮತ್ತು ಆತ ‘ವೇದಃ’. ಇಲ್ಲಿ ‘ಸಾಮಃ’ ಎಂದರೆ ಎಲ್ಲೆಡೆಯು ಸಮನಾಗಿರುವವ ಎಂದರ್ಥ. ‘ವೇದಃ’ ಎಂದರೆ ಜ್ಞಾನ ರೂಪ. ಭಗವಂತ ನಾದವಾಗಿ ಸಾಮವೇದದಲ್ಲಿ ತುಂಬಿ ಅದನ್ನು ವಿಭೂತಿಯಾಗಿ ಮಾಡಿದ.

ವೇದದ ನಂತರ ವೇದಪ್ರತಿಪಾದ್ಯ ದೇವತೆಗಳು. ದೇವತೆಗಳಲ್ಲಿ ಮುಖ್ಯವಾಗಿ ತತ್ವಾಭಿಮಾನಿ ದೇವತೆಗಳು. ಭಗವಂತನ ಅಧಿಷ್ಠಾನವಾಗಿ ಇಂದ್ರಿಯಯಗಳನ್ನು ನಿಯಮಿಸುವ ದೇವತೆಗಳಲ್ಲಿ ಮುಖ್ಯನಾದವ ‘ವಾಸವ’(ಇಂದ್ರ). ಈತ ಬಾಹ್ಯೇಂದ್ರಿಯಾಭಿಮಾನಿ ದೇವತೆಗಳಲ್ಲಿ ಶ್ರೇಷ್ಠ. ಈತ ಐದು ಜ್ಞಾನೇಂದ್ರಿಯ(ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಮತ್ತು ಐದು ಕರ್ಮೇಂದ್ರಿಯ(ಕೈ, ಕಾಲು, ಬಾಯಿ, ಪಾಯು, ಉಪಸ್ಥ)ಗಳಲ್ಲಿ ಅತ್ಯಂತ ವಿಶಿಷ್ಟವಾದ ಕೈ(ಹಸ್ತ)ಯ ಅಭಿಮಾನಿ ದೇವತೆ. ಇತರ ಎಲ್ಲಾ ಇಂದ್ರಿಯಗಳು ಬೇರೆ ಪ್ರಾಣಿಗಳಿಗೂ ಇದೆ. ಆದರೆ ಕುಸುರಿ ಕೆಲಸ, ನಾಟ್ಯಭಂಗಿ, ಶಿಲ್ಪ ಇತ್ಯಾದಿ ಅತ್ಯದ್ಭುತ ಹಸ್ತಕೌಶಲ ಭಗವಂತ ಕೇವಲ ಮಾನವರಿಗೆ ಮಾತ್ರ ಕೊಟ್ಟಿದ್ದಾನೆ. ಮಹಾಭಾರತದಲ್ಲಿ ನಮ್ಮ ಕೈಯ ವಿಶಿಷ್ಟತೆಯನ್ನು ಹೇಳುವ ಒಂದು ಕಥೆ ಇದೆ. ಒಬ್ಬ ನಿರುದ್ಯೋಗಿ ವಿದ್ವಾಂಸ ತನ್ನ ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿ ನಿಂತಿರುವಾಗ, ಒಂದು ನರಿ ಆತನಲ್ಲಿ ಹೇಳುತ್ತದೆ: “ಅಲ್ಲಯ್ಯ, ನಿನಗೆ ದೇವರು ದುಡಿಯಲು ಎರಡು ಕೈ ಕೊಟ್ಟಿದ್ದಾನೆ. ಆದರೆ ನಮಗೆ ಸಿಕ್ಕಿದ ಆಹಾರವನ್ನು ತಿನ್ನಲು ಕೂಡ ಕೈ ಇಲ್ಲ. ಮೈಯಲ್ಲಿ ಕುಳಿತು ರಕ್ತ ಹೀರುವ ನೊಣವನ್ನು ಓಡಿಸಲು ಕೈ ಇಲ್ಲ. ಆದರೂ ನಾವು ಬದುಕುತ್ತೇವೆ. ನಿಮಗೆ ಇಂತಹ ಅಮೂಲ್ಯ ಕೈ ಇದ್ದರೂ ನೀವು ಸಾಯಲು ಮುಂದಾಗುತ್ತಿದ್ದೀರಲ್ಲ-ನೀವೆಂಥಾ ಬುದ್ಧಿಗೇಡಿಗಳು” ಎಂದು. ಈ ಮಾತನ್ನು ಕೇಳಿ ಆ ವಿದ್ವಾಂಸ ಮರಳಿ ಬರುತ್ತಾನೆ. ಈ ಕಥೆಯಲ್ಲಿ ಕೈಯ ಮಹತ್ವವನ್ನು ತಿಳಿ ಹೇಳಿದ್ದಾರೆ. ಕೈಯ ಅಭಿಮಾನಿಯಾದ ಆ ‘ವಾಸವ’ನಲ್ಲಿ ಭಗವಂತ ವಾಸ ಮಾಡಿ, ಇತರ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ತುಂಬಿದ. ಇಂತಹ ‘ವಾಸವ’ ನಾಮಕ ಭಗವಂತ ವಿಭೂತಿಯಾಗಿ ಇಂದ್ರನಲ್ಲಿ ತುಂಬಿರುವುದರಿಂದ ಇಂದ್ರನನ್ನು ‘ವಾಸವ’ ಎಂದು ಕರೆಯುತ್ತಾರೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ವಾಸವಃ’. ‘ವಾಸವ’ ಎಂದರೆ ವಸುಗಳ ಸಮುದಾಯ. ವಸುಗಳೆಂದರೆ-“ದೇವತೆಗಳ ಸಮುದಾಯ”. ಬ್ರಹ್ಮಾಂಡದಲ್ಲಿದ್ದು-ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು-ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಎಲ್ಲ ನೆಲೆಗಳಲ್ಲು, ಇರುವವನಾಗಿ ಭಗವಂತ ‘ವಾಸವಃ’.

ಬಾಹ್ಯೇಂದ್ರಿಯದ ನಂತರ ಕೃಷ್ಣ ನಮ್ಮ ಅಂತರಂಗ ಪ್ರಪಂಚದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮನುಷ್ಯನ ಎಲ್ಲ ಕಾರುಬಾರಿಗೆ ಕಾರಣ ಮನಸ್ಸು. ಮನಸ್ಸಿಲ್ಲದಿದ್ದರೆ ಎಲ್ಲವೂ ಶೂನ್ಯ. ಇದು ಇಂದ್ರಿಯಗಳ ಚಟುವಟಿಕೆಗಳಿಗೆ ಮೂಲ ಪ್ರೇರಣೆ. ಹೊರಗಿನ ಎಲ್ಲ ವಸ್ತುವನ್ನು ಒಳಗಿನ ಆತ್ಮಕ್ಕೆ ಮುಟ್ಟಿಸುವ ಮಾಧ್ಯಮ ‘ಮನಸ್ಸು’. ಇಂದ್ರಿಯ ಇರುವುದು ಸಾರ್ಥಕವಾಗುವುದು ಮನಸ್ಸಿನ ಮೂಲಕ. ಶಾಸ್ತ್ರ ಓದಿದಾಗ ನಮಗೆ ವಿಷಯ ಹೊಳೆಯುವುದು ಮನಸ್ಸಿನ ಮೂಲಕ. ಭಗವಂತ ಮನನಕ್ಕೆ ಕಾರಣನಾಗಿ ‘ಮನಃ’ ಶಬ್ದ ವಾಚ್ಯನಾಗಿ ನಮ್ಮಲ್ಲಿ ಕೂತಿರುವುದರಿಂದ ನಮಗೆ ಈ ಶಕ್ತಿ ಬಂತು. ಮನುತೇ ಇತಿ ಮನಃ. ಜ್ಞಾನಸ್ವರೂಪನಾದವ, ಎಲ್ಲವನ್ನು ತಿಳಿಯುವವ, ಎಲ್ಲವನ್ನು ಬಲ್ಲವನು ‘ಮನಸ್’ ಶಬ್ದ ವಾಚ್ಯ ಭಗವಂತ.

ಮನಸ್ಸಿನ ನಂತರ, ಮನಸ್ಸಿನ ಮೂಲಕ ಬರುವ ವಿಷಯವನ್ನು ಗ್ರಹಣ ಮಾಡುವ ಶಕ್ತಿ- ಅರಿವು(Awareness). ಭಗವಂತ ನಮ್ಮೊಳಗಿದ್ದು, ಮನಸ್ಸು ಕಂಡದ್ದನ್ನು ಅರಿವಾಗಿ-ವಿಷಯವನ್ನು ಸ್ವೀಕರಿಸುವ ಗ್ರಹಣ ಶಕ್ತಿಯಾಗಿ ಕೂತ. ಇದರಿಂದ ಪ್ರಪಂಚವನ್ನು ಗ್ರಹಣ ಮಾಡುವ ಶಕ್ತಿ ಜೀವಕ್ಕೆ ಬಂತು. ಇಡೀ ವಿಶ್ವವನ್ನು ತನ್ನ ಅರಿವಿನಿಂದ ಗ್ರಹಣ ಮಾಡಿ, ವ್ಯಾಪಿಸುವ ವಿಸ್ಮಯ ಭಗವಂತ ‘ಚೇತನಃ’. ‘ಚೇತಸ್’ ಎಂದರೆ ನಮ್ಮ ಸುಪ್ತಪ್ರಜ್ಞೆ. ನಮ್ಮ ಪ್ರತಿಯೊಂದು ಅನುಭವ ನಮ್ಮ ಸುಪ್ತಪ್ರಜ್ಞೆಯಲ್ಲಿ ಸಂಗ್ರಹವಾಗಿರುತ್ತದೆ. ಚಿತ್ತಕ್ಕೆ ಎಲ್ಲವನ್ನು ಗ್ರಹಿಸುವ ಶಕ್ತಿ ಕೊಟ್ಟವ ‘ಚೇತನಾ’ ನಾಮಕ ಭಗವಂತ. ಇದು ಭಗವಂತನ ವಿಭೂತಿ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *