ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 21

ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥೨೧॥

ಆದಿತ್ಯಾನಾಮ್ ಅಹಮ್ ವಿಷ್ಣುಃ ಜ್ಯೋತಿಷಾಮ್ ರವಿಃ ಅಂಶುಮಾನ್।

ಮರೀಚಿಃ ಮರುತಾಮ್ ಅಸ್ಮಿ ನಕ್ಷತ್ರಾಣಾಮ್ ಅಹಮ್ ಶಶೀ—ಹನ್ನೆರಡು ಮಂದಿ ಅದಿತಿಯ ಮಕ್ಕಳಲ್ಲಿ [ಎಲ್ಲೆಡೆ ಹಬ್ಬಿರುವುದರಿಂದ, ಎಲ್ಲದರೊಳಗೂ ತುಂಬಿರುವುದರಿಂದ] ವಿಷ್ಣುನಾಮಕ[ವಾಮನ]ನಾನು. ಬೆಳಗಿಸುವ ಶಕ್ತಿಗಳಲ್ಲಿ ಕಿರಣಗಳಿಂದ ಬೆಳಗುವ ಹಿರಿಯ ಬೆಳಕು ರವಿ ನಾನು.[ರವ=ನಾದಗಳಿಂದ, ಇ=ಜ್ಞೇಯನಾಗಿ ‘ರವಿ’ ಎಂಬ ಹೆಸರಿನಿಂದ ರವಿಯಲ್ಲಿದ್ದೇನೆ.] ಮರುತ್ತುಗಳ ಸಂತತಿಯಲ್ಲಿ ಮರೀಚಿ ನಾನು, [ಮರಿ=ನೀರು ತುಂಬಿದ ಮೊಡಗಳನ್ನು, ಚಿ=ಪ್ರಚೋದಿಸುವುದರಿಂದ ‘ಮರೀಚಿ’ ಎನ್ನಿಸಿ ಪ್ರವಹವಾಯುತನಯ ಮರೀಚಿಯಲ್ಲಿದ್ದೇನೆ.] ನಕ್ಷತ್ರಗಳ ಒಡೆಯ ಚಂದ್ರ [ಶ =ಎಲ್ಲ ಸುಖಗಳಿಗಿಂತ, ಶಿ=ಅಧಿಕ ಸುಖರೂಪನಾಗಿ ‘ಶಶಿ’ಎನಿಸಿ ಚಂದ್ರನಲ್ಲಿದ್ದು ಅವನಿಗೆ ನಕ್ಷತ್ರಗಳ ಒಡೆತನವಿತ್ತವನು ನಾನು.

ತನ್ನ ವಿಭೂತಿಗಳ ಬಗ್ಗೆ ಹೇಳುತ್ತ ಕೃಷ್ಣ ಮೊಟ್ಟಮೊದಲು ನಿತ್ಯ ಉಪಾಸನೆಯಲ್ಲಿ ಬಹಳ ಮುಖ್ಯವಾದ ತನ್ನ ಸ್ವರೂಪ ವಿಭೂತಿಯನ್ನು ಹೇಳುತ್ತಾನೆ. ಅದಿತಿಯ ಹನ್ನೆರಡು ಮಂದಿ ಪುತ್ರರಲ್ಲಿ (ದ್ವಾದಶಾದಿತ್ಯರು-ವಿವಸ್ವಾನ್(ಸೂರ್ಯ), ಅರ್ಯಮಾ, ಪೂಷಾ, ತ್ವಷ್ಟಾ, ಸವಿತಾ, ಭಗ, ಧಾತಾ, ವಿಧಾತ, ವರುಣ, ಮಿತ್ರ, ಇಂದ್ರ, ಮತ್ತು ವಾಮನರೂಪಿ ವಿಷ್ಣು ) ಒಬ್ಬ ಭಗವಂತನ ಸಾಕ್ಷಾತ್ ವಿಭೂತಿ. ಆತನೇ ವಾಮನ ರೂಪಿ ವಿಷ್ಣು. ಆದ್ದರಿಂದ ಕೃಷ್ಣ ಹೇಳುತ್ತಾನೆ “ದ್ವಾದಶಾದಿತ್ಯರಲ್ಲಿ ವಿಷ್ಣು ನಾನು” ಎಂದು. ಇನ್ನು ಆದಿತ್ಯರು ಎಂದರೆ ಸಮಸ್ತ ದೇವತೆಗಳು ಎನ್ನುವ ಅರ್ಥವಿದೆ. ಸರ್ವ ದೇವತೆಗಳಲ್ಲಿ ದೇವೋತ್ತಮ ‘ವಿಷ್ಣು’ ಆ ಭಗವಂತ.

ಇಲ್ಲಿ ಬರುವ ಪ್ರತಿಯೊಂದು ಭಗವಂತನ ಹೆಸರಿಗೆ ಒಂದು ಅರ್ಥನಿಷ್ಪತ್ತಿ(etymological meaning) ಇದೆ. ‘ವಿಷ್ಣು’ ಎನ್ನುವ ನಾಮ ಏನನ್ನು ಹೇಳುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ: ಪುರಾಣದಲ್ಲಿ, ಭಾರತದಲ್ಲಿ ಬಂದಿರತಕ್ಕಂತಹ ಪೌರಾಣಿಕ ಅರ್ಥ ನೋಡಿದರೆ ಮೂರು ಧಾತುವಿನಿಂದ ‘ವಿಷ್ಣುಃ’ ಶಬ್ದ ನಿಷ್ಪನ್ನವಾಗಿದೆ ಎನ್ನುವುದು ತಿಳಿಯುತ್ತದೆ. (೧) ವಿಷಲ್-ವ್ಯಾಪ್ತೋ (೨) ವಿಷತಿ-ಪ್ರವೇಶೇ (೩) ವೇತಿ- ಪ್ರಜನಯತಿ, ಗತಿ, ಕಾಂತಿ, ಕಾದನೇಷು, ಗಚ್ಛತಿ. ಈ ಧಾತುವಿನ ಅರ್ಥದಲ್ಲಿ ನೋಡಿದಾಗ-ವಿಷ್ಣುಃ ಎಂದರೆ ಎಲ್ಲ ಕಡೆ ತುಂಬಿದವನು(ವ್ಯಾಪ್ತ). ಆತ ಎಲ್ಲದರ ಹೊರಗೂ ಮತ್ತು ಎಲ್ಲದರ ಒಳಗೂ(ಪ್ರವೇಶ) ತುಂಬಿರುವುದರಿಂದ ಆತ ವಿಷ್ಣುಃ. ಇದನ್ನು ನಾರಾಯಣ ಸೂಕ್ತದಲ್ಲಿ “ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ” ಎಂದಿದ್ದಾರೆ. ಇನ್ನು ‘ವೇತೀತಿ-ವಿಷ್ಣುಃ’. ಎಲ್ಲರು ಯಾರನ್ನು ಆಶ್ರಯಿಸಿಕೊಂಡಿದ್ದಾರೋ ಅವನು ವಿಷ್ಣು-ಸರ್ವಾಶ್ರಯಧಾತ ಭಗವಂತ. ‘ವೇತಿ-ಪ್ರಜನಯತಿ’-ಯಾರು ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದನೋ ಅವನು ವಿಷ್ಣು. ‘ವೇತಿ-ಗತಿ’- ಎಲ್ಲರನ್ನು ರಕ್ಷಣೆ ಮಾಡುವ ಸರ್ವ ರಕ್ಷಕ ಭಗವಂತ ವಿಷ್ಣು. ‘ವೇತಿ-ಕಾಂತಿ(ಇಚ್ಛೆ)’-ಇಡೀ ಜಗತ್ತನ್ನು ರಕ್ಷಿಸಿ ಉದ್ಧಾರ ಮಾಡಬೇಕು ಎನ್ನುವ ಸತ್ಯ ಸಂಕಲ್ಪ ಇರುವವ ವಿಷ್ಣು. ‘ವೇತಿ-ಕಾದನೇಶು’-ಸಮಸ್ತ ಜಗತ್ತನ್ನು ಯಾರು ಸಂಹಾರ ಮಾಡುತ್ತಾನೋ ಅವನು ವಿಷ್ಣು. ‘ವೇತಿ-ಗಚ್ಛತಿ’- ಮೂರು ಹೆಜ್ಜೆಯಿಂದ ತ್ರಿವಿಕ್ರಮನಾಗಿ ಮೂರು ಲೋಕವನ್ನು ಯಾರು ವ್ಯಾಪಿಸುತ್ತಾನೋ ಅವನು ವಿಷ್ಣು. ಸಮಷ್ಟಿಯಾಗಿ ವಿಷ್ಣು ಎಂದರೆ ‘ದೇವರು’ ಎನ್ನುವ ಅರ್ಥವನ್ನು ಕೊಡುತ್ತದೆ. ಇವು ನಾವು ವಿಷ್ಣುಃ ಶಬ್ದದಿಂದ ಅನುಸಂಧಾನ ಮಾಡಬೇಕಾದ ಕೆಲವು ಅರ್ಥಗಳು. ಇದನ್ನು ಮಹಾಭಾರತದಲ್ಲಿ ಒಂದು ಕಡೆ ನಾಮಗಳ ನಿರ್ವಚನದಲ್ಲಿ ಹೇಳಿದ್ದಾರೆ. ಈ ನಿರ್ವಚನ ಭಾರತದಲ್ಲಿ ಅರ್ಜುನನಿಗೆ ಕೃಷ್ಣನೇ ಹೇಳಿದ ನಿರ್ವಚನ. ಒಟ್ಟಿನಲ್ಲಿ “ಎಲ್ಲರಿಗೂ ಆಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲದರ ಒಳಗೂ-ಹೊರಗೂ ತುಂಬಿರುವ, ಮೂರು ಹೆಜ್ಜೆಯಿಂದ ಮೂರು ಲೋಕವನ್ನು ಅಳೆದ ವಿಷ್ಣು ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ಕೃಷ್ಣ ವಿವರಿಸಿದ್ದಾನೆ.

ಸ್ವರೂಪ ವಿಭೂತಿಯನ್ನು ಹೇಳಿದ ಕೃಷ್ಣ, ನಂತರ ವಿಷ್ಣುವಿನ ಉಪಾಸನೆಗೆ ಅತ್ಯಂತ ಹಿರಿದಾದ ಪ್ರತೀಕ ‘ಸೂರ್ಯ’ನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಾವು ಗಾಯತ್ರಿ ಪ್ರತಿಪಾದ್ಯನಾದ ವಿಷ್ಣುವನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತೇವೆ. ಇದು ಸೌರಶಕ್ತಿಯಲ್ಲಿ ಭಗವಂತನ ಉಪಾಸನೆ. ಇದು ಭಗವಂತನ ವಿಭೂತಿಯ ಎರಡನೇ ಮಜಲು. ಅದಕ್ಕಾಗಿ ವಿಷ್ಣುವಿನ ನಂತರ ‘ರವಿ’ಯನ್ನು ಕೃಷ್ಣ ಪ್ರಸ್ತಾಪಿಸುತ್ತಾನೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಜ್ಯೋತಿಗಳಲ್ಲೇ ಅತ್ಯಂತ ದೊಡ್ಡ ಜ್ಯೋತಿ. ಸೂರ್ಯನಲ್ಲಿ ‘ರವಿ’ ನಾಮಕನಾಗಿ ತುಂಬಿರುವ ಭಗವಂತ ಸೌರಶಕ್ತಿಯಾಗಿ ವಿಶ್ವದಲ್ಲಿ ವ್ಯಾಪಿಸಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ರವಿಃ’. ರವ+ಇ-ರವದಿಂದ ತಿಳಿಯಲ್ಪಡುವವನು-ರವಿ. ‘ರವ’ ಎಂದರೆ ನಾದ. ಯಾರು ಗಾಯತ್ರಿ ‘ರವ’ದಿಂದ ಜ್ಞೇಯನೊ ಅವನು ರವಿಃ. ಬೆಳಕುಗಳಿಗೆ ಬೆಳಕು ಕೊಡುವ ಭಗವಂತ, ಗಾಯತ್ರಿ ಪ್ರತಿಪಾದ್ಯನಾಗಿ, ‘ರವಿ’ ನಾಮಕನಾಗಿ ಸೂರ್ಯನಲ್ಲಿ, ಸೂರ್ಯ ಕಿರಣದಲ್ಲಿ ಸನ್ನಿಹಿತನಾಗಿದ್ದಾನೆ.

ಕೃಷ್ಣ ಹೇಳುವ ಮುಂದಿನ ವಿಭೂತಿ ಆಕಾಶದಲ್ಲಿ ವಾತಾವರಣದ ಬೇರೆಬೇರೆ ಪದರನ್ನು ನಿಯಮಿಸುವ ಮರುತ್ತುಗಳ ಸಂತತಿಯ ಮರೀಚಿ. ಮೂಲಭೂತವಾಗಿ ಮರುತ್ತುಗಳು ನಲವತ್ತೊಂಬತ್ತು ಮಂದಿ. ಇವರಲ್ಲಿ ಹತ್ತು ಮಂದಿ ನಮ್ಮ ಪಿಂಡಾಂಡ ನಿಯಮನ ಮಾಡುವವರು. ಈ ಮರುತ್ತುಗಳ ನಿಯಮನ ಮಾಡುವವ ಪ್ರವಹವಾಯು. ಪುರಾಣಗಳಲ್ಲಿ ಎಲ್ಲಿಯೂ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಮರೀಚಿ ಎನ್ನುವ ಹೆಸರು ಬಂದಿಲ್ಲ. ಆದ್ದರಿಂದ ಇಲ್ಲಿ ಮರೀಚಿ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಒಬ್ಬ ಎಂದು ಹೇಳುವುದು ಕಷ್ಟ. ಆದರೆ ಆತ ಪ್ರವಹವಾಯುವಿನ ಪುತ್ರ ಎನ್ನುವುದು ಸ್ಪಷ್ಟ. ಮಧ್ವಾಚಾರ್ಯರ ಐತರೇಯ ಉಪನಿಷತ್ತಿನ ಭಾಷ್ಯ ಮತ್ತು ಗೀತಾ ತಾತ್ಪರ್ಯವನ್ನು ಸಮನ್ವಯ ಮಾಡಿ ನೋಡಿದರೆ-ಮರೀಚಿ ಹದಿನೆಂಟನೇ ಕಕ್ಷೆಯಲ್ಲಿರುವ ಭೂತವಾಯು ದೇವತೆ. ಆದ್ದರಿಂದ ಈತ ಆಕಾಶ ಅಭಿಮಾನಿ ದೇವತೆ(ಗಣಪತಿ)ಯ ಸಮಾನಸ್ಕಂದ. ಭಗವಂತ ಮರೀಚಿನಾಮಕನಾಗಿ ಭೂತವಾಯುವಿನ ಅಭಿಮಾನಿ ದೇವತೆಯೊಳಗೆ ವಿಭೂತಿಯಾಗಿ ನಿಂತಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ಮರೀಚಿ’. ಮರ ಎಂದರೆ ನೀರು. ಮರಿ ಎಂದರೆ ನೀರು ತುಂಬಿರುವ ಮೋಡ. ಈ ಮೊಡವನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಸೇರಿಸುವ ವಾಯುವಿನಲ್ಲಿ ಸನ್ನಿಹಿತನಾಗಿ, ಮಳೆ ಬರಿಸುವ ಶಕ್ತಿಯನ್ನು ಮರೀಚಿಗೆ ಕೊಟ್ಟು, ಅವನಲ್ಲಿ ವಿಭೂತಿ ರೂಪದಲ್ಲಿ ಕೂತ ಭಗವಂತ ‘ಮರೀಚಿ’.

ಆಕಾಶದಲ್ಲಿ ಸೂರ್ಯ ಮತ್ತು ವಾಯುವಿನಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ನಕ್ಷತ್ರಗಳ ರಾಜ ಚಂದ್ರನಲ್ಲಿ ತನ್ನ ವಿಭೂತಿಯನ್ನು ಹೇಳುತ್ತಾನೆ. ಇದು ವಿಜಾತಿಯ ಸ್ರಷ್ಟಪ್ರಭ ವಿಭೂತಿ. ನಕ್ಷತ್ರಗಳ ಒಡೆಯ ಚಂದ್ರ. ಚಂದ್ರನಲ್ಲಿ ಎಲ್ಲ ನಕ್ಷತ್ರಗಳನ್ನು ನಿಯಮಿಸುವ ಶಕ್ತಿಯಾಗಿ ‘ಶಶಿ’ ಶಬ್ದವಾಚ್ಯ ಭಗವಂತ ಕೂತು ಅವನಿಗೆ ಆ ಶಕ್ತಿಯನ್ನು ಕೊಟ್ಟ.

ಇಲ್ಲಿ ಬಂದಿರುವ ಭಗವಂತನ ನಾಮ ‘ಶಶಿಃ’. ಶಶ ಉಳ್ಳವನು ಶಶಿ. ‘ಶ’ ಎಂದರೆ ಆನಂದ. ಶಶ ಎಂದರೆ ಆನಂದದಆನಂದ–ಪರಮಾನಂದ. ಇಂತಹ ಪರಮಾನಂದ ಉಳ್ಳ ಭಗವಂತ ಆನಂದ ಮೂರ್ತಿಯಾಗಿ ಚಂದ್ರನಲ್ಲಿ ಕೂತ. ಈ ಕಾರಣದಿಂದ ನಮಗೆ ಬೆಳದಿಂಗಳು ಆನಂದವನ್ನು ಕೊಡುತ್ತದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *