ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 20

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ।
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ॥೨೦॥

ಅಹಮ್ ಆತ್ಮಾ ಗುಡಾಕೇಶ ಸರ್ವಭೂತ ಆಶಯಸ್ಥಿತಃ ।

ಅಹಮ್ ಆದಿಃ ಚ ಮಧ್ಯಮ್ ಚ ಭೂತಾನಾಮ್ ಅಂತಃ ಏವ ಚ—ಓ ಗುಡಾಕೇಶ, ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ. ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ವಿಭೂತಿಯ ಒಟ್ಟು ಸಾರ(essence) ಏನೆಂದರೆ: ‘ಭಗವಂತ ಎಲ್ಲರ ಒಳಗೂ ತುಂಬಿದ್ದಾನೆ’ ಎನ್ನುವುದು. ಕೃಷ್ಣ ಹೇಳುತ್ತಾನೆ: “ನಾನು ಪ್ರತಿಯೊಂದು ಜೀವಿಯ ಒಳಗೆ ಆತ್ಮವಾಗಿ ತುಂಬಿದ್ದೇನೆ. ಎಲ್ಲ ಜೀವಗಳ ಆತ್ಮ ನಾನು” ಎಂದು. ಈ ಶ್ಲೋಕದಲ್ಲಿ ‘ಜೀವಾತ್ಮ-ಪರಮಾತ್ಮ ಒಂದೆ’ ಎಂದು ಹೇಳಲಾಗಿದೆ ಎಂದು ಕೆಲವರು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳಿರುವುದು ‘ಜೀವಾತ್ಮರ ಆತ್ಮನಾಗಿ ನಾನು ತುಂಬಿದ್ದೇನೆ’ ಎಂದೇ ಹೊರತು ‘ನಾನೇ ಜೀವಾತ್ಮ’ ಎಂದಲ್ಲ. ಇದು ಪ್ರತಿಯೊಂದು ಜೀವರ ಒಳಗೆ ಅಂತರ್ಯಾಮಿಯಾಗಿರುವ ಬಿಂಬರೂಪಿ ಭಗವಂತನನ್ನು ಹೇಳುತ್ತದೆ. ಭಗವಂತ ‘ಸರ್ವಭೂತಾಶಯಸ್ಥಿತಃ’. ಸಮಸ್ತ ಜೀವಜಾತದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ನಿಂತಿದ್ದಾನೆ ಆ ಹೃತ್ಕಮಲ ಮಧ್ಯ ನಿವಾಸಿ. ಇದು ಭಗವಂತನ ಅತಿ ದೊಡ್ಡ ವಿಭೂತಿ. ಅನಂತ ಜೀವರೊಳಗೆ ಅನಂತ ವಿಭೂತಿ ರೂಪದಲ್ಲಿ ಭಗವಂತ ವ್ಯಕ್ತನಾಗುತ್ತಾನೆ. ಈ ಕಾರಣದಿಂದ ನಾವು ಒಂದೊಂದು ಜೀವರಲ್ಲಿ ಒಂದೊಂದು ಶಕ್ತಿ ವೈಶಿಷ್ಟ್ಯವನ್ನು ಕಾಣುತ್ತೇವೆ. ಸಮಸ್ತ ಜೀವಗಳು- ಹುಟ್ಟುವ ಮುಂಚೆ ಅವುಗಳ ಒಳಗೆ ನಿಯಾಮಕನಾಗಿ ನಿಂತು, ಅವುಗಳ ಸೃಷ್ಟಿಗೆ ಕಾರಣನಾಗಿ, ಅವುಗಳನ್ನು ರಕ್ಷಣೆ ಮಾಡಿ, ಪ್ರಳಯಕಾಲದಲ್ಲೂ ಕೂಡ ಎಲ್ಲವನ್ನು ಕಾಪಾಡುವ ಭಗವಂತ-ಎಲ್ಲ ಅವಸ್ಥೆಗಳಲ್ಲಿಯೂ ಒಳಗೆ ನಿಂತು ರಕ್ಷಿಸುವ ಶಕ್ತಿ.

ಇಲ್ಲಿ ಗುಡಾಕೇಶ ಎನ್ನುವ ವಿಶೇಷಣ ಬಳಸಲಾಗಿದೆ. ಇದು ಕೂಡಾ ಒಂದು ವಿಭೂತಿ ಗಮಕ. ‘ಗುಡಾಕ’ ಎಂದರೆ ನಿದ್ದೆ. ‘ಗುಡಾಕೇಶ’ ಎಂದರೆ ನಿದ್ದೆಯನ್ನು ಗೆದ್ದವ. ಅರ್ಜುನನಲ್ಲಿ ಈ ವಿಶೇಷ ಸಾಮರ್ಥ್ಯವಿತ್ತು. ಅದಕ್ಕಾಗಿ ಆತನನ್ನು ಈ ನಾಮದಿಂದ ಕರೆಯುತ್ತಿದ್ದರು. “ನಿನ್ನೊಳಗೆ ನಿದ್ದೆಯನ್ನು ಗೆಲ್ಲುವ ಶಕ್ತಿಯಾಗಿ ತುಂಬಿರುವವನೂ ನಾನೆ” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ತನ್ನ ವಿಶಿಷ್ಟವಾದ ವಿಭೂತಿಯನ್ನು ವಿವರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *