ಶ್ಲೋಕ – 18
ವಿಸ್ತರೇಣಾSತ್ಮನೋ ಯೋಗಂ ವಿಭೂತಿಂ ಚ ಜನಾರ್ದನ ।
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇSಮೃತಮ್ ॥೧೮॥
ವಿಸ್ತರೇಣಾ ಆತ್ಮನಃ ಯೋಗಮ್ ವಿಭೂತಿಮ್ ಚ ಜನಾರ್ದನ ।
ಭೂಯಃ ಕಥಯ ತೃಪ್ತಿಃ ಹಿ ಶೃಣ್ವತಃ ನ ಅಸ್ತಿ ಮೇ ಅಮೃತಮ್—ಓ ಜನಾರ್ದನ, ನಿನ್ನ ಆಳವನ್ನೂ ಬಗೆಬಗೆಯ ರೂಪಗಳ ಹಿರಿಮೆಯನ್ನೂ ಇನ್ನಷ್ಟು ಬಿತ್ತರಿಸಿ ಹೇಳು. ನನಗೆ ಈ ಸುಧೆಯನ್ನು ಎಷ್ಟು ಸವಿದರೂ ತಣಿವಿಲ್ಲ.
“ಉಪಾಸನೆಗೆ ಉಪಯೋಗವಾಗುವ ನಿನ್ನ ವಿಭೂತಿಯನ್ನು ಇನ್ನೂ ಹೇಳು” ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ. ಭಗವಂತನ ವಿಭೂತಿಯಲ್ಲಿ ಪ್ರಮುಖವಾಗಿ ನಾಲ್ಕು ವಿಧ. (೧) ಸಾಕ್ಷಾತ್ ವಿಭೂತಿ: ಇಲ್ಲಿ ಭಗವಂತ ವಿಶಿಷ್ಟ ರೂಪದಲ್ಲಿ ನಮಗೆ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ: ಭಗವಂತನ ಅವತಾರಗಳು. (೨) ವಿಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ನಕ್ಷತ್ರಗಳ ರಾಜ ಚಂದ್ರ. ಇಲ್ಲಿ ಚಂದ್ರ ನಕ್ಷತ್ರಗಳ ಜಾತಿಗೆ ಸೇರಿಲ್ಲ ಆದರೆ ಆತ ನಕ್ಷತ್ರಗಳ ರಾಜ. (೩)ಸ್ವಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ದೇವತೆಗಳಲ್ಲಿ ಇಂದ್ರ, ಬೆಳಕಿನಲ್ಲಿ ಸೂರ್ಯ. (೪) ಸ್ವಜಾತಿಯ ಏಕದೇಶೀಯ ಸ್ರಷ್ಟಪ್ರಭ. ಉದಾಹರಣೆಗೆ: ಪಾಂಡವರಲ್ಲಿ ಅರ್ಜುನ. ಹೀಗೆ ಈ ನಾಲ್ಕು ಬಗೆಯಲ್ಲಿ ಭಗವಂತನ ವಿಭೂತಿ ರೂಪಗಳು ಅನಂತ. ಇಲ್ಲಿ ಎಲ್ಲವನ್ನೂ ನಾವು ಉಪಾಸನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅರ್ಜುನ “ಉಪಾಸನೆ ಮಾಡುವುದಕ್ಕೆ ಅನುಕೂಲವಾದ ನಿನ್ನ ವಿಭೂತಿಯನ್ನು ವಿಸ್ತಾರವಾಗಿ ಹೇಳು” ಎಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.
ಅರ್ಜುನ ಕೃಷ್ಣನ ಸಂದೇಶವನ್ನು ಕೇಳಿ ಆನಂದ ಸಾಗರದಲ್ಲಿ ತೇಲುತ್ತಿದ್ದಾನೆ. ಆತ ಹೇಳುತ್ತಾನೆ: “ನಾನು ಅಮೃತಪಾನ ಮಾಡುತ್ತಿದ್ದೇನೆ, ಇಲ್ಲಿ ಸಾಕು ಎನ್ನುವುದಿಲ್ಲ” ಎಂದು. ಇದು ಮೊಕ್ಷಪ್ರದವಾದ, ಕಿವಿ ಬೊಗಸೆಯಿಂದ ಮಾಡುವ ಅಮೃತಪಾನ. ಇದು ನಮ್ಮನ್ನು ಹುಟ್ಟು-ಸಾವಿನ ಸುಳಿಯಲ್ಲಿ ಸಿಗದಂತೆ ಮಾಡಿ,ಅಮೃತರನ್ನಾಗಿ ಮಾಡುವ ಜ್ಞಾನ. ಇದನ್ನು ಎಷ್ಟು ಸವಿದರೂ ತಣಿವಿಲ್ಲ. ಅದಕ್ಕಾಗಿ “ಇನ್ನೂ ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.