ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 11

ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ ।
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ॥೧೧॥

ತೇಷಾಮ್ ಏವ ಅನುಕಂಪಾರ್ಥಮ್ ಅಹಮ್ ಅಜ್ಞಾನ ಜಮ್ ತಮಃ ।

ನಾಶಯಾಮಿ ಆತ್ಮ ಭಾವ ಸ್ಥ ಜ್ಞಾನ ದೀಪೇನ ಭಾಸ್ವತಾ –ನಾನು ಅವರ ಮೇಲಣ ಕನಿಕರದಿಂದಲೆ, ಅವರ ಬಗೆಯಲ್ಲಿ ನೆಲೆನಿಂತು, ಬೆಳಗುವ ಅರಿವಿನ ಪಂಜಿನಿಂದ ಅಜ್ಞಾನದಿಂದ ಕವಿದ ಕತ್ತಲನ್ನು ಹೋಗಲಾಡಿಸುತ್ತೇನೆ.

ಭಗವಂತ ನಮ್ಮನ್ನು ಉದ್ಧರಿಸುವುದು ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಬದಲಿಗೆ ನಮ್ಮ ಮೇಲಿನ ಕರುಣೆಯಿಂದ. ತನ್ನನ್ನು ಅನನ್ಯ ಭಕ್ತಿಯಿಂದ ಭಜಿಸಿ ಆರಾಧನೆ ಮಾಡುವ ಭಕ್ತನ ಮೇಲಿನ ಅನುಕಂಪದಿಂದ ಆತ ನಮ್ಮನ್ನು ಉದ್ಧರಿಸುತ್ತಾನೆ. ಆತ ನಮಗೆ ಕೇವಲ ಬುದ್ಧಿ ಕೊಡುವುದಷ್ಟೇ ಅಲ್ಲ, ನಮ್ಮ ಬುದ್ಧಿಯನ್ನು ಸದಾ ಕವಿದಿರುವ ತಮಸ್ಸಿನ(ಅಜ್ಞಾನದ) ಪೊರೆಯನ್ನು ಕಳಚುವವನೂ ಅವನೆ. ಭಗವಂತನ ಸಹಾಯವಿಲ್ಲದೆ ನಮ್ಮ ಮನಸ್ಸು-ಬುದ್ಧಿಗೆ ಕವಿದಿರುವ ಅಜ್ಞಾನದ ಪೊರೆಯನ್ನು ನಾವೇ ನೀಗಿಸಿಕೊಳ್ಳಲು ಸಾಧ್ಯವಿಲ್ಲ. ತ್ರಿಗುಣಾತೀತ ಭಗವಂತನೊಬ್ಬನೆ ಈ ಕತ್ತಲನ್ನು ಕಳೆಯಬಲ್ಲ. ಇದರಿಂದ ನಾವು ಯಥಾರ್ಥವನ್ನು ಯಥಾರ್ಥವಾಗಿ ಗ್ರಹಣ ಮಾಡಬಹುದು. ಭಗವಂತ ನಮ್ಮ ಭಾವದಲ್ಲಿ-ಭಕ್ತಿಯಲ್ಲಿ ತುಂಬಿ, ನಮ್ಮ ಸ್ವರೂಪ ಜಾಗೃತಗೊಳಿಸಿ, ಕೃಪೆಯ ದೃಷ್ಟಿ ಬೀರಿ, ಎಲ್ಲ ವಿಧದಿಂದ ಬೆಳಕು ನೀಡಿ, ಯಥಾರ್ಥವನ್ನು ಕಾಣುವಂತೆ ಮಾಡುತ್ತಾನೆ. ಇದಕ್ಕಾಗಿ ‘ನನ್ನೊಳಗಿನ ಕತ್ತಲನ್ನು ನೀಗು ಭಗವಂತ’ ಎಂದು ನಾವು ಆತನಲ್ಲಿ ಶರಣಾಗಬೇಕು. ಒಳಗೆ ಕತ್ತಲನ್ನು ಇಟ್ಟುಕೊಂಡು ಎಷ್ಟು ಅಧ್ಯಯನ ಮಾಡಿದರೂ ಉಪಯೋಗವಿಲ್ಲ. ಶಾಸ್ತ ಓದಿದಾಗ ಯಥಾರ್ಥ ತಿಳಿಯಬೇಕಾದರೆ ಭಗವಂತನಲ್ಲಿ ಶರಣಾಗತಿ ಮುಖ್ಯ.

ಈ ಹಂತದಲ್ಲಿ ಅರ್ಜುನ ಕೃಷ್ಣನ ಉಪದೇಶ ಕೇಳಿ ಮೈಮರೆತು ಹೋದ. ಆತನಿಗೆ ತಾನು ಯುದ್ಧರಂಗದಲ್ಲಿ ನಿಂತಿದ್ದೇನೆ ಎನ್ನುವ ವಿಚಾರವೇ ಮರೆತು ಹೋಗಿ, ಕೇವಲ ಕೃಷ್ಣನೊಬ್ಬನೆ ಕಾಣಲಾರಂಭಿಸುತ್ತಾನೆ. ಮುಂದಿನ ನಾಲ್ಕು ಶ್ಲೋಕದಲ್ಲಿ ಅರ್ಜುನ ಭಗವಂತನ ಅನಂತ ಶಕ್ತಿಯ ಪಾರಮ್ಯದ ಅನುಸಂಧಾನವನ್ನು ವ್ಯಕ್ತಪಡಿಸುವುದನ್ನು ಕಾಣುತ್ತೇವೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *