ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 08

ಶ್ಲೋಕ – 08

ಅಭ್ಯಾಸಯೋಗಯುಕ್ತೇನ ಚೇತಸಾSನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ॥೮॥

ಅಭ್ಯಾಸ ಯೋಗ ಯುಕ್ತೇನ ಚೇತಸಾ ನ ಅನ್ಯ ಗಾಮಿನಾ ।

ಪರಮಮ್ ಪುರುಷಮ್ ದಿವ್ಯಮ್ ಯಾತಿ ಪಾರ್ಥ ಅನುಚಿಂತಯನ್ –ಪಾರ್ಥ, ಸೃಷ್ಟಿಯೊಂದು ಲೀಲೆಯಾದ ಪರಮ ಪುರುಷನನ್ನು ಅಭ್ಯಾಸದ ಉಪಾಯದಿಂದ ಹದಗೊಂಡು, ಬೇರಾವುದೂ ಬೇಡದ ಒಳಬಗೆಯಿಂದ, ಭಕ್ತಿಯಿಟ್ಟು ನೆನೆದಾಗ ಅವನನ್ನೆ ಸೇರುತ್ತಾನೆ.

ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ. ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು ಕೇವಲ ಭಗವಂತನನ್ನು ಚಿಂತಿಸುವಂತೆ ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ ಅಭ್ಯಾಸ. ಹೀಗೆ ಮಾಡಿದಾಗ ಅದು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಭಗವಂತನಲ್ಲಿ ನೆಲೆನಿಂತ ಮನಸ್ಸು ಅಂತ್ಯಕಾಲದಲ್ಲಿ ಕೂಡಾ ಭಗವಂತನನ್ನೇ ಕಾಣುತ್ತದೆ. ಇದು ಕೇವಲ ಚಿಂತನೆ ಅಲ್ಲ ಇದು ಅನುಚಿಂತನೆ-ಅಂದರೆ ಭಗವಂತನ ಯಥಾರ್ಥ (ಯತಾವತ್ತಾದ)ಚಿಂತನೆ. ಶ್ರುತಿಯಲ್ಲಿ ಹೇಗೆ ಹೇಳಿದ್ದಾರೋ ಹಾಗೆ ಭಗವಂತನನ್ನು ಚಿಂತನೆ ಮಾಡಬೇಕು. ಅಸತ್ಯವನ್ನು ಚಿಂತನೆ ಮಾಡಿ ಭಗವಂತನನ್ನು ಸೇರಲು ಸಾಧ್ಯವಿಲ್ಲ.

ಏಕಾಗ್ರವಾದ ಮನಸ್ಸಿನಿಂದ ದಿವ್ಯನಾದ ಪರಮಪುರುಷ, ಹೃತ್ಕಮಲ ಮದ್ಯನಿವಾಸಿ ಭಗವಂತನ ಚಿಂತನೆ ಮಾಡಬೇಕು ಎನ್ನುತ್ತಾನೆ ಕೃಷ್ಣ. ಮಹತೊಮಹಿಯಾದ ಭಗವಂತ ನಿನ್ನ ಹೃದಯದಲ್ಲಿ ಅಣೋರಣೀಯವಾಗಿ ಇರುವುದನ್ನು ಧ್ಯಾನದಲ್ಲಿ ಗುರುತಿಸು ಎನ್ನುವುದು ಇಲ್ಲಿ ಕೃಷ್ಣನ ಸಂದೇಶ. ಭಗವಂತ ಸರ್ವಗತ, ಸರ್ವಸಮರ್ಥ, ಸರ್ವಗುಣಪೂರ್ಣ, ಅನಾಧಿನಿತ್ಯ. ಅಂತಹ ಭಗವಂತ ನಮ್ಮ ಹೃತ್ಕಮಲದಲ್ಲಿ ವಾಸಿಸಿದ್ದಾನೆ ಮತ್ತು ದಿವ್ಯನಾಗಿದ್ದಾನೆ.

ಇಲ್ಲಿ ಬಳಸಿರುವ ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ‘ದೇವರು’ ಈ ಪದಗಳು ‘ದಿವು’ ಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ದಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ.

೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.

೨) ವಿಜಿಗೀಶ : ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.

೩) ಕಾಂತಿ : ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.

೪) ಸ್ತುತಿ : ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.

೫) ವ್ಯವಹಾರ : ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.

೬) ಕ್ರೀಡಾ : ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ.

೭) ಗತಿಶು : ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ ‘ದೇವ’

ಹೀಗೆ ಅನೇಕ ಅರ್ಥಗಳನ್ನು ‘ದಿವ್ಯ’ ಎನ್ನುವ ಪದದಲ್ಲಿ ಕಂಡುಕೊಳ್ಳಬಹುದು. “ಓ ದೇವರೇ” ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ನಾವು ಭಗವಂತನ ಜೊತೆಗೇ ಇದ್ದೂ ಕೂಡಾ ಮಾನಸಿಕವಾಗಿ ಆತನಿಂದ ದೂರವಿದ್ದೇವೆ. ಭಗವಂತನ ನಿರಂತರ ಅನುಚಿಂತನೆಯಿಂದ ನಾವು ಆತನ ಸಾಕ್ಷಾತ್ಕಾರ ಪಡೆಯಬಹುದು.

ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ಭಗವಂತನನ್ನು ಅನುಚಿಂತನೆ ಮಾಡುವುದು ಅಂದರೆ ಏನು ಎನ್ನುವುದನ್ನು ವಿವರಿಸುತ್ತಾನೆ. ಒಬ್ಬ ಧ್ಯಾನ ಮಾಡುವವ ಭಗವಂತನನ್ನು ಯಾವರೀತಿ ಧ್ಯಾನ ಮಾಡಬೇಕು ಎನ್ನುವ ಚಿತ್ರಣವನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *