ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 08

ಶ್ಲೋಕ – 03

ಭಗವಾನುವಾಚ ।
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋSಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ॥೩॥

ಭಗವಾನ್ ಉವಾಚ ।

ಅಕ್ಷರಮ್ ಬ್ರಹ್ಮ ಪರಮಮ್ ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ ।

ಭೂತ ಭಾವ ಉದ್ಭವ ಕರಃ ವಿಸರ್ಗಃ ಕರ್ಮ ಸಂಜ್ಞಿತಃ –ಭಗವಂತ ಹೇಳಿದನು: ಪರಮಾಕ್ಷರ ಎನ್ನಿಸಿದ ಪರತತ್ವವೆ ‘ಬ್ರಹ್ಮ’. ಜೀವ ಸ್ವರೂಪ ಮತ್ತು ಜೀವಕ್ಕೆ ಸಂಭದಿಸಿದ ಸಮಷ್ಟಿ ಪಿಂಡಾಂಡವನ್ನು [ಭಗವಂತನ ಬಗೆಯ ನಿಲುವನ್ನು] ‘ಅಧ್ಯಾತ್ಮ’ ಎನ್ನುತ್ತಾರೆ. ಜೀವ-ಜಡಗಳ ಅಭಿವ್ಯಕ್ತಿಗೆ ಕಾರಣವಾದ ಭಗವಂತನ ಬಗೆಬಗೆಯ ಸೃಷ್ಟಿಕ್ರಿಯೆಗೆ ‘ಕರ್ಮ’ ಎಂದು ಹೆಸರು.

ಕೃಷ್ಣ ಹೇಳುತ್ತಾನೆ ‘ಬ್ರಹ್ಮ’ ಅಂದರೆ “ಪರಮಂ ಬ್ರಹ್ಮ –ಪರಮಂ ಅಕ್ಷರ’ ಎಂದು. ಭಗವಂತ ಎಲ್ಲರಿಗಿಂತ ಹಿರಿದಾದ ಪರಮಮ್ ಬ್ರಹ್ಮ- ಆತ ಪರಮಾಕ್ಷರ. ಅಂತಹ ಭಗವಂತನ ಬಗೆಗೆ ತಿಳಿದುಕೊಳ್ಳಬೇಕು ಎನ್ನುವುದು ‘ಬ್ರಹ್ಮ’ ಪದದ ಹಿಂದಿನ ಅರ್ಥ. ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ಈ ರೀತಿ ವರ್ಣಿಸಿದ್ದಾರೆ:

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ||

ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ; ಎಲ್ಲರ ಚಿಂತನೆಯ ಕೊನೆಯ ಗುರಿ; ಎಲ್ಲ ಜ್ಞಾನದ ಗಮ್ಯ ಆ ಭಗವಂತ. ಇಲ್ಲಿ ಭಗವಂತನನ್ನು ‘ಪರಮ ಮಹಾ ಬ್ರಹ್ಮ’ ಎನ್ನುತ್ತಾರೆ. ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು. ಭಗವಂತ ಸರ್ವ ದೇವತೆಗಳ ಒಡೆಯ. ಇದು ನಾವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳಲ್ಲಿ ಒಂದಾದ ‘ಬ್ರಹ್ಮ’ ಪದದ ಅರ್ಥ.

ಮುಂದುವರಿದು ಕೃಷ್ಣ ಹೇಳುತ್ತಾನೆ “ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ” ಎಂದು. ಇಲ್ಲಿ ಸ್ವಭಾವ ಎಂದರೆ ತನ್ನತನ. ಜೀವದ ಇರವಿನ ಬಗೆ ಮತ್ತು ಜೀವ ಸ್ವಭಾವ. ನಾವು ಭಗವಂತನನ್ನು ಅರಿಯುವ ಮೊದಲು ನಮ್ಮ ಜೀವ ಸ್ವಭಾವವನ್ನು ಅರಿಯಬೇಕು. ನಾನು ಅಂದರೆ ಏನು? ನನ್ನಲ್ಲಿರುವ ಉತ್ತಮ ಅಂಶ(plus point) ಯಾವುದು? ಕೆಟ್ಟ ಅಂಶ(minus point) ಯಾವುದು ಎಂದು ನಿರಂತರ ನಾವು ನಮ್ಮನ್ನು ತಿಳಿಯಲು ಪ್ರಯತ್ನಿಸಬೇಕು [ಆದರೆ ನಾವು ನಮ್ಮ ಹೆಚ್ಚಿನ ಸಮಯವನ್ನು ಇನ್ನೊಬ್ಬರ ಬಗ್ಗೆ ತೀರ್ಪು ಕೊಡುವುದರಲ್ಲಿ ಕಳೆಯುತ್ತೇವೆ!!!] . ನಮಗೆ ಈ ದೇಹದಲ್ಲಿ ಕಣ್ಣು, ಕೈ, ಕಾಲು ಹಾಗು ಇತರ ಅಂಗಾಂಗಗಳನ್ನೂ ಬಿಟ್ಟು ಒಂದು ‘ನಾನು’ ಅನ್ನುವ ವಸ್ತುವಿದೆ ಎನ್ನುವ ಅರಿವೇ ಇರುವುದಿಲ್ಲ [awareness of self]. ಮೊದಲು ನಾವು ಜೀವದ ಇರುವಿಕೆಯನ್ನು ತಿಳಿದುಕೊಳ್ಳಬೇಕು, ನಂತರ ಅದರ ಸ್ವಭಾವವೇನು ಎಂದು ತಿಳಿಯಬೇಕು. [ಸಾಮಾನ್ಯವಾಗಿ ನಮಗೆ ನಮ್ಮ ಜೀವ ಸ್ವಭಾವ ಏನು ಎಂದು ತಿಳಿದಿರುವುದಿಲ್ಲ. ನಾವು ಪ್ರಭಾವದಲ್ಲೇ ಬದುಕುತ್ತಿರುತ್ತೇವೆ.]

ಜೀವ ಅನ್ನುವುದು ಅತೀ ಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ, ಜೀವ ಅತಿ ಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಂತಹ ಜೀವ ಮತ್ತು ಜೀವ ಸ್ವಭಾವವೇ ‘ಅಧ್ಯಾತ್ಮ’.

ಕೃಷ್ಣ ಮುಂದುವರಿದು ಹೇಳುತ್ತಾನೆ “ಈ ಪ್ರಪಂಚ ಎಂದರೆ ಭೂತ ಮತ್ತು ಭಾವ-ಅಂದರೆ ಇದು ಜೀವ ಮತ್ತು ಜಡದ ಸೃಷ್ಟಿ” ಎಂದು. ನಾವು ಈ ಜಗತ್ತಿನಲ್ಲಿದ್ದೇವೆ. ಇಂತಹ ಜಗತ್ತು ಹೇಗೆ ಸೃಷ್ಟಿಯಾಯಿತು? ಯಾವಾಗ ಸೃಷ್ಟಿಯಾಯಿತು? ಅದರ ಹಿಂದಿರುವ ಮೂಲದ್ರವ್ಯ ಯಾವುದು? ಅದರ ನಿಮಿತ್ತ ಮತ್ತು ಉಪಾದಾನ ಕಾರಣ ಯಾರು? ಜೀವ ದೇಹದಮೂಲಕ ಹುಟ್ಟುವುದು ಏಕೆ? ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿರುವ ಆ ಮಹಾ ಶಕ್ತಿ ಯಾವುದು? ಹೀಗೆ ಚಿಂತನೆ ಮಾಡಿದಾಗ ನಮಗೆ ಒಂದು ವಿಷಯ ತಿಳಿಯುತ್ತದೆ-ಅದೇ ಕರ್ಮ ಸಿದ್ಧಾಂತ. ಈ ಜೀವಜಾತವನ್ನು ಮತ್ತು ಜಡಪ್ರಪಂಚವನ್ನು ಸೃಷ್ಟಿ ಮಾಡುವ ಮೂಲ ಶಕ್ತಿ ಆ ಭಗವಂತ. ಅವನ ಕ್ರಿಯೆಯೇ ನಿಜವಾದ ಕ್ರಿಯೆ. ಈ ಪ್ರಪಂಚದ ವೈವಿಧ್ಯಮಯವಾದ ಸೃಷ್ಟಿಯ ಮೂಲವನ್ನು ತಿಳಿದಾಗ ನಿಜವಾದ ಕರ್ಮ ತಿಳಿಯುತ್ತದೆ. ನಾವೆಲ್ಲರೂ ಕೂಡಾ ಭಗವಂತ ಸೃಷ್ಟಿ ಮಾಡಿದ ಗೊಂಬೆಗಳು-ಆತ ಸೂತ್ರದಾರ. ನಮ್ಮ ಕ್ರಿಯೆ ಆ ಸೂತ್ರದಾರನ ನಿಯಮಕ್ಕೆ ಬದ್ಧ. ಇಡೀ ವಿಶ್ವಚಕ್ರ ಭಗವಂತನ ಅಧೀನವಾಗಿ ತಿರುಗುತ್ತಿದೆ. ಭಗವಂತನ ಕ್ರಿಯೆ ಮಹಾಕ್ರಿಯೆ. ನಮ್ಮ ಕ್ರಿಯೆ -ಸುತ್ತುತ್ತಿರುವ ಮಹಾ ಚಕ್ರದ ಮೇಲೆ ಚಲಿಸುತ್ತಿರುವ ಇರುವೆಯಂತೆ. ಇರುವೆ ಯಾವ ದಿಕ್ಕಿಗೆ ಚಲಿಸಿದರೂ ಕೂಡಾ ಅದು ಚಲಿಸುವುದು ಚಕ್ರ ತಿರುಗಿದಂತೆ ಹೊರತು ಇರುವೆ ಚಲಿಸಿದಂತೆ ಚಕ್ರ ತಿರುಗುವುದಿಲ್ಲ. ಅದೇ ರೀತಿ ಪ್ರಪಂಚದ ಗತಿ ನಮ್ಮ ಕ್ರಿಯೆಯ ಮೇಲೆ ನಿರ್ಧಾರವಲ್ಲ. ಅದು ತನ್ನ ಗತಿಗನುಗುಣವಾಗಿ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ‘ನಾನು ಮಾಡಿದೆ’ ನನ್ನಿಂದಾಯ್ತು’ ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಜೀವ ಜಡ ಪ್ರಪಂಚ ಸೃಷ್ಟಿಗೆ ಕಾರಣವಾಗಿರತಕ್ಕಂತಹ ವಿಶಿಷ್ಟವಾದ ಸೃಷ್ಠಿ ಕ್ರಿಯೆಯೇ ನಿಜವಾದ ‘ಕರ್ಮ’.

ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದಾಗ ಇದು ಹೊಸ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಜೀವ ಬರುವುದೇ ಇಲ್ಲ. ಎಲ್ಲಾ ಮೂರೂ ಸಂಗತಿಗಳೂ ಭಗವಂತನನ್ನು ಹೇಳುತ್ತವೆ. ಬ್ರಹ್ಮ ಎಂದರೆ ‘ಭಗವಂತ’ ; ಸ್ವಭಾವ ಅಂದರೆ ಭಗವಂತನ ಸ್ವತಂತ್ರ ಭಾವ. ಆದ್ದರಿಂದ ಭಗವಂತನ ಗುಣ-ಧರ್ಮ ಚಿಂತನೆಯೇ ಅಧ್ಯಾತ್ಮ. ನಮ್ಮಲ್ಲಿ ಕೆಲವರು ಕೇಳುವುದಿದೆ. “ಭಗವಂತನಿಗೆ ಏಕೆ ಈ ಸ್ವಭಾವ ? ಒಬ್ಬರಿಗೆ ಸುಖ, ಒಬ್ಬರಿಗೆ ದುಃಖ, ಒಬ್ಬರಿಗೆ ಬಡತನ, ಒಬ್ಬರಿಗೆ ಸಿರಿತನ, ಒಬ್ಬರು ನರಕಕ್ಕೆ, ಒಬ್ಬರು ಸ್ವರ್ಗಕ್ಕೆ , ಏಕೆ ಈ ತಾರತಮ್ಯ ?” ಎಂದು. ಇದು ಬಾಲಿಶ ಪ್ರಶ್ನೆ. ಇಂತಹ ವಾದದಿಂದಲೇ ನಮ್ಮಲ್ಲಿ ನಾಸ್ತಿಕತೆ ಹುಟ್ಟಿಕೊಂಡಿರುವುದು. ಜೀವ ಅನಾದಿನಿತ್ಯ, ಅದನ್ನು ಭಗವಂತ ಸೃಷ್ಟಿ ಮಾಡುವುದಿಲ್ಲ. ಪ್ರತಿಯೊಂದು ಜೀವ ಸ್ವರೂಪದ ಗುಣಧರ್ಮ ಸ್ವಭಾವಕ್ಕನುಗುಣವಾಗಿ, ಅರ್ಹತೆಗನುಗುಣವಾಗಿ, ಅವರವರನ್ನು ಸೃಷ್ಟಿ ಮಾಡುವುದು ಭಗವಂತನ ಸ್ವಭಾವ. ಆದ್ದರಿಂದ ಇಲ್ಲಿ ತಾರತಮ್ಯ ಅನ್ನುವ ಪ್ರಶ್ನೆಯೇ ಇಲ್ಲ. ಭಗವಂತನ ಸೃಷ್ಟಿಯ ಹಿಂದಿರುವ ಭಗವಂತನ ಸ್ವತಂತ್ರ್ಯ, ಆತನ ನಿಷ್ಪಕ್ಷಪಾತ, ಯಾವುದೇ ಪ್ರಭಾವಕ್ಕೊಳಗಾಗದಿರುವುದು, ತ್ರಿಗುಣಾತೀತತ್ವ, ಇವು ಭಗವಂತನ ಮೂಲಭೂತ ಸ್ವಭಾವ. ಇದರ ಅರಿವೇ ‘ಅಧ್ಯಾತ್ಮ’. ಭಗವಂತನ ಗುಣಧರ್ಮವನ್ನು ತಿಳಿದಾಗ ಅವನ ಸೃಷ್ಟಿ ಏನು ಎಂದು ಅರ್ಥವಾಗುತ್ತದೆ. ಅದೇ ಕರ್ಮ. ಭಗವಂತನ ಕ್ರಿಯೆಯಲ್ಲಿ ಜ್ಞಾನ-ಇಚ್ಚೆ-ಕೃತಿ ಎನ್ನುವ ಮೂರು ಹಂತವಿಲ್ಲ. ಆತ ಇಚ್ಚಿಸುವುದೇ ಕ್ರಿಯೆ. ಇದನ್ನು ತಿಳಿಯುವುದು ‘ಕರ್ಮದ ಅರಿವು’. ಹೀಗೆ ಭಗವಂತನ ಸ್ವರೂಪದ, ಗುಣಧರ್ಮದ ಮತ್ತು ಕ್ರಿಯೆಯ ಅರಿವೇ –ಬ್ರಹ್ಮ ಅಧ್ಯಾತ್ಮ ಮತ್ತು ಕರ್ಮ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *