ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 07

ಶ್ಲೋಕ – 02

ಜ್ಞಾನಂ ತೇSಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ।
ಯಜ್ ಜ್ಞಾತ್ವಾ ನೇಹ ಭೂಯೋSನ್ಯಜ್ ಜ್ಞಾತವ್ಯಮವಶಿಷ್ಯತೇ ॥೨॥

ಜ್ಞಾನಮ್ ತೇ ಅಹಮ್ ಸ ವಿಜ್ಞಾನಮ್ ಇದಮ್ ವಕ್ಷ್ಯಾಮಿ ಅಶೇಷತಃ ।

ಯತ್ ಜ್ಞಾತ್ವಾ ನ ಇಹ ಭೂಯಃ ಅನ್ಯತ್ ಜ್ಞಾತವ್ಯಮ್ ಅವಶಿಷ್ಯತೇ –ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೆ ತಿಳಿಯುವಂಥದೇನೂ ಉಳಿದಿರುವುದಿಲ್ಲ.

ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುತ್ತದೋ ಅದನ್ನು ನಿನಗೆ ಹೇಳುತ್ತೇನೆ ಎನ್ನುತ್ತಾನೆ ಕೃಷ್ಣ. ಉಪನಿಷತ್ತಿನಲ್ಲಿ ಒಂದು ಮಾತಿದೆ “ಯಸ್ಮಿನ್ ವಿಜ್ಞಾತೇ ಸರ್ವ೦ ಇದ೦ ವಿಜ್ಞಾತ೦ ಭವತಿ” ಎಂದು. ಅಂದರೆ ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ಮೊದಲು ತಿಳಿಯಬೇಕು. ನಾವು ಭಗವಂತನನ್ನು ತಿಳಿದರೆ ಈ ಪ್ರಪಂಚವನ್ನು ತಿಳಿದಂತೆ. ಅದನ್ನು ಬಿಟ್ಟು ಪ್ರಪಂಚವನ್ನು ತಿಳಿದು ಭಗವಂತನನ್ನು ತಿಳಿಯಬೇಕು ಅಂದುಕೊಂಡರೆ ಅದು ಅಸಾಧ್ಯ. ಇಲ್ಲಿ ಕೃಷ್ಣ ಹೇಳುತ್ತಾನೆ “ಯಾವ ಸಂಗತಿಯನ್ನು ತಿಳಿದರೆ ಮತ್ತೆ ಬೇರೆ ತಿಳಿದುಕೊಳ್ಳಬೇಕಾದ ಸಂಗತಿ ಉಳಿಯುವುದಿಲ್ಲವೋ ಅಂತಹ ವಿಜ್ಞಾನವನ್ನು ನಿನಗೆ ಕೊಡುತ್ತೇನೆ” ಎಂದು. ಜ್ಞಾನ ವಿಜ್ಞಾನವಾದಾಗಲೇ ಅದು ಸಮಗ್ರವಾಗುವುದು. ವಿಜ್ಞಾನ ಅಂದರೆ ವಿ+ಜ್ಞಾನ. ಇಲ್ಲಿ ‘ವಿ’ ಉಪಸರ್ಗ, ‘ವಿ’- ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಒಂದು ವಿಷಯವನ್ನು ತಳಸ್ಪರ್ಶಿಯಾಗಿ ತಿಳಿಯುವುದು ವಿಜ್ಞಾನ. ಇಲ್ಲಿ ಕೃಷ್ಣ ಹೇಳುತ್ತಿರುವುದು ವಿಜ್ಞಾನದ ಬಗ್ಗೆ. ‘ದೇವರು ಇದ್ದಾನೆ, ಅವನು ಸರ್ವಸಮರ್ಥ, ಸರ್ವಾಂತರ್ಯಾಮಿ’ ಎನ್ನುವುದು ಜ್ಞಾನ; ಆತ ಎಲ್ಲೆಲ್ಲಿ ಹೇಗಿದ್ದಾನೆ, ಯಾವ ವಸ್ತುವಿನಲ್ಲಿ ಯಾವ ವಿಭೂತಿಯಾಗಿದ್ದಾನೆ, ಎಂದು ವಿವರವಾಗಿ ತಿಳಿಯುವುದು ವಿಜ್ಞಾನ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *