ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 07

ಶ್ಲೋಕ – 01

ಹಿಂದಿನ ಆರು ಅಧ್ಯಾಯ (ಮೊದಲ ಷಟ್ಕ)ದಲ್ಲಿ ಕೃಷ್ಣ ಸಾಧಕನಾದವನು ಯಾವ ರೀತಿ ಸಾಧನೆಗೆ ತೊಡಗಬೇಕು, ಕರ್ಮ ಹೇಗಿರಬೇಕು, ಧ್ಯಾನ ಹೇಗಿರಬೇಕು, ಇತ್ಯಾದಿ ಭಗವಂತನನ್ನು ತಿಳಿಯುವ ಸಾಧನದ ಬಗ್ಗೆ ಹೇಳಿದ. ಎರಡನೇ ಷಟ್ಕ (ಅ-೭ರಿಂದ ೧೨) ಸಾಧನೆಯ ಮೂಲಕ ನಾವು ತಿಳಿದುಕೊಳ್ಳಬೇಕಾದ ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು, ಆತನ ಮಹಿಮೆಯನ್ನು ಹೇಳುವ ಸಾಧ್ಯಾಧ್ಯಾಯ.

ಏಳನೇ ಅಧ್ಯಾಯ ಭಗವಂತನ ಅಮೃತ ನುಡಿಯಿಂದ ಪ್ರಾರಂಭವಾಗುತ್ತದೆ.

ಭಗವಾನುವಾಚ ।
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥೧॥

ಭಗವಾನ್ ಉವಾಚ-ಭಗವಂತ ಹೇಳಿದನು :

ಮಯಿ ಆಸಕ್ತ ಮನಾಃ ಪಾರ್ಥ ಯೋಗಮ್ ಯುಂಜನ್ ಮತ್ ಆಶ್ರಯಃ ।

ಅಸಂಶಯಮ್ ಸಮಗ್ರಮ್ ಮಾಮ್ ಯಥಾ ಜ್ಞಾಸ್ಯಸಿ ತತ್ ಶೃಣು –ಪಾರ್ಥ, ನನ್ನನ್ನೆ ಬಗೆ ತುಂಬಿ ಪ್ರೀತಿಸುತ್ತ, ನನ್ನನ್ನೆ ಮೊರೆಹೊಕ್ಕು, ಯೋಗ ಸಾಧನೆಯಲ್ಲಿ ತೊಡಗುತ್ತ ಖಚಿತವಾಗಿ, ಅರಿವಿನ ತೆಕ್ಕೆ ತುಂಬಾ ನನ್ನನ್ನು ಹೇಗೆ ಅರಿಯಬಲ್ಲೆ ಅದನ್ನು ಕೇಳು.

ಮದ್ದಾನೆ ಅಥವಾ ಗೂಳಿಯಂತಹ ನಮ್ಮ ಮನಸ್ಸನ್ನು ಮಣಿಸಿ, ಸಾಧನೆಯ ಹಾದಿಯಲ್ಲಿ ಅದನ್ನು ಪಕ್ವಗೊಳಿಸಿದ ಮೇಲೆ, ಭಗವಂತನಲ್ಲಿ ಮತ್ತೆಂದೂ ಕದಲದ, ಸುದೃಡ ಮತ್ತು ಗಾಢವಾದ ಭಕ್ತಿಯಿಂದ, ಅಹಂಕಾರ ತೊರೆದು, ಸಂಪೂರ್ಣ ಶರಣಾಗತಿಯಿಂದ (ಎಲ್ಲಾ ಕಾಲದಲ್ಲೂ ನಾವು ಭಗವಂತನ ಅಧೀನ ಎನ್ನುವ ಎಚ್ಚರದಿಂದ), ಭಗವಂತನಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡು, ಧ್ಯಾನಯೋಗದಲ್ಲಿ ತೊಡಗಿದ ಮೇಲೆ, ‘ಅರಿವಿನ ಪೂರ್ಣ ಸಾಮರ್ಥ್ಯದಷ್ಟು ಭಗವಂತನನ್ನು ಹೇಗೆ ತಿಳಿಯಬಹುದು’ ಅದನ್ನು ಕೇಳು ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *