ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 10

ಹೀಗೆ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿದ ಕೃಷ್ಣ ಮುಂದೆ ನೇರವಾಗಿ ಧ್ಯಾನಕ್ಕೆ ಕೂರುವ ವಿಧಾನವನ್ನು ವಿವರಿಸುತ್ತಾನೆ.

ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ ।
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥೧೦॥

ಯೋಗೀ ಯುಂಜೀತ ಸತತಮ್ ಆತ್ಮಾನಮ್ ರಹಸಿ ಸ್ಥಿತಃ ।

ಏಕಾಕೀ ಯತ ಚಿತ್ತ ಆತ್ಮಾ ನಿರಾಶೀಃ ಅಪರಿಗ್ರಹಃ –ಯೋಗ ಸಾಧಕನು ಒಬ್ಬನೆ ಏಕಾಂತದಲ್ಲಿ ಕುಳಿತು, ಮೈಮನಗಳನ್ನು ಹದಗೊಳಿಸಿ, ಆಸೆಪಡದೆ, ಏತಕ್ಕೂ ಕೈಯೊಡ್ಡದೆ, ಬಗೆಯನ್ನು ಸದಾ ಸಮಾಧಿಗೆ ಅಣಿಗೊಳಿಸಬೇಕು.

“ಸತತಮ್ ಆತ್ಮಾನಮ್”-ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡತಕ್ಕಂತಹ ವ್ಯಕ್ತಿ ಮನಸ್ಸನ್ನು ನಿರಂತರ ಧ್ಯಾನ ಯೋಗದಲ್ಲಿ ತೊಡಗಿಸಲು ಹಾಗು ಏಕಾಗ್ರಗೊಳಿಸಲು ಪ್ರಯತ್ನಪಡಬೇಕು; “ರಹಸಿ ಸ್ಥಿತಃ”- ಜನಜಂಗುಳಿ ಇದ್ದಲ್ಲಿ ಧ್ಯಾನ ಅಭ್ಯಾಸ ಮಾಡಲು ಅಸಾಧ್ಯ. ಈ ಕಾರಣಕ್ಕಾಗಿ ಹಿಂದಿನವರು ಧ್ಯಾನಕ್ಕಾಗಿ ಬೆಳಗಿನ ಜಾವದ ಅರುಣೋದಯ ಕಾಲವನ್ನು ಮೀಸಲಿಡುತ್ತಿದ್ದರು. ಬೆಳಗಿನಜಾವ ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ ಮೊದಲು ಧ್ಯಾನಕ್ಕೆ ಕುಳಿತರೆ ಆಗ ಇಡೀ ಪ್ರಕೃತಿ ಪ್ರಶಾಂತವಾಗಿರುತ್ತದೆ. ಈ ಕಾಲ ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಅತ್ಯಂತ ಪೂರಕ ಕಾಲ. ಇದನ್ನು ‘ಬ್ರಹ್ಮಮಹೂರ್ತ’ ಎನ್ನುತ್ತಾರೆ(ಸೂರ್ಯೋದಯಕ್ಕಿಂತ ತೊಬತ್ತಾರು ನಿಮಿಷ(ನಾಲ್ಕು ಘಳಿಗೆ) ಮೊದಲು ಪ್ರಾರಂಭವಾಗಿ ನಲವತ್ತೆಂಟು ನಿಮಿಷಗಳ ಕಾಲ(ಎರಡು ಘಳಿಗೆ) ಬ್ರಹ್ಮಮಹೂರ್ತ-ಉದಾಹರಣೆಗೆ ಸೂರ್ಯೋದಯ 5:44ಕ್ಕೆ ಆದರೆ 4:08 ರಿಂದ 4:56 ರ ತನಕ ಬ್ರಹ್ಮಮಹೂರ್ತ). ಈ ಮಹೂರ್ತದ ದೇವತೆ ಚತುರ್ಮುಖ ಬ್ರಹ್ಮ. ಈತನೇ ನಮ್ಮ ಚಿತ್ತದ ದೇವತೆ. ಆದ್ದರಿಂದ ಈ ಕಾಲ ಜಪ ಸ್ಮರಣೆ ಮತ್ತು ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಧ್ಯಾನ ಎನ್ನುವುದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಕೇವಲ ಭಗವಂತ ಮತ್ತು ಸಾಧಕ ಜೀವ ಮಾತ್ರ ಇರಬೇಕು, ಮೂರನೆ ಸಂಗಾತಿ ಬಂದರೆ ತೊಂದರೆಯಾಗುತ್ತದೆ. ಒಬ್ಬ ಕಲುಷಿತ ಮನಸ್ಸಿನ(polluted mind) ವ್ಯಕ್ತಿಯಿಂದ ಆತನ ಸುತ್ತಲಿನ ವಾತಾವರಣ ಕೆಡುತ್ತದೆ. ಅದಕ್ಕಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ ಏಕಾಂತವಾಗಿ ಅಭ್ಯಾಸ ಮಾಡಬೇಕು. ನಮ್ಮ ಚಿತ್ತ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು, ಯಾವುದೇ ಆಸೆ ಆಕಾಂಕ್ಷೆ ಮನಸ್ಸಿಗೆ ಸುಳಿಯದಂತೆ, ತೃಪ್ತ ಮನಸ್ಸಿನಿಂದ ಧ್ಯಾನಕ್ಕೆ ಅಣಿಯಾಗಬೇಕು.

ಮುಂದಿನ ಶ್ಲೋಕದಲ್ಲಿ ಧ್ಯಾನಕ್ಕೆ ಕೂರುವ ಸ್ಥಳ ಹೇಗಿರಬೇಕು ಮತ್ತು ಹೇಗೆ ಕುಳಿತುಕೊಳ್ಳಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *