ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 09

ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂದುಷು ।
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ॥೯॥

ಸುಹೃತ್ ಮಿತ್ರ ಅರಿ ಉದಾಸೀನ ಮಧ್ಯಸ್ಥ ದ್ವೇಷ್ಯ ಬಂದುಷು ।

ಸಾಧುಷು ಅಪಿ ಚ ಪಾಪೇಷು ಸಮಬುದ್ಧಿಃ ವಿಶಿಷ್ಯತೇ –ಹೆಳೆಯಿಲ್ಲದೆ ಹಚ್ಚಿಕೊಳ್ಳುವವರು, ಕಷ್ಟ ಕಾಲದಲ್ಲಿ ಎಚ್ಚರಿಸುವವರು, ಕಾಟಕೊಡುವವರು, ಒಳಿತು-ಕೆಡುಕು ಯಾವುದಕ್ಕೂ ಇಲ್ಲದವರು, ಎರಡಕ್ಕೂ ನಿಲ್ಲುವವರು, ಬೇಡವಾದದ್ದನ್ನು ಬಗೆವವರು, ನೆಂಟರು, ಒಳ್ಳೆಯವರು ಮತ್ತು ಕೆಟ್ಟವರು –ಎಲ್ಲರೂ ಮೂಲತಃ ಜ್ಞಾನ ಸ್ವರೂಪರು ಎಂದು ಸಮಭಾವದಿಂದ ಕಾಣುವವನು[ಎಲ್ಲರನ್ನೂ ಅವರವರ ಇರವಿಗೆ ತಕ್ಕಂತೆ ಗೌರವಿಸುವವನು] ಮಿಗಿಲಾದವನು.

ಮನಸ್ಸು ಸಮತೋಲನವಾಗದೆ ಧ್ಯಾನ ಮಾಡಲು ಸಾಧ್ಯವಿಲ್ಲ. ಯಾರ್ಯಾರೋ ಬಗ್ಗೆ ಯಾವುದ್ಯಾವುದೋ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರಂಭಿಸಿದರೆ ಧ್ಯಾನ ಅಸಾಧ್ಯ. ಪ್ರಪಂಚದಲ್ಲಿ ಅನೇಕ ವಿಧದ ಜನರಿರುತ್ತಾರೆ. ಉದಾಹರಣೆಗೆ ಸುಹೃತರು-ಅಂದರೆ ಒಳ್ಳೆಯ ಹೃದಯ ಉಳ್ಳವರು. ಯಾವ ಪ್ರತ್ಯುಪಕಾರ ಬಯಸದೆ ಎಲ್ಲರಿಗೂ ಸಹಾಯ ಮಾಡುವ ಜನರಿವರು. ಇವರ ನಂತರ ‘ಮಿತ್ರ’- ತನ್ನ ಆತ್ಮೀಯನಿಗೆ ಸದಾ ಸಹಾಯ ಮಾಡುವವ, ನಾವು ತಪ್ಪಿದಾಗ ನಮ್ಮನ್ನು ತಿದ್ದುವವನೀತ. ಆರಿಗಳು: ಕೊಲ್ಲುವ ಕೆಟ್ಟ ಶತ್ರುತ್ವ ಸಾಧಿಸುವ ಇವರಿಗೆ ದ್ವೇಷಿಸಲು ಕಾರಣ ಬೇಡ. ಉದಾಸೀನರು: ಇವರು ಒಳ್ಳೆಯದಕ್ಕೂ ಇಲ್ಲ ಕೆಟ್ಟದಕ್ಕೂ ಇಲ್ಲ. ಮಧ್ಯಸ್ಥ: ಒಳ್ಳೆಯದು ಮಾಡಿದಾಗ ಒಳ್ಳೆಯದು, ಕೆಟ್ಟದ್ದು ಮಾಡಿದಾಗ ಕೆಟ್ಟದ್ದು ಮಾಡುವವ. ದ್ವೇಷ್ಯ: ಒಬ್ಬರನ್ನು ಕಂಡು ಸಹಿಸದವ(hatred). ಕೊನೆಯದಾಗಿ ಬಂಧುಗಳು(Relatives).ಹೀಗೆ ಮಾನವ ಜನಾಂಗದಲ್ಲಿ ಒಳ್ಳೆಯರು ಮತ್ತು ಕೆಟ್ಟವರು ತುಂಬಿರುತ್ತಾರೆ.(ದೇವತೆಗಳಲ್ಲಿ- ದಾನವರಲ್ಲಿ ಈ ರೀತಿಯ ಸಮ್ಮಿಶ್ರ ವರ್ಗವಿಲ್ಲ. ದೇವತೆಗಳು ಕೇವಲ ಸಾದುಗಳು, ಅಸುರರು ಸದಾ ಪಾಪಿಗಳು, ಆದರೆ ಮಾನವರಲ್ಲಿ ಮಾತ್ರ ಈ ಎರಡು ಗುಣ ಮಿಶ್ರಿತ ಗುಂಪುಗಳನ್ನು ಕಾಣಬಹುದು). ಧ್ಯಾನದಲ್ಲಿ ನಮಗೆ ಭಗವಂತನ ದರ್ಶನವಾಗಬೇಕಾದರೆ ಮೊದಲು ನಾವು ನಮ್ಮ ಅಂತರಂಗದಲ್ಲಿ ಈ ಎಲ್ಲಾ ರೀತಿಯ ಜನರ ಬಗ್ಗೆ ಸಮಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ನಡವಳಿಕೆ ಆತನು ಬೆಳೆದುಬಂದ ವಾತಾವರಣದಿಂದ ಅಥವಾ ತಿಳುವಳಿಕೆ ಇಲ್ಲದೆ ಇದ್ದುದರಿಂದ ಬಂದದ್ದು ಎಂದು ತಿಳಿದು ಅವನ ಬಗ್ಗೆ ಮನಸ್ಸಿನಲ್ಲಿ ಯಾವ ಕೆಟ್ಟ ಭಾವನೆಯೂ ಇರದಂತೆ ನೋಡಿಕೊಳ್ಳಬೇಕು. ಒಬ್ಬ ನಮ್ಮ ವೈರಿಯಂತೆ ನಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕಾರಣ ಆತನ ಹಾಗು ನಮ್ಮ ಪ್ರಾರಾಬ್ಧ ಕರ್ಮವಿರಬಹುದು. ದೇವರು ಈ ಜನ್ಮದಲ್ಲಿ ಅವನಿಗೆ ಕೊಟ್ಟ ಪಾತ್ರವನ್ನು ಆತ ನಿಭಾಯಿಸುತ್ತಿದ್ದಾನೆ ಎನ್ನುವ ಭಾವದಲ್ಲಿ ಅವನನ್ನು ನೋಡಿದಾಗ ನಮ್ಮಲ್ಲಿ ದ್ವೇಷ ಹುಟ್ಟುವುದಿಲ್ಲ; ಇನ್ನೊಬ್ಬರು ನಮ್ಮನ್ನು ಬೈದಾಗ ನಾವು ಉದ್ವೇಗಕ್ಕೊಳಗಾಗುವುದಿಲ್ಲ-“ಭಗವಂತ ಅವನಿಗೆ ಕೊಟ್ಟ ಪಾತ್ರವನ್ನು ಅದೆಷ್ಟು ಚನ್ನಾಗಿ ನಿಭಾಯಿಸುತ್ತಿದ್ದಾನೆ” ಎನ್ನುವ ಭಾವ ನಮ್ಮಲ್ಲಿ ಮೂಢಬೇಕು. ಸಂಬಂಧಿಕರಿರಲಿ, ಶತ್ರುಗಳಿರಲಿ, ಯಾರೇ ಇರಲಿ ಧ್ಯಾನ ಸಮಯದಲ್ಲಿ ಮನಸ್ಸಿನಲ್ಲಿ ಶುದ್ಧವಾದ ಸಮಭಾವ ನೆಲೆಗೊಂಡಿರಬೇಕು. ಈ ಸ್ಥಿತಿಯಲ್ಲಿ ಧ್ಯಾನಕ್ಕೆ ಕುಳಿತಾಗ ಇವರ್ಯಾರೂ ಎದುರಿಗೆ ಬರದೆ ಆ ಭಗವಂತನ ದರ್ಶನವಾಗುತ್ತದೆ. ಇಲ್ಲಿ ಒಂದು ಎಚ್ಚರದ ವಿಷಯ ಎಂದರೆ ಅಂತರಂಗದ ಸಮಭಾವವನ್ನು ವ್ಯವಹಾರಿಕವಾಗಿ ಹೊರ ಪ್ರಪಂಚದಲ್ಲಿ ಅಳವಡಿಸಲು ಬರುವುದಿಲ್ಲ. ವ್ಯವಹಾರಿಕವಾಗಿ ನಾವು ಹಿಂದೆ ಹೇಳಿದ ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣುವುದು ಅಂದರೆ ಅವರವರನ್ನು ಆಯಾ ಸ್ಥಾನದಲ್ಲಿ ನೋಡುವುದು ವ್ಯಾವಹಾರಿಕ ಪ್ರಪಂಚದ ಸಮದೃಷ್ಟಿ. ತಂದೆಯನ್ನು ತಂದೆಯಂತೆ, ಮಗನನ್ನು ಮಗನಂತೆ ಕಂಡು ನಡೆಯುವುದು, ದುಷ್ಟರಿಂದ ದೂರವಿರುವುದು(ಉಪೇಕ್ಷ) ವ್ಯವಹಾರಿಕ ಪ್ರಪಂಚ. ಅಂತರಂಗ ಪ್ರಪಂಚದಲ್ಲಿ ನಾವು ಎಲ್ಲರಲ್ಲೂ ಆತನ ಒಳಗಿರುವ ಭಗವಂತನನ್ನು ಮಾತ್ರ ಕಾಣಬೇಕು. ಇದು ಧ್ಯಾನಕ್ಕೆ ಬೇಕಾದ ಪೂರ್ವಭಾವಿ ಮನಃಸ್ಥಿತಿ. ಮಾನಸಿಕವಾಗಿ ಎಲ್ಲಾ ಸಂಬಂಧದ ನಂಟನ್ನು ಕಳಚಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಧ್ಯಾನದಲ್ಲಿ ತಂದೆ, ತಾಯಿ, ಗುರು ಶಿಷ್ಯ, ವೈರಿ, ಮಿತ್ರ ಇತ್ಯಾದಿ ವರ್ಗಗಳಿಲ್ಲ. ಎಲ್ಲವೂ ಒಂದೆ, ಅದು ಕೇವಲ ಜ್ಞಾನಸ್ವರೂಪವಾದ ಜೀವ- ಅದರೊಳಗೆ ಬಿಂಬ ರೂಪಿ ಭಗವಂತ. ಇದು ಧ್ಯಾನಕ್ಕೆ ಬೇಕಾದ ಮಾನಸಿಕ ಸ್ಥಿತಿ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *