ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 07 & 08

ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ ।
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ ॥೭॥

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ ।
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ ॥೮॥

ಜಿತ ಆತ್ಮನಃ ಪ್ರಶಾಂತಸ್ಯ ಪರಮ ಆತ್ಮಾ ಸಮಾಹಿತಃ ।

ಶೀತ ಉಷ್ಣ ಸುಖ ದುಃಖೇಷು ತಥಾ ಮಾನ ಅಪಮಾನಯೋಃ ||

ಜ್ಞಾನ ವಿಜ್ಞಾನ ತೃಪ್ತ ಆತ್ಮಾ ಕೂಟ ಸ್ಥಃ ವಿಜಿತ ಇಂದ್ರಿಯ

ಯುಕ್ತಃ ಇತಿ ಉಚ್ಯತೇ ಯೋಗೀ ಸಮಲೋಷ್ಟ ಅಶ್ಮ ಕಾಂಚನಃ –ಬಗೆಯನ್ನು[ಭಕ್ತಿಯಿಂದ ಭಗವಂತನನ್ನು] ಗೆಲಿದವನ, ವಿಷಯಗಳತ್ತ ಸುಳಿಯದೆ ಭಗವಂತನಲ್ಲೆ ನಲಿದವನ ಬಗೆಯಲ್ಲಿ ಭಗವಂತ ನೆಲೆಗೊಳ್ಳುತ್ತಾನೆ. ಅಂತವನು ತಂಪು –ಬಿಸಿ, ಸುಖ –ದುಃಖ ಮತ್ತು ಸಮ್ಮಾನ-ತಿರಸ್ಕಾರ ಇಂಥ ದ್ವಂದ್ವಗಳಲ್ಲಿ ನಿರ್ವಿಕಾರನಾಗಿ ನಿಲ್ಲಬಲ್ಲವನು ; ಭಗವಂತನ ಅರಿವು ಕಾಣ್ಕೆಗಳಿಂದ ಬಗೆದುಂಬಿದವನು; ಇಂದ್ರಿಯಗಳನ್ನು ಹಿಡಿತದಲ್ಲಿಟ್ಟವನು. ಅವನಿಗೆ ಮಣ್ಣು, ಕಲ್ಲು, ಚಿನ್ನ ಎಲ್ಲ ಒಂದೆ. ಇಂಥ ಯೋಗ ಸಾಧಕನು ಗುರಿ ಸೇರಿದವನು ಎನ್ನಿಸುತ್ತಾನೆ.

ಭಕ್ತಿಯಿಂದ ಭಗವಂತನ ಅನುಗ್ರಹ ಪಡೆದಾಗ ಮೊದಲು ಮನಸ್ಸು ಆತನಲ್ಲಿ ನೆಲೆ ನಿಲ್ಲುತ್ತದೆ. ಮನಸ್ಸು ಎಂಥಹ ಪ್ರಸಂಗದಲ್ಲೂ ಉದ್ವೇಗಗೊಳ್ಳುವುದಿಲ್ಲ. “ಪರಮಾತ್ಮಾ ಸಮಾಹಿತಃ” –ಭಗವಂತ ಅವನ ಹೃದಯದಲ್ಲಿ ಬಂದು ನೆಲೆಸಿ ಬಿಡುತ್ತಾನೆ. ನಾವು ಬಯಸಿದಾಗ ಆತನ ಅಂತರ್ದರ್ಶನ ಸಾಧ್ಯ. ಈ ರೀತಿ ಭಗವಂತನನ್ನು ಕಾಣುವವರ, ಅಪರೋಕ್ಷ ಜ್ಞಾನದ ಪರಿಣಾಮ ಏನು ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ವಿವರಿಸುತ್ತಾನೆ ಕೃಷ್ಣ.

ಮುಖ್ಯವಾಗಿ ಅಪರೋಕ್ಷ ಜ್ಞಾನಿಗಳಿಗೆ ಎಂದೂ ಇಂದ್ರಿಯ ಚಾಪಲ ಕಾಡುವುದಿಲ್ಲ. ಅಪಮಾನಕ್ಕೆ ಆತ ಎಂದೂ ಕುಸಿಯುವುದಿಲ್ಲ. ಮಾನಾಪಮಾನ ಆತನಿಗೆ ದೊಡ್ಡ ಸಂಗತಿ ಆಗುವುದಿಲ್ಲ. ಈ ಸ್ಥಿತಿ ತಲುಪಿದವ ಸಿದ್ಧ ಎನಿಸುತ್ತಾನೆ. ಆತ ಎಷ್ಟು ನಿರ್ವೀಕಾರ ಎಂದರೆ ಆತ ಎಲ್ಲವನ್ನೂ ಸಮನಾಗಿ ಕಾಣಲಾರಂಭಿಸುತ್ತಾನೆ. ಧನ-ಕನಕ ಎಲ್ಲವೂ ಬೇಡವೆನಿಸಿ ಅದರಿಂದ ದೂರವಿರುತ್ತಾನೆ. (ರಾಮಕೃಷ್ಣ ಪರಮಹಂಸರ ಆತ್ಮಕಥೆಯನ್ನು ಓದಿದರೆ ಒಬ್ಬ ಅಪರೋಕ್ಷ ಜ್ಞಾನಿಯ ಮನಃಸ್ಥಿತಿ ನಮಗೆ ಅರ್ಥವಾಗುತ್ತದೆ).

ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನಕ್ಕೆ ಪೂರ್ವಭಾವಿಯಾಗಿ ಒಬ್ಬ ಯೋಗಿಯ ಮನಃಸ್ಥಿತಿ ಹೇಗಿರಬೇಕು ಎನ್ನುವ ಬಹಳ ಮಹತ್ವವಾದ ವಿಚಾರವನ್ನು ವಿವರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *