ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 06

ಬಂಧುರಾತ್ಮಾSSತ್ಮನಸ್ತಸ್ಯ ಯೇನಾSತ್ಮೈವಾSತ್ಮನಾ ಜಿತಃ ।
ಅನಾತ್ಮನಸ್ತು ಶತ್ರುತ್ವೇ ವರ್ತೇತಾSತ್ಮೈವ ಶತ್ರುವತ್ ॥೬॥

ಬಂಧುಃ ಆತ್ಮಾ ಆತ್ಮನಃ ತಸ್ಯ ಯೇನ ಆತ್ಮಾ ಏವ ಆತ್ಮನಾ ಜಿತಃ ।

ಅನಾತ್ಮನಃ ತು ಶತ್ರುತ್ವೇ ವರ್ತೇತ ಆತ್ಮಾ ಏವ ಶತ್ರುವತ್-ಯಾವ ಜೀವ ವಿವೇಕದಿಂದ ಬಗೆಯನ್ನು [ಭಕ್ತಿಯಿಂದ ಭಗವಂತನನ್ನು]ಗೆದೆಯಬಲ್ಲದೋ [ಯಾವ ಜೀವದಿಂದ ಬಗೆ ಹದಗೊಂಡಿದೆಯೋ], ಅಂಥ ಜೀವಕ್ಕೆ ಬಗೆ[ಭಗವಂತ]ಗೆಳೆಯ. ಬಗೆಯನ್ನು[ಭಗವಂತನನ್ನು] ಗೆದೆಯಲಾರದವನಿಗೆ ಬಗೆಯೆ [ಭಗವಂತನೆ]ಹಗೆಯಾಳಿನಂತೆ ಎದುರಾಳಿ.

ಯಾರು ಭಗವಂತನನ್ನು ಗೆದ್ದಿದ್ದಾರೋ(ಭಗವಂತನ ಪ್ರೀತಿಗೆ ಪಾತ್ರರಾಗಿದ್ದಾರೋ) ಅವರಿಗೆ ಆತ ಬಂಧು. ಭಗವಂತನ ಪ್ರೀತಿಗೆ ಪಾತ್ರರಾಗಲು ಆತನ ಅನುಗ್ರಹ ಬೇಕು. ಅವನ ಅನುಗ್ರಹದಿಂದ ಅವನನ್ನು ಒಲಿಸಿ ಅವನ ಪ್ರೀತಿಗೆ ಪಾತ್ರರಾದವರಿಗೆ ಆತ ಬಂಧು. ಯಾರು ಭಗವಂತನಿಗೆ ಬೆನ್ನು ಹಾಕಿ ಮುಂದೆ ಸಾಗಿದರೋ ಅವರು ಸದಾ ಭಗವಂತನಿಂದ ದೂರ ಸಾಗುತ್ತಾರೆ. ಆತನಿಗೆ ಬೆನ್ನುಹಾಕಿ ಆತನನ್ನು ದ್ವೇಷಿಸುವವರಿಗೆ ಆತ ಶತ್ರುವಂತೆ ಕಾಣುತ್ತಾನೆ. ಈ ಕಾರಣದಿಂದ ನಿರಂತರ ಭಗವಂತನನ್ನು ಪ್ರಾರ್ಥಿಸು. “ಬಂಧುವಾಗಿ ನನ್ನೊಳಗೆ ಬಂದು ನೆಲೆಸು, ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸು, ನನ್ನನ್ನು ನಿನ್ನತ್ತ ತಿರುಗಿಸಿ ಮುಂದೆ ಕರೆದುಕೊಂಡು ಹೋಗು” ಎನ್ನುವ ಪ್ರಾರ್ಥನೆ ಹಾಗು ಶರಣಾಗತಿ ನಮ್ಮ ಮನಸ್ಸು ಆತನಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ. ಇದು ಧ್ಯಾನದ ಮೊದಲ ಮೆಟ್ಟಿಲು. ಹೀಗೆ ಮನಸ್ಸನ್ನು ಮಣಿಸಲು ಭಗವಂತನ ಅನುಗ್ರಹಪಡೆಯುವ ಪ್ರಯತ್ನ ಮಾಡಿದಾಗ ಏನಾಗುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *