ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 05

ಉದ್ಧರೇದಾತ್ಮನಾSSತ್ಮಾನಂ ನಾSತ್ಮಾನಮವಸಾದಯೇತ್ ।
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ॥೫॥

ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್ ।

ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ –ಬಗೆಯ ಬಲದಿಂದ [ಭಗವಂತನ ಹಸಾದದಿಂದ] ಜೀವವನ್ನು ಮೇಲೆತ್ತಬೇಕು; ಜೀವವನ್ನು ಜಂಜಡಗೊಳಿಸಬಾರದು. ಬಗೆಯೆ[ಭಗವಂತನೆ] ಜೀವದ ಗೆಳೆಯ; ಬಗೆಯೆ[ಭಗವಂತನೆ]ಜೀವದ ಹಗೆಯು.

ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎಂದರೆ ಶರೀರ, ಮನಸ್ಸು, ಜೀವ, ಪರಮಾತ್ಮ. ಹೀಗೆ ಈ ಶ್ಲೋಕದಲ್ಲಿ ಬಂದಿರುವ ಆತ್ಮ ಶಬ್ಧಕ್ಕೆ ಈ ಎಲ್ಲಾ ಅರ್ಥವನ್ನೂ ಜೋಡಿಸಿ ನೋಡಿದರೆ ಅನೇಕ ವಿಚಾರ ಸ್ಪಷ್ಟವಾಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್” ಅಂದರೆ ನಮ್ಮ ಅಧಃಪಾತಕ್ಕೂ ಕಾರಣ ಮನಸ್ಸು. ನಮ್ಮ ಉದ್ಧಾರಕ್ಕೆ ಕಾರಣ ಮನಸ್ಸು. ಆದ್ದರಿಂದ ಮನಸ್ಸಿನಿಂದ(ಆತ್ಮಾನಾ) ಜೀವದ(ಆತ್ಮಾನಂ) ಉದ್ಧಾರದ ದಾರಿಯನ್ನು ಹುಡುಕು ಎನ್ನುತ್ತಾನೆ ಕೃಷ್ಣ. ಎಂದೂ ಮನಸ್ಸನ್ನು ಕೆಳಕ್ಕೆ ಕಳುಹಿಸಬೇಡ. ಆತ್ಮದ(ಜೀವದ) ಅವಸಾನಕ್ಕೆ ಕಾರಣವಾಗುವಂತೆ ಮನಸ್ಸನ್ನು ಸ್ವಚ್ಛಂದವಾಗಿ ಬಿಡಬೇಡ. ಅದನ್ನು ಮೇಲಕ್ಕೆ ಕೊಂಡು ಹೋಗು. ಮನಸ್ಸು ಕೆಳಗೆ ಹೋದರೆ ಅದು ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ‘ಆ ಮನಸ್ಸನ್ನು ಎತ್ತರಕ್ಕೆ ಕಳಿಸು. ಎತ್ತರಕ್ಕೆ ಹೋದ ಮನಸ್ಸು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನಿಂದ ನಿನ್ನ ಜೀವ ಸ್ವರೂಪವನ್ನು ಉದ್ಧಾರ ಮಾಡಿಕೊ. ಜೀವಕ್ಕೆ ಮನಸ್ಸೇ ಬಂಧು, ಮನಸ್ಸೇ ಶತ್ರು. ಆದ್ದರಿಂದ ಸಾಧನೆ ಮಾಡಬೇಕಾದರೆ ಮನಸ್ಸನ್ನು ಬಂಧುವಾಗಿ ಪರಿವರ್ತನೆ ಮಾಡಿಕೊ. ಮನಸ್ಸು ನಿನ್ನ ಶತ್ರುವಾಗಿ ನಿಂತರೆ ನಿನ್ನ ಜೀವಮಾನದಲ್ಲೇ ಉದ್ಧಾರವಿಲ್ಲ. ಅದಕ್ಕಾಗಿ ಮೊದಲು ಬುದ್ಧಿಬಲದಿಂದ ಮನಸ್ಸಿಗೆ ತರಬೇತಿ ಕೊಟ್ಟು ಅದನ್ನು ಗೆಲ್ಲಬೇಕು’ ಎನ್ನುವುದು ಕೃಷ್ಣನ ಸಂದೇಶ. ಮನಸ್ಸನ್ನು ಗೆದ್ದರೆ ಎಲ್ಲವೂ ಪ್ರಶಾಂತ, ಯಾವ ಗೊಂದಲವೂ ಇಲ್ಲ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸ್ಥಿತಿ.

ಕೃಷ್ಣನ ಈ ಸಂದೇಶ ಕೇಳಿದಾಗ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಕೃಷ್ಣನೇ ಹೇಳಿದಂತೆ ಯಾವುದೂ ನಮ್ಮ ಕೈಯಲ್ಲಿಲ್ಲ. ಭಗವಂತನ ಅನುಗ್ರಹವಿಲ್ಲದೆ ನಾವು ನಮ್ಮ ಮನಸ್ಸನ್ನು ಸ್ವತಂತ್ರವಾಗಿ ಎಂದೂ ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಿರುವಾಗ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ಈ ನಮ್ಮ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.ಆತ್ಮ ಎಂದರೆ ಪರಮಾತ್ಮ ಎನ್ನುವ ಸೂಕ್ಷ್ಮ ಅರ್ಥದಲ್ಲಿ ಈ ಶ್ಲೋಕವನ್ನು ನೋಡಿದಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್” ಅಂದರೆ “ಆತ್ಮನಿಂದಲೇ(ಭಗವಂತನಿಂದಲೇ) ಆತ್ಮನನ್ನು(ಜೀವವನ್ನು) ಉದ್ಧರಿಸಬೇಕು. ಸಾಮಾನ್ಯವಾಗಿ ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. “ನನ್ನಿಂದ ಇದು ಸಾಧ್ಯವಿಲ್ಲ” ಎನ್ನುತ್ತದೆ ಮನಸ್ಸು. ಆದರೆ ನಮಗೆ ಭಗವಂತ ಬುದ್ಧಿ ಕೊಟ್ಟಿದ್ದಾನೆ, ನಾವು ಅದನ್ನು ಉಪಯೋಗಿಸಬೇಕು. ಬುದ್ಧಿಯನ್ನು ಉಪಯೋಗಿಸಿ ಆ ಭಗವಂತನಲ್ಲಿ “ನನಗೆ ಒಳ್ಳೆಯ ಮನಸ್ಸನ್ನು ಕೊಡು, ನನ್ನನ್ನು ಉದ್ಧಾರದ ದಾರಿಯಲ್ಲಿ ನಡೆಸು, ಸಾಧನೆ ಮಾಡುವಂತಹ ಸದ್ಭುದ್ಧಿಯನ್ನು ಕೊಡು” ಎಂದು ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸು. ಆತ ನಮ್ಮ ಅತ್ಯಂತ ಆತ್ಮೀಯ ಹಿತಚಿಂತಕ ಬಂಧು. ಅವನೊಬ್ಬನೇ ಯಾವುದೇ ಸ್ವಾರ್ಥವಿಲ್ಲದ ಶಾಶ್ವತ, ನಿರ್ವ್ಯಾಜ, ನಿರಂತರ ಬಂಧು. ಆತ ಖಂಡಿತ ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ನಮ್ಮ ಮನಸ್ಸಿನಲ್ಲಿ ಬಂದು ಕೂರುತ್ತಾನೆ.

ಭಗವಂತ ನಾವು ಆತನನ್ನು ಹೇಗೆ ಕಾಣುತ್ತೇವೆ ಅದೇ ಭಾವದಲ್ಲಿ ವ್ಯಕ್ತನಾಗುತ್ತಾನೆ. ದೇವತೆಗಳು ಆತನನ್ನು ಜ್ಞಾನಿಯಾಗಿ ಕಂಡರು- ಆತ ಅವರಿಗೆ ಜ್ಞಾನಿಯಾಗಿ ಕಾಣಿಸಿಕೊಂಡು ಅವರ ಉದ್ಧಾರ ಮಾಡಿದ. ರಾಕ್ಷಸರು ಆತ ಕೊಲ್ಲುವವವ ಮತ್ತು ಶತ್ರು ಎಂದು ತಿಳಿದು ಅವನನ್ನು ದ್ವೇಷಿಸಿದರು- ಆತ ಅವರಿಗೆ ಶತ್ರುವಾಗಿ ಕಾಣಿಸಿದ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಆತ್ಮಾ ಏವ ರಿಪುಃ ಆತ್ಮನಃ” ಎಂದು. ಅಂದರೆ ನಾವು ಅಹಂಕಾರದಿಂದ ದಾರಿ ತಪ್ಪಿದಾಗ ಆತ ನಮಗೆ ನಮ್ಮ ಶತ್ರುವಿನಂತೆ ಬಾಸವಾಗುತ್ತಾನೆ. ಈ ಬಗ್ಗೆ ಮುಂದಿನ ಶ್ಲೋಕ ಇನ್ನೂ ಹೆಚ್ಚಿನ ವಿವರವನ್ನು ಕೊಡುತ್ತದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *