ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 47

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ ।
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ॥೪೭॥

ಯೋಗಿನಾಮ್ ಅಪಿ ಸರ್ವೇಷಾಮ್ ಮತ್ ಗತೇನ ಅಂತಃ ಆತ್ಮನಾ ।

ಶ್ರದ್ಧಾವಾನ್ ಭಜತೇ ಯಃ ಮಾಮ್ ಸಃ ಮೇ ಯುಕ್ತ ತಮಃ ಮತಃ –ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲ ಧ್ಯಾನಯೋಗಿಗಳಿಗಿಂತಲು ಹಿರಿಯ ಯೋಗಿ ಎಂದು ನನ್ನ ತೀರ್ಮಾನ.

ಧ್ಯಾನವನ್ನು ಮಾಡುವಾಗ ನಾವು ಮನಸ್ಸನ್ನು ಯಾವುದರಮೇಲೆ ಕೂಡ ಏಕಾಗ್ರ ಮಾಡಿ ಧ್ಯಾನ ಮಾಡಬಹುದು. ಕೆಲವರು ಅನೇಕ ಕ್ಷುದ್ರ ದೇವತೆಗಳು, ಭೂತ-ಪ್ರೇತಗಳನ್ನು ಉಪಾಸನೆ ಮಾಡುವವರಿದ್ದಾರೆ. ಆದರೆ ಕೃಷ್ಣ ಹೇಳುತ್ತಾನೆ “ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿ” ಎಂದು. ಭಗವಂತನನ್ನು ಬಿಟ್ಟು ಇನ್ನೇನನ್ನೋ ಧ್ಯಾನ ಮಾಡಿದರೆ ಏನೂ ಉಪಯೋಗವಿಲ್ಲ. ನಮ್ಮ ಜೋತಿಷಿಗಳು ಸಾಮಾನ್ಯವಾಗಿ ‘ಇಂತಹ ಗ್ರಹಚಾರಕ್ಕೆ ಇಂತಹ ದೇವತೆಯನ್ನು ಉಪಾಸನೆ ಮಾಡು’ ಎಂದು ಹೇಳುತ್ತಾರೆ. ಅದರರ್ಥ ಭಗವಂತನನ್ನು ಆ ಪ್ರತೀಕದಲ್ಲಿ ಕಾಣು ಎಂದರ್ಥ. ಯಾವುದೇ ದೇವತೆಯನ್ನು ಉಪಾಸನೆ ಮಾಡುವಾಗ ಆ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡದಿದ್ದರೆ ಅದು ನಿಜವಾದ ಯೋಗವಾಗುವುದಿಲ್ಲ. ಧ್ಯಾನದಲ್ಲಿ ಕೇವಲ ಭಗವಂತನನ್ನು ಕಾಣಬೇಕು ಎನ್ನುವ ಬಯಕೆ ಮತ್ತು ಎಲ್ಲಾ ಪ್ರತೀಕದಲ್ಲೂ ಅವನನ್ನೇ ಕಾಣುವುದು ಶ್ರೇಷ್ಠವಾದ ಯೋಗ. ಈ ರೀತಿ ಬದುಕಿದಾಗ ನಮ್ಮ ಬದುಕೇ ಒಂದು ಯೋಗವಾಗುತ್ತದೆ.

ಇತಿ ಷಷ್ಠೋSಧ್ಯಾಯಃ
ಆರನೆಯ ಅಧ್ಯಾಯ ಮುಗಿಯಿತು

ಇಲ್ಲಿಗೆ ಭಗವದ್ಗೀತೆಯ ಮೊದಲ ಷಟ್ಕ(ಮೊದಲ ಆರು ಅಧ್ಯಾಯ) ಮುಗಿಯಿತು. ಈ ಷಟ್ಕದಲ್ಲಿ ಭಗವಂತನ ಉಪಾಸನೆಯ ಜ್ಞಾನ ಮತ್ತು ಸಾಂಖ್ಯವನ್ನು ಕೃಷ್ಣ ವಿವರಿಸಿದ. ಜ್ಞಾನಪೂರ್ವಕವಾಗಿ ಭಗವದುಪಾಸನೆಯನ್ನು ಮಾಡುವಂತಹ ವಿಧಾನವನ್ನು ಗೀತೆಯ ಮೊದಲ ಷಟ್ಕ ವಿವರಿಸುತ್ತದೆ. ಮುಂದೆ ಭಗವಂತನನ್ನು ಉಪಾಸನೆ ಮಾಡುವ ವಿಷಯಾಂಶ(aspect) ಮತ್ತು ಭಗವಂತನ ಮಹಿಮೆ-ಅದರ ವಿವರಗಳು ಬರುತ್ತವೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *