ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 46

ತಪಸ್ವಿಭ್ಯೋSಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ ।
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ ಭವಾರ್ಜುನ ॥೪೬॥

ತಪಸ್ವಿಭ್ಯಃ ಅಧಿಕಃ ಯೋಗೀ ಜ್ಞಾನಿಭ್ಯಃ ಅಪಿ ಮತಃ ಅಧಿಕಃ ।

ಕರ್ಮಿಭ್ಯಃ ಚ ಅಧಿಕಃ ಯೋಗೀ ತಸ್ಮಾತ್ ಯೋಗೀ ಭವ ಅರ್ಜುನ-ಧ್ಯಾನ ಯೋಗದ ಸಾಧಕ ಉಪವಾಸ ಮೊದಲಾದ ವ್ರತಸಾಧಕರಿಗಿಂತ ಮಿಗಿಲು; ಬರಿಯ ಧ್ಯಾನಯೋಗದ ಬಗೆಯನ್ನು ಬಲ್ಲವರಿಗಿಂತಲೂ ಮಿಗಿಲು ಎನ್ನುವುದು ತೀರ್ಮಾನ. ಕರ್ಮ ಯೋಗಿಗಳಿಗಿಂತಲು ಮಿಗಿಲು. ಆದ್ದರಿಂದ ಓ ಅರ್ಜುನ , ನೀನು ಧ್ಯಾನಯೋಗಿಯಾಗು.

ಯಾರು ಅಂತರಂಗದಲ್ಲಿ ಏಕಾಗ್ರವಾಗಿ ಭಗವಂತನನ್ನು ಧ್ಯಾನಿಸಬಲ್ಲ ಅವನು ತಪಸ್ಸು ಮಾಡುವವನಿಗಿಂತ ದೊಡ್ಡವ ಎನ್ನುತ್ತಾನೆ ಕೃಷ್ಣ. ಇಲ್ಲಿ ತಪಸ್ಸು ಎಂದರೆ ನಾವು ಮಾಡುವ ವೃತಾಚರಣೆ. ದೇಹ ದಂಡನೆ, ಏಕಾದಶಿ ಉಪವಾಸ, ಬ್ರಹ್ಮಚರ್ಯಪಾಲನೆ ಇತ್ಯಾದಿ. ಬಾಹ್ಯವಾದ ನೂರಾರು ವೃತಾಚರಣೆ, ಹೋಮ-ಹವನ ಮಾಡುವವರಿಗಿಂತಲೂ ಅಂತರಂಗದಲ್ಲಿ ಧ್ಯಾನ ಮಾಡತಕ್ಕವನು ಭಗವಂತನಿಗೆ ಹೆಚ್ಚು ಪ್ರಿಯ. ಅವನು ಜ್ಞಾನಿಗಳಿಗಿಂತಲೂ ದೊಡ್ಡವನು ಎನ್ನುತ್ತಾನೆ ಕೃಷ್ಣ. ಅಂದರೆ ಧ್ಯಾನದ ಬಗ್ಗೆ, ಶಾಸ್ತ್ರದ ಬಗ್ಗೆ ಕೇವಲ ತಿಳಿದಿರುವವರಿಗಿಂತ ಧ್ಯಾನ ಮಾಡುವವನು ದೊಡ್ಡವನು. ಇಂದು ಅಧ್ಯಾತ್ಮದ ಬಗ್ಗೆ ಮಾತನಾಡುವವರು ಸಿಗುತ್ತಾರೆ ಹೊರತು ನಿಜವಾದ ಧ್ಯಾನ ಯೋಗಿಗಳು ಅತೀ ವಿರಳ(“There are nowadays professors of philosophy, but not philosophers”- Henry David Thoreau, Walden).

ನಮ್ಮಲ್ಲಿ ಕೆಲವರು ಕರ್ಮಟರು. ಯಜ್ಞ-ಯಾಗ ಮಾಡುವುದು, ಅಗ್ನಿ ಮುಖೇನ ಭಗವಂತನ ಆರಾದನೆ ಮಾಡುವವರು. ಅಂತರಂಗದಲ್ಲಿ ಭಗವಂತನನ್ನು ಕಾಣುವುದಕ್ಕೊಸ್ಕರ ಈ ಕರ್ಮ. ಇದೇ ರೀತಿ ಪ್ರತಿಮಾಪೂಜೆ. ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದೆ ಅದು ಅಂತರಂಗದಲ್ಲಿ ಭಗವಂತನನ್ನು ಕಾಣಲು ಸಹಾಯ ಮಾಡುವ ಸಂಕೇತ ಎನ್ನುವ ಜ್ಞಾನ ನಮಗಿರಬೇಕು. ಮಾನಸ ಪೂಜೆ ಇಲ್ಲದೆ ಬಾಹ್ಯ ಪೂಜೆ ಪೂಜೆಯೇ ಅಲ್ಲ. ಆದ್ದರಿಂದ ಬರೇ ಕರ್ಮಾಟನಾಗಿ ಬಾಹ್ಯ ಪೂಜೆ ಮಾಡುವವನಿಗಿಂತ ಮಾನಸ ಪೂಜೆ ಮಾಡುವ ಧ್ಯಾನಯೋಗಿ ದೊಡ್ಡವ. “ ಆದ್ದರಿಂದ ನೀನು ಜೀವನದಲ್ಲಿ ಧ್ಯಾನಯೋಗಿಯಾಗು, ಅಂತರಂಗದ ಧ್ಯಾನದಲ್ಲಿ ತೊಡಗು. ಆ ಧ್ಯಾನದಲ್ಲಿ ತೊಡಗಿದ ಮೇಲೆ ನಿನ್ನ ಬಾಹ್ಯ ಕರ್ಮಗಳು ನಿನಗೆ ಲೇಪವಾಗುವುದಿಲ್ಲ. ಆಗ ಯುದ್ಧವೂ ಕೂಡಾ ಭಗವದ್ ಪೂಜೆಯಾಗುತ್ತದೆ” ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *