ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 04

ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ ।
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥೪॥

ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ ।

ಸರ್ವ ಸಂಕಲ್ಪ ಸಂನ್ಯಾಸೀ ಯೋಗಾರೂಢ ತದಾ ಉಚ್ಯತೇ –ಎಲ್ಲ ಕರ್ಮದ ಹೊಣೆಯನ್ನೂ ಭಗವಂತನಿಗರ್ಪಿಸಿ, ಇಂದ್ರಿಯ ವಿಷಯಗಳಲ್ಲಿ ಮತ್ತು ಕರ್ಮಗಳಲ್ಲಿ ಬಗೆಯ ನಂಟು ಕಳೆದುಕೊಂಡಾಗ ಸಾಧನೆಯ ಗುರಿ ಸೇರಿದವನೆನಿಸುತ್ತಾನೆ.

ಅಪರೋಕ್ಷ ಜ್ಞಾನಿಯ ಲಕ್ಷಣವನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ” ಎಂದು. ಅಂದರೆ ಅಪರೋಕ್ಷ ಜ್ಞಾನಿಗಳು ಇಂದ್ರಿಯಗಳನ್ನು ಸೆಳೆಯುವ ಸಂಗತಿಗಳಲ್ಲಿ (ಶಬ್ದ, ರೂಪ, ರಸ, ಗಂಧ, ಸ್ಪರ್ಶ), ಅಥವಾ ಯಾವ ವಿಷಯದಲ್ಲೂ ಅಂಟಿಕೊಂಡಿರುವುದಿಲ್ಲ. ಆತ ಕ್ರಿಯೆ ಮಾಡುತ್ತಾನೆ ಆದರೆ ಅದಕ್ಕೆ ತನ್ನನ್ನು ಅಂಟಿಸಿಕೊಳ್ಳುವುದಿಲ್ಲ. ಸಾಧನೆಯ ಹಾದಿಯಲ್ಲಿರುವ ಸಾಧಕ ಕಷ್ಟಪಟ್ಟು ಇಂದ್ರಿಯ ನಿಗ್ರಹ ಮಾಡಿದರೆ ಅಪರೋಕ್ಷ ಜ್ಞಾನಿಗಳಿಗೆ ಇದು ಸಹಜ ಧರ್ಮವಾಗಿರುತ್ತದೆ. ಋಗ್ವೇದದಲ್ಲಿ ಹೇಳುವಂತೆ “ಎಲ್ಲ ಜಗತ್ತಿನ ನಿಯಾಮಕನಾದ ನರಸಿಂಹ-ಅವನ ಬಯಕೆಯೇ ನನ್ನ ಬಯಕೆಯಾಗಲಿ.ಅವನ ಹೃದಯದಲ್ಲಿ ಏನು ಬಯಕೆ ಇದೆ ಅದೇ ನನ್ನ ಭಾವನೆಯಾಗಲಿ. ಅದಕ್ಕೆ ವಿರುದ್ಧವಾದ ಸಂಕಲ್ಪ ನನಗೆ ಬಾರದೇ ಇರಲಿ”. ಈ ರೀತಿ ಅಪರೋಕ್ಷಜ್ಞಾನಿ ಬಯಸುತ್ತಾನೆ. ಅವನು ಏನನ್ನೂ ಕೂಡಾ ಇಂದ್ರಿಯದ ಮೂಲಕ ಅನುಭವಿಸಬೇಕು ಎಂದು ಬಯಸುವುದಿಲ್ಲ, ಪರಿತಪಿಸುವುದಿಲ್ಲ. ಇಂದ್ರಿಯದ ಮೂಲಕ ಬಂದ ಅನುಭವದಿಂದ ಪ್ರಭಾವಿತನಾಗಿ ಅದಕ್ಕೆ ಅಂಟಿಕೊಳ್ಳುವುದೂ ಇಲ್ಲ. ಎಲ್ಲವನ್ನೂ ತಟಸ್ಥವಾಗಿ ನೋಡುತ್ತಿರುತ್ತಾನೆ. ನಾವು ಸಮುದ್ರದ ತಟದಲ್ಲಿ ಕುಳಿತು ಸಮುದ್ರವನ್ನು ನೋಡುತ್ತಿದ್ದರೆ ಅಲ್ಲಿ ಅನೇಕ ರೀತಿಯ ಅಲೆಗಳಿರುತ್ತವೆ. ನಾವು ಆ ಅಲೆಗಳನ್ನು ನೋಡಿ ಆನಂದಿಸುತ್ತಿರುತ್ತೇವೆ. ಅಲ್ಲಿ ಬರುವ ತೆರೆಗಳ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಯಾವ ಅಲೆ ಹೇಗೆ ಬಂತೋ ಹಾಗೆ ತಟಸ್ಥವಾಗಿ ಆಸ್ವಾದಿಸುವುದರಲ್ಲಿ ಆನಂದವಿದೆ. ಜೀವನ ಸಾಗರದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಅಲೆಗಳಂತೆ ಬಂದು ಹೋಗುತ್ತಿರುತ್ತವೆ. ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಸಮುದ್ರದ ಅಲೆಯನ್ನು ನೋಡಿ ಸಂತೋಷಪಟ್ಟಂತೆ ಈ ಜೀವನದ ಅಲೆಯನ್ನು ಸಹಜವಾಗಿ ನೋಡಿ ಸಂತೋಷಪಡುತ್ತ ಬಾಳುವುದೇ ಅಪರೋಕ್ಷ ಜ್ಞಾನಿಯ ಲಕ್ಷಣ.

ಈ ಅಧ್ಯಾಯದಲ್ಲಿ ಕೃಷ್ಣ ಧ್ಯಾನದ ಸಂಪೂರ್ಣ ಪ್ರಕ್ರೀಯೆಯನ್ನು ಮುಂದೆ ವಿವರಿಸುತ್ತಾನೆ. ಅದಕ್ಕಾಗಿ ನಮ್ಮ ಮನಸ್ಸನ್ನು ಹೇಗೆ ಸಜ್ಜುಗೊಳಿಸಬೇಕು, ನಾವೂ ಯೋಗಾರೂಢರಾಗಬೇಕಾದರೆ ಏನು ಮಾಡಬೇಕು ಎನ್ನುವುದರ ಪ್ರಸ್ತಾವನೆ ಮುಂದಿನ ಶ್ಲೋಕ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *