ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 35

ಭಗವಾನುವಾಚ ।
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ॥೩೫॥

ಭಗವಾನುವಾಚ-ಭಗವಂತ ಹೇಳಿದನು :

ಅಸಂಶಯಮ್ ಮಹಾಬಾಹೋ ಮನಃ ದುರ್ನಿಗ್ರಹಮ್ ಚಲಮ್ |

ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ –ಮಹಾವೀರ, ಖಂಡಿತ ಹೌದು;ಬಗೆ ಚಪಲವಾದದ್ದು, ಹಿಡಿತಕ್ಕೆ ಸಿಗದ್ದು. ಆದರೆ ಕೌಂತೇಯ, ಮರಳಿ ಮರಳಿ ಯತ್ನಿಸುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ಬಿಗಿಹಿಡಿಯಬಹುದು.

ಕೃಷ್ಣ ಹೇಳುತ್ತಾನೆ “ನೀನು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮನಸ್ಸನ್ನು ತಡೆ ಹಿಡಿಯುವುದು ಸುಲಭದ ಕೆಲಸವಲ್ಲ, ಆದರೆ ಅಭ್ಯಾಸ ಮತ್ತು ವೈರಾಗ್ಯದಿಂದ ಇದನ್ನು ಕ್ರಮೇಣವಾಗಿ ಸಾಧಿಸಬಹುದು” ಎಂದು. ನಾವು ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುವ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಅದನ್ನು ಬಿಟ್ಟು ನಾವು ಹೇಳಿದಂತೆ ಮನಸ್ಸು ಕೇಳುವಂತೆ ಮಾಡುವ ಪ್ರಯತ್ನವನ್ನು ನಾವೆಂದೂ ಮಾಡಿರುವುದಿಲ್ಲ. ಇಲ್ಲಿ ಕೃಷ್ಣ ವೈರಾಗ್ಯ ಮತ್ತು ಅಭ್ಯಾಸ ಎನ್ನುವ ಎರಡು ವಿಚಾರವನ್ನು ಒತ್ತುಕೊಟ್ಟು ಹೇಳುತ್ತಾನೆ. ವೈರಾಗ್ಯ ಎಂದರೆ ಯಾವುದರ ಕಡೆ ಮನಸ್ಸು ಹರಿಯಬಾರದೋ ಅದನ್ನು ಮನಸ್ಸಿಗೆ ಉಣಿಸದೇ(Feed) ದೂರವಿಡುವುದು. ನಮಗೆ ದೇವರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿದುಕೊಳ್ಳುವ ಬುದ್ಧಿ ಕೊಟ್ಟಿದ್ದಾನೆ. ಆ ಬುದ್ಧಿಯನ್ನು ಉಪಯೋಗಿಸಿ ನಮ್ಮ ಮನಸ್ಸನ್ನು ಕೆಟ್ಟದರಿಂದ ದೂರವಿರಿಸುವುದು. ಕೆಟ್ಟದ್ದನ್ನು ಮನಸ್ಸಿಗೆ ಪರಿಚಯ ಮಾಡಿಕೊಡದೇ ಇರುವುದು. ಹೀಗೆ ಯಾವುದು ನಮ್ಮ ಬೆಳವಣಿಗೆಗೆ ಬಾದಕವೋ ಅದನ್ನು ಮನಸ್ಸಿನಿಂದ ದೂರವಿಡುವುದು ವೈರಾಗ್ಯ. ಇದರ ಜೊತೆಗೆ ನಿರಂತರವಾಗಿ ಏಕಾಗ್ರತೆಗೆ ಬೇಕಾದ ಅಭ್ಯಾಸವನ್ನು ತಪ್ಪದೆ ಮಾಡುವುದು. ಇದರಿಂದ ನಾವು ಮನಸ್ಸನ್ನು ಖಂಡಿತವಾಗಿ ನಿಯಂತ್ರಿಸಬಹುದು ಎನ್ನುತ್ತಾನೆ ಕೃಷ್ಣ.

ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಗೆ ಪ್ರತೀ ದಿನ ಬೇಡದ ತರಬೇತಿಯನ್ನೇ ಕೊಡುತ್ತೇವೆ. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯದಲ್ಲಿ ದೂರದರ್ಶನದಲ್ಲಿ ಬರುವ ಯಾವುದೋ ದೈನಂದಿನ ದಾರಾವಾಹಿ, ಸಿನಿಮ ಇತ್ಯಾದಿ ವಿಷಯದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ. ನಮಗೆ ಆಧ್ಯಾತ್ಮಿಕ ಗ್ರಂಥಗಳನ್ನು ಓದಲು ಸಮಯವೇ ಇರುವುದಿಲ್ಲ! ದೇವರ ಪೂಜೆ ಮಾಡುವಾಗ ಕೂಡಾ ನಮಗೆ ಆ ದಾರಾವಾಹಿಯ ಮುಂದಿನ ಭಾಗದ ಚಿಂತೆ. ನಾವು ರಾತ್ರಿ ಮಲಗುವಾಗ ಯಾವುದೋ ಕೆಟ್ಟ ಪುಸ್ತಕವನ್ನು ಓದಿ, ಕೆಟ್ಟ ದಾರಾವಾಹಿಯನ್ನು ನೋಡಿ ಮಲಗುವ ಬದಲು, ಒಳ್ಳೆಯ ಅಧ್ಯಾತ್ಮಿಕ ಗ್ರಂಥವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ನಮಗೆ ಬೇಡವಾದ ವಿಷಯದತ್ತ ವೈರಾಗ್ಯ ಸಾಧಿಸಬೇಕು. ಇದು ಕೇವಲ ಒಂದು ಉದಾಹರಣೆಯಷ್ಟೇ, ನಾವು ನಮ್ಮ ದೈನಂದಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ.

ಮನಸ್ಸು ತನಗೆ ತಿಳಿಯದ ವಿಷಯದತ್ತ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಒಮ್ಮೆ ರುಚಿ ನೋಡಿದರೆ ಅದು ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಮಧ್ಯ ಸೇವನೆ. ಎಂದೂ ಮಧ್ಯ ಸೇವನೆ ಮಾಡದವನಿಗೆ ಅದು ಅಸಹ್ಯ, ಆದರೆ ಒಮ್ಮೆ ಒತ್ತಾಯದಿಂದ ಬೇಡದ ಮಧ್ಯವನ್ನು ಸೇವಿಸಿ ನಮ್ಮ ಮನಸ್ಸಿಗೆ ಅದರ ಪರಿಚಯ ಮಾಡಿಸಿದಾಗ ನಮ್ಮ ಮನಸ್ಸು “ಹೇಗೂ ಒಮ್ಮೆ ಕುಡಿದಿದ್ದೀಯ ಇನ್ನೊಮ್ಮೆ ಕುಡಿದರೆ ಏನೂ ಆಗುವುದಿಲ್ಲ-ಕುಡಿ” ಎಂದು ಹೇಳುತ್ತದೆ! ಇದರ ಪರಿಣಾಮ ಏನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.

ನಮ್ಮ ಇನ್ನೊಂದು ಮಹಾ ತಪ್ಪು ಎಂದರೆ ಬೇಡದ ವಿಷಯದಲ್ಲಿ ತಲೆ ಹಾಕುವುದು. “ಯಾರೋ ಏನೋ ಮಾಡಿದರಂತೆ”-ಈ ರೀತಿ ಒಂದು ಮಾತು ನಮ್ಮ ಕಿವಿಗೆ ಬಿದ್ದಾಗ ನಾವು ನಮಗೆ ಆ ವಿಚಾರವನ್ನು ತಿಳಿಯುವುದರಿಂದ ಏನು ಉಪಯೋಗ ಎಂದು ಯೋಚಿಸದೆ ಆ ವಿಷಯಕ್ಕೆ ತಲೆ ಹಾಕುತ್ತೇವೆ. ಒಮ್ಮೆ ತಲೆ ಹಾಕಿದರೆ ಮತ್ತೆ ಮನಸ್ಸು ಅದನ್ನು ಬಿಡುವುದಿಲ್ಲ. ಎಲ್ಲವನ್ನೂ ಬಿಟ್ಟು ಆ ವಿಷಯದ ಬೆನ್ನು ಹತ್ತುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ತಲೆ ಹಾಕುವ ಮೊದಲು ಆ ವಿಷಯದ ಬಗ್ಗೆ ಬುದ್ಧಿಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನಸ್ಸು ಇಲ್ಲ ಸಲ್ಲದ ವಿಚಾರದ ಹಿಂದೆ ಓಡದಂತೆ ತಡೆಹಿಡಿಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಗ್ರೀಕ್ ದೇಶದ ಸೋಕ್ರಾಟೆಸ್ ಎನ್ನುವ ವಿಚಾರವಾಧಿಯ ಮೂರು ಹಂತದ ಸೋಸುವಿಕೆ ಎನ್ನುವ ಕಥೆ(The Socrates Triple Filter Test). ಒಮ್ಮೆ ಸೋಕ್ರಾಟೆಸ್ ನ ಒಬ್ಬ ಪರಿಚಯದ ವ್ಯಕ್ತಿ ಬಂದು ಸೋಕ್ರಾಟೆಸ್ ನಲ್ಲಿ ಈ ರೀತಿ ಹೇಳುತ್ತಾನೆ “ನಾನು ನಿನ್ನ ಮಿತ್ರನ ಬಗ್ಗೆ ಏನು ಕೇಳಿದೆ ಗೊತ್ತಾ?( Do you know what I just heard about your friend?)” ಎಂದು. ತಕ್ಷಣ ಸೋಕ್ರಾಟೆಸ್ ಹೇಳುತ್ತಾನೆ “ಸ್ವಲ್ಪ ನಿಲ್ಲು (Hold on a minute); ನೀನು ನನ್ನ ಮಿತ್ರನ ಬಗ್ಗೆ ಏನನ್ನಾದರೂ ಹೇಳುವ ಮೊದಲು ನಾನು ಮೂರು ವಿಚಾರವನ್ನು ತಿಳಿಯ ಬಯಸುತ್ತೇನೆ. ಮೊದಲಿಗೆ ನೀನು ಹೇಳಲು ಹೊರಟಿರುವ ವಿಚಾರದ ಬಗ್ಗೆ ನಿನಗೆ ನೈಜ ಮಾಹಿತಿ ಇದೆಯೋ?(Have you made absolutely sure that what you are about to tell me is true?)”. ಆಗ ಆ ವ್ಯಕ್ತಿ ಹೇಳುತ್ತಾನೆ “ ಇಲ್ಲ…. ಆದರೆ ನಾನು ಈ ವಿಚಾರವನ್ನು ಕೇಳಿಸಿಕೊಂಡೆ…(“No, actually I just heard about it and…)” ಎಂದು. ಈಗ ಸೋಕ್ರಾಟೆಸ್ ಕೇಳುತ್ತಾನೆ “ ಅಂದರೆ ನಿನಗೆ ಆ ವಿಚಾರ ಸರಿಯಾಗಿ ತಿಳಿದಿಲ್ಲ(So you don’t really know if it’s true or not), ಇರಲಿ, ನೀನು ಹೇಳಬೇಕೆಂದಿರುವ ವಿಚಾರ ತುಂಬಾ ಒಳ್ಳೆಯ ವಿಚಾರವೋ?( Is what you are about to tell me about my friend something good?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ ಅದು ಒಳ್ಳೆಯ ವಿಚಾರವಲ್ಲ(No, on the contrary…)” ಎಂದು. ಕೊನೆಯದಾಗಿ ಸೋಕ್ರಾಟೆಸ್ ಕೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನನಗೆ ಉಪಯೋಗಕ್ಕೆ ಬರುವ ವಿಚಾರವೋ?( Is what you want to tell me about my friend going to be useful to me?)”. ಆಗ ಆ ವ್ಯಕ್ತಿ ಹೇಳುತ್ತಾನೆ “ಅಲ್ಲ (No, not really)” ಎಂದು. ಈಗ ಸೋಕ್ರಾಟೆಸ್ ಹೇಳುತ್ತಾನೆ “ನೀನು ಹೇಳಲು ಹೊರಟಿರುವ ವಿಚಾರ ನಿಜವಲ್ಲ, ಒಳ್ಳೆಯ ವಿಚಾರವಲ್ಲ, ಉಪಯೋಗಕ್ಕೆ ಬರುವ ವಿಚಾರವಲ್ಲ ಮತ್ತೆ ಏಕೆ ನನಗೆ ಹೇಳುತ್ತೀಯ?( if what you want to tell me is neither true nor good nor even useful, why tell it to me at all)”.

ಸ್ನೇಹಿತರೆ, ಇಲ್ಲಿ ನಾವು ಕಲಿಯಬೇಕಾದ ವಿಚಾರವೇನೆಂದರೆ ಮನಸ್ಸನ್ನು ಇಲ್ಲ ಸಲ್ಲದ ವಿಚಾರದಲ್ಲಿ ತೊಡಗಿಸುವ ಮೊದಲು ವಿಷಯವನ್ನು ಮೂರು ಬಾರಿ ಸೋಸುವುದನ್ನು ಕಲಿಯಿರಿ. ಬೇಡದ ವಿಚಾರದಲ್ಲಿ ವೈರಾಗ್ಯವನ್ನು ತಾಳಿ ಮತ್ತು ಮನಸ್ಸನ್ನು ಏಕಾಗ್ರಮಾಡುವ ಸಾಧನೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಿ. ಈ ಮಾರ್ಗದಲ್ಲಿ ಸಾಗಿದವರಿಗೆ ಧ್ಯಾನಯೋಗ ಎಂದೂ ಅಸಾಧ್ಯವಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *