ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 32

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋSರ್ಜುನ ।
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥೩೨॥

ಆತ್ಮಔಪಮ್ಯೇನ ಸರ್ವತ್ರ ಸಮಮ್ ಪಶ್ಯತಿ ಯಃ ಅರ್ಜುನ ।

ಸುಖಮ್ ವಾ ಯದಿ ವಾ ದುಃಖಮ್ ಸಃ ಯೋಗೀ ಪರಮಃ ಮತಃ –ಸುಖವಿರಲಿ, ದುಃಖವಿರಲಿ, ಎಲ್ಲರ ಬೇಕು-ಬೇಡಗಳನ್ನು ತನ್ನ ಹಾಗೆಯೇ ಸಮಾನತೆಯಿಂದ ಕಾಣುವವನು, ಓ ಅರ್ಜುನ, ಬಹಳ ದೊಡ್ಡ ಸಾಧಕ ಎನ್ನುವುದು ತೀರ್ಮಾನ.

ಕೃಷ್ಣ ನಮಗೆ ಸಮದೃಷ್ಟಿ ಬಗ್ಗೆ ಹಿಂದೆ ಕೂಡಾ ಹೇಳಿದ್ದ. ಇಲ್ಲಿ ಮುಖ್ಯವಾಗಿ ಸಾತ್ವಿಕರೊಂದಿಗೆ, ಭಗವದ್ಭಕ್ತರೊಂದಿಗೆ ಒಬ್ಬ ಸಾಧಕ ಯಾವ ರೀತಿ ಸಮದರ್ಶನ ಬೆಳೆಸಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿದ್ದಾನೆ. ಯೋಗಿಗಳಲ್ಲಿ ಶ್ರೇಷ್ಠನಾದವನು ತನ್ನಂತೆಯೇ ಇನ್ನೊಬ್ಬರು ಎಂದು ತಿಳಿದಿರುತ್ತಾನೆ. ನಮಗೆ ಯಾವುದು ದುಃಖವಾಗುತ್ತದೋ ಅದು ಇನ್ನೊಬ್ಬರಿಗೂ ದುಃಖವನ್ನು ಕೊಡುತ್ತದೆ ಎನ್ನುವ ಸತ್ಯವನ್ನು ಆತ ಅರಿತಿರುತ್ತಾನೆ. ಎಲ್ಲರಿಗೂ ಸುಖ-ದುಃಖಗಳಿವೆ, ನನ್ನನಂತೆಯೇ ಅವರು ದುಃಖವನ್ನು ಇಷ್ಟಪಡುವುದಿಲ್ಲ ಎನ್ನುವ ಎಚ್ಚರದಿಂದ ಸಾಧಕ ವ್ಯವಹರಿಸುತ್ತಾನೆ. ಯಾರು ಇನ್ನೊಬ್ಬರ ನೋವನ್ನು ತನ್ನ ನೋವಿನಷ್ಟೇ ನೋವಿನಿಂದ ಕಾಣುತ್ತಾನೋ, ಯಾರು ಇನ್ನೊಬ್ಬರ ಸಂತೋಷವನ್ನು- ಯಶಸ್ಸನ್ನು ತನ್ನ ಯಶಸ್ಸೆಂದು ತಿಳಿದು ಖುಷಿ ಪಡುತ್ತಾನೋ- ಅವನು ಬಹಳ ದೊಡ್ಡ ಯೋಗ ಸಾಧಕ.

ಭಗವದ್ಭಕ್ತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ಆದ್ದರಿಂದ ಅವರ ಸುಖ-ದುಃಖಕ್ಕೆ ನಾವು ಸ್ಪಂದಿಸಿದಾಗ ಅದು ಅವರೊಳಗಿನ ಭಗವಂತನ ಪೂಜೆಯಾಗುತ್ತದೆ.

ಈ ಅಧ್ಯಾಯದಲ್ಲಿ ಇಲ್ಲಿಯವರೆಗೆ ಧ್ಯಾನದ ಬಗ್ಗೆ ಕೃಷ್ಣ ವಿಸ್ತಾರವಾಗಿ ಹೇಳಿದ. ಕೃಷ್ಣನ ಈ ವಿವರಣೆಯಲ್ಲಿ ಎಲ್ಲರಿಗೂ ಕಾಣುವ ಒಂದೇ ಒಂದು ಸರ್ವೇ ಸಾಮಾನ್ಯ ಕಷ್ಟದ ವಿಷಯವೆಂದರೆ ‘ಚಂಚಲ ಮನಸ್ಸನ್ನು ಹೊಂದಿದ ನಾವು ಅದನ್ನು ನಿಯಂತ್ರಿಸಿ ಸಮದೃಷ್ಟಿ ಬೆಳೆಸಿಕೊಳ್ಳುವುದು’. ಇದು ನಿಜವಾಗಲೂ ಸಾಧ್ಯವೇ? ಮುಂದಿನ ಶ್ಲೋಕದಲ್ಲಿ ಅರ್ಜುನ ನಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಮಂಡಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *