ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 29

ಧ್ಯಾನ ಪ್ರಕ್ರಿಯೆಯನ್ನು ವಿವರಿಸಿದ ಕೃಷ್ಣ ಮುಂದಿನ ಶ್ಲೋಕದಲ್ಲಿ ಭಗವಂತನಲ್ಲಿ ಎಂತಹ ಗುಣದ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ದೇವರು ಎಂದರೆ ಎಲ್ಲೋ ಸತ್ಯಲೋಕದಿಂದಾಚೆಗಿನ ವೈಕುಂಠದಲ್ಲಿನ ಅಂತಃಪುರದ ಕೋಣೆಯಲ್ಲಿ ಕುಳಿತ ಒಬ್ಬ ವ್ಯಕ್ತಿ ಎಂದು ಅನುಸಂಧಾನ ಮಾಡುವುದಲ್ಲ. ದೇವರು ಎನ್ನುವ ಕಲ್ಪನೆ ಹಿಂದಿರುವ ನಿಜವಾದ ಅನುಸಂಧಾನ ಹೇಗಿರಬೇಕು ಎನ್ನುವುದನ್ನು ಇಲ್ಲಿ ಕೃಷ್ಣ ವಿವರಿಸುತ್ತಾನೆ.

ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾSತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ॥೨೯॥

ಸರ್ವ ಭೂತ ಸ್ಥಮ್ ಆತ್ಮಾನಮ್ ಸರ್ವ ಭೂತಾನಿ ಚ ಆತ್ಮನಿ ।

ಈಕ್ಷತೇ ಯೋಗ ಯುಕ್ತ ಆತ್ಮಾ ಸರ್ವತ್ರ ಸಮದರ್ಶನಃ –ಧ್ಯಾನಯೋಗಕ್ಕೆ ಬಗೆ ಸಜ್ಜುಗೊಂಡ ಸಾಧಕ ಎಲ್ಲ ಜೀವಿಗಳಲ್ಲು ಭಗವಂತನನ್ನು ಕಾಣುತ್ತಾನೆ ಮತ್ತು ಎಲ್ಲ ಜೀವಿಗಳನ್ನು ಭಗವಂತನಲ್ಲಿ ಕಾಣುತ್ತಾನೆ. ಎಲ್ಲೆಡೆ ಇರುವ ಭಗವಂತ ಏಕರೂಪನೆಂದು ಕಾಣುತ್ತಾನೆ.

ನಾವು ಭಗವಂತನನ್ನು ಬ್ರಹ್ಮ ಎನ್ನುತ್ತೇವೆ, ಪರಮಾತ್ಮ ಎನ್ನುತ್ತೇವೆ. ಏನು ಹಾಗೆಂದರೆ? ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ತುಂಬಿರುವ ಬೃಹತ್ತಾದದ್ದು ಬ್ರಹ್ಮ. ಎಲ್ಲ ಕಡೆ ವ್ಯಾಪಿಸಿರುವ ಸರ್ವ ಗುಣಪೂರ್ಣನಾಗಿ ಕಾಲತಃ, ದೇಶತಃ, ಗುಣತಃ, ಶಕ್ತಿತಃ ಅನಂತವಾಗಿರುವವ ಪರಮಾತ್ಮ. ಇಲ್ಲಿ ಕೃಷ್ಣ ಹೇಳುತ್ತಾನೆ “ಸರ್ವಭೂತಸ್ಥಮಾತ್ಮಾನಂ”-ಅಂದರೆ ಸಮಸ್ತ ಜೀವಜಾತದೊಳಗೆ ಅಂತರ್ಯಾಮಿಯಾಗಿ ಬಿಂಬರೂಪಿ ಭಗವಂತನಿದ್ದಾನೆ. ಅಷ್ಟೇ ಅಲ್ಲ “ಸರ್ವ ಭೂತಾನಿ ಚ ಆತ್ಮನಿ” ಅಂದರೆ ಸಮಸ್ತ ಜೀವಗಳೂ ಭಗವಂತನಲ್ಲಿವೆ. ಇದರ ಪೂರ್ಣ ಅರ್ಥ: ‘ಭಗವಂತ ನಮ್ಮ ಒಳಗೂ ಹೊರಗೂ ತುಂಬಿದ್ದಾನೆ’ ಎಂದು. ಇದು ನಾವು ಉಪಾಸನೆ ಮಾಡುವಾಗ ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶ. ಒಬ್ಬ ಧ್ಯಾನಯೋಗದಲ್ಲಿರುವ ಸಾಧಕ ಭಗವಂತನ ಸರ್ವಗತತ್ವವನ್ನು ಕಾಣುವ ಬಗೆಯಿದು.

ಭಗವಂತ ಎಲ್ಲಾ ಜೀವದಲ್ಲೂ ತುಂಬಿದ್ದರೂ ಕೂಡಾ ಒಬ್ಬ ಸಾಧಕ ಆತನನ್ನು “ಸರ್ವತ್ರ ಸಮದರ್ಶನಃ”- ಅಂದರೆ ಏಕರೂಪದಲ್ಲಿ ಕಾಣುತ್ತಾನೆ. ಭಗವಂತನ ಅವತಾರ, ಆತನ ಆವೇಶ, ಸನ್ನಿಧಾನ, ಗುಣ, ಕೃತಿ, ರೂಪ ಎಲ್ಲವೂ ಅಖಂಡ. ಅದರಲ್ಲಿ ವೆತ್ಯಾಸವಿಲ್ಲ. ಎಲ್ಲವುದರ ಒಳಗೂ ಹೊರಗೂ ತುಂಬಿರುವ ಆತ ಏಕರೂಪನಾಗಿದ್ದಾನೆ. ಬೈಬಲ್ ನಲ್ಲಿ ಯಾರಾದರೂ ದೇವರ ಬಗ್ಗೆ ಹೇಳುವವರು ಏನು ಹೇಳುತ್ತಾರೆ ಎನ್ನುವಲ್ಲಿ ಹೀಗೆ ಹೇಳಿದ್ದಾರೆ “ If they say ‘the Kingdom is in the sky’ then the birds will precede you; if they say to you ‘It is in the sea’ then the fish will precede you. Rather ‘the Kingdom is inside of you and It is outside of you’. ಎಲ್ಲಾ ಗ್ರಂಥದ ತಾತ್ಪರ್ಯ ಒಂದೆ. ಹೀಗೆ ಭಗವಂತ ಸರ್ವಾಂತರ್ಯಾಮಿ ಮತ್ತು ಸರ್ವಗತ ಎನ್ನುವ ಅನುಸಂಧಾನ ನಮ್ಮ ನಿತ್ಯ ಉಪಾಸನೆಯಲ್ಲಿರಬೇಕು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *