ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 24 & 25

ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ ।
ಮನಸೈವೇದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ॥೨೪॥

ಶನೈಃ ಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ ।
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ॥೨೫॥

ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ ।

ಮನಸಾ ಏವ ಇಂದ್ರಿಯ ಗ್ರಾಮಮ್ ವಿನಿಯಮ್ಯ ಸಮಂತತಃ ||

ಶನೈಃ ಶನೈಃ ಪರಮೇತ್ ಬುದ್ಧ್ಯಾ ಧೃತಿ ಗೃಹೀತಯಾ ।

ಆತ್ಮಸಂಸ್ಥಮ್ ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ –ಬಗೆಯಲ್ಲಿ ಮೂಡಿಬರುವ ಎಲ್ಲ ಬಯಕೆಗಳನ್ನೂ ಪೂರ್ತಿಯಾಗಿ ತೊರೆದುಬಿಡಬೇಕು; ಇಂದ್ರಿಯಗಳ ಗಡಣವನ್ನು ಎಲ್ಲೆಡೆಯಿಂದಲು ಮನೋಬಲದಿಂದಲೆ ಹಿಡಿತದಲ್ಲಿಡಬೇಕು; ಅಳುಕದ ವಿವೇಕ ಪ್ರಜ್ಞೆಯಿಂದ ಮೆಲಮೆಲನೆ ಬಗೆಯನ್ನು ವಿಷಯಗಳಿಂದ ಹೊರಳಿಸಬೇಕು; ಭಗವಂತನಲ್ಲಿರಿಸಬೇಕು. ಇರಿಸಿ ಮತ್ತೇನನ್ನೂ ಚಿಂತಿಸಬಾರದು.

ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವ ವಿಧಾನವನ್ನು ಮತ್ತೆ ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ: “ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ” ಎಂದು. ಇದರ ಹಿನ್ನೆಲೆಯನ್ನು ಹಿಂದೆ ನಾವು ನೋಡಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮ ಸಂಕಲ್ಪಗಳು. ಸಂಕಲ್ಪಗಳು ಎಂದರೆ ಮನಸ್ಸಿನಲ್ಲಿ ಏನೇನು ಮಾಡಬೇಕು ಎನ್ನುವ ತೀರ್ಮಾನ. ನಾವು ಯಾವುದೇ ಒಂದು ಕೆಲಸವನ್ನೂ ಮಾಡುವ ಮೊದಲು ಅದನ್ನು ಮಾನಸಿಕವಾಗಿ ಮಾಡುತ್ತೇವೆ. ಇಂದು ಇಲ್ಲಿಗೆ ಹೋಗಬೇಕು, ಇಂತವರನ್ನು ಭೇಟಿಯಾಗಬೇಕು, ಅಲ್ಲಿ ಇಂತಹದ್ದನ್ನು ಪಡೆಯಬೇಕು, ಇತ್ಯಾದಿ ವೇಳಾಪಟ್ಟಿ ನಮ್ಮ ಮನಸ್ಸಿನಲ್ಲಿ ನೆಟ್ಟಿರುತ್ತದೆ. ಈ ರೀತಿ ಸಾವಿರ ಸಂಕಲ್ಪಗಳು, ಅದನ್ನು ಈಡೇರಿಸಿಕೊಳ್ಳುವುದಕ್ಕೆ ಸಾವಿರ ಬಯಕೆಗಳು. ‘ಹೀಗೆ ಮಾಡಬೇಕು ಅದರಿಂದ ಹೀಗೇ ಆಗಬೇಕು ಎನ್ನುವ ಆಸೆಗಳು’. ಬದುಕು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಬದುಕಿನ ರೂಪುರೇಷೆಯನ್ನು ಬಾಹ್ಯ ಪ್ರಪಂಚದಲ್ಲಿ ಸಾಕಾರಗೊಳಿಸುವ ಪ್ರಯತ್ನ. ಹೀಗೆ ಸಾವಿರಾರು ಸಂಕಲ್ಪ ಮತ್ತು ಕಾಮನೆಯನ್ನು ಮನಸ್ಸಿನಲ್ಲಿ ತುಂಬುತ್ತಾ ಹೋದರೆ ಮನಸ್ಸಿಗೆ ಅದರಿಂದಾಚೆಗೆ ಯೋಚಿಸಲು ಅವಕಾಶವೇ ಇಲ್ಲವಾಗುತ್ತದೆ. ಮನಸ್ಸು ಎಂದರೆ ಬರೀ ಸಂಕಲ್ಪ-ವಿಕಲ್ಪ. ಏನೇನೋ ಕನಸು ಕಟ್ಟುವುದು(ಸಂಕಲ್ಪ), ಮಾಡಬೇಕೋ ಬೇಡವೋ, ಮಾಡಿದರೆ ಯಶಸ್ವಿ ಆದೀತೋ ಇಲ್ಲವೋ (ವಿಕಲ್ಪ) ಎಂದು ಯೋಚಿಸುತ್ತ ಅದರಿಂದ ಗೊಂದಲಕ್ಕೊಳಗಾಗುವುದು-ಇದರಿಂದಾಚೆಗೆ ಮನಸ್ಸು ಹೋಗುವುದೇ ಇಲ್ಲ. ಕೃಷ್ಣ ಹೇಳುತ್ತಾನೆ “ಮೊದಲು ನಿನ್ನ ಸಂಕಲ್ಪಗಳನ್ನು ಬಿಟ್ಟುಬಿಡು” ಎಂದು. ಈ ಸಂಕಲ್ಪಗಳು ತಿರುಕನ ಕನಸಿನಂತೆ. ಎಷ್ಟು ಹೆಚ್ಚು ಸಂಕಲ್ಪ ನಮ್ಮ ಮನಸ್ಸಿಗೆ ಬರುತ್ತದೆ ಅಷ್ಟೇ ಹತಾಶೆ ಹೆಚ್ಚಾಗುತ್ತದೆ, ಅದರಿಂದ ವ್ಯಾಕುಲತೆ. ನಂತರ ಏನನ್ನೂ ಯೋಚಿಸಲು ಆಗುವುದಿಲ್ಲ!

ಬಯಸುವುದು ಮನಸ್ಸಿನ ಸಹಜ ಗುಣ, ಬಯಸದೆ ಬದುಕಿಲ್ಲ. ಅದಕ್ಕಾಗಿ ಏನು ಬರುತ್ತದೋ ಅದು ಬರಲಿ ಎಂದು ಬಯಸುವುದನ್ನು ಕಲಿತು ನಮ್ಮ ಇತರ ಸಂಕಲ್ಪ ವಿಕಲ್ಪವನ್ನು ಬಿಟ್ಟುಬಿಡಬೇಕು- ಇದು ಯಶಸಿನ ಸೂತ್ರ. ಬಯಸಿದ್ದು ಸಿಗುವುದಿಲ್ಲ, ಬಯಸಿದಂತೆ ಆಗುವುದಿಲ್ಲ ಎಂದ ಮೇಲೆ ಅನಗತ್ಯ ಕನಸಿನ ಗೋಪುರ ಕಟ್ಟುವುದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ಸಂಕಲ್ಪ ಕೇವಲ ಒಂದೇ ಒಂದು ‘ಭಗವಂತನ ಸಂಕಲ್ಪ ಹೇಗೋ ಹಾಗೆ’. ದ್ವಾದಶ ಸ್ತೋತ್ರದಲ್ಲಿ ಶ್ರೀ ಮಧ್ವಾಚಾರ್ಯರು ಹೇಳುವಂತೆ:

ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಂ |

ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ ಪಿತೃಮಾತೃಗತಿಃ || ೩-೧ ||

ನಿನ್ನ ಪಾಲಿನ ಕರ್ಮ ಮಾಡು, ಬಂದುದನ್ನುಣ್ಣು. ಹರಿಯ ಚರಣದ ಅರಿವು ತಪ್ಪದಿರಲಿ. ನನ್ನದು ಎನ್ನುವ ಪ್ರತ್ಯೇಕ ಸಂಕಲ್ಪ ಬೇಡ. ವೇದದಲ್ಲಿ ಹೇಳುವಂತೆ ‘ಭಗವಂತನ ಕಾಮನೆಯೇ ನನ್ನ ಕಾಮನೆಯಾಗಲಿ, ಆತನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ಅದರಿಂದ ನನ್ನ ಕಾಮನೆ ಭಗವಂತನ ಕಾಮನೆಗೆ ಶ್ರುತಿಗೂಡಲಿ’. ಹೀಗೆ ಆದಾಗ ಅಪಸ್ವರ ಹೊರಡುವುದಿಲ್ಲ. ನಮ್ಮ ಬಯಕೆ ಭಗವಂತನ ಇಚ್ಛೆಗೆ ಅನುರಣನವಾದಾಗ(State of Resonance) ಬಾಳಿನ ಸಂಗೀತದಲ್ಲಿ ಮಾಧುರ್ಯ ನಿರ್ಮಾಣವಾಗುತ್ತದೆ. ಕೃಷ್ಣ ಹೇಳುತ್ತಾನೆ “ಸರ್ವಾನ್ ಅಶೇಷತಃ” ಎಂದು. ಅಂದರೆ ನಿನ್ನೆಲ್ಲಾ ಸಂಕಲ್ಪವನ್ನು ಪೂರ್ಣವಾಗಿ ಬಿಡು ಎಂದು. ಭಗವಂತನ ಇಚ್ಚೆಗೆ ವಿರುದ್ಧವಾದ ಒಂದೂ ಸಂಕಲ್ಪ ನಮ್ಮಲ್ಲಿರಬಾರದು. ‘ನೀನು(ಭಗವಂತ) ಏನು ಬಯಸಿದೆಯೋ ಅದೇ ನನ್ನ ಸಂಕಲ್ಪ’-ಇದು ಒಬ್ಬ ಯೋಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾದ ಏಕೈಕ ಸಂಕಲ್ಪ.

ಸಂಕಲ್ಪ ಎಲ್ಲಿ ಹುಟ್ಟುತ್ತದೋ ಅಲ್ಲೇ ಅದನ್ನು ತಡೆಯಬೇಕು. ಇದನ್ನು ತಡೆಯಬೇಕು ಎಲ್ಲಿಂದ ಎಂದರೆ ಮನಸ್ಸಿನಿಂದಲೇ! ನಾವು ನಮ್ಮ ಮನಸ್ಸಿಗೆ ನಿರಂತರ ಈ ರೀತಿ ಹೇಳಬೇಕು “ನೀನು ಹುಚ್ಚು ಸಂಕಲ್ಪ ಮಾಡಬೇಡ, ಮಾಡಿದರೆ ಅದು ನಿನಗೆ ಸಿಗುವುದಿಲ್ಲ. ನಂತರ ಸಿಗಲಿಲ್ಲ ಎಂದು ಚಡಪಡಿಸಬೇಕಾಗುತ್ತದೆ- ಆದ್ದರಿಂದ ಈ ಹುಚ್ಚು ಸಂಕಲ್ಪಗಳನ್ನು ಬಿಡು” ಎಂದು. ಈ ರೀತಿ ಮನಸ್ಸಿಗೆ ನಿರಂತರ ಹೇಳಿ (Auto Suggestion) ಅದನ್ನು ಪಳಗಿಸಬೇಕು. ಸಾಧಕನನ್ನು ದಾರಿ ತಪ್ಪಿಸುವುದೂ ಮನಸ್ಸು, ದಾರಿ ಹೆಚ್ಚಿಸುವುದೂ ಮನಸ್ಸು. ಆದ್ದರಿಂದ ಮನಸ್ಸಿಗೆ ನಿರಂತರ ಈ ರೀತಿ ಹೇಳುತ್ತಾ ಇದ್ದರೆ ಅದು ಕೊನೆಗೆ ಅದನ್ನು ಒಪ್ಪಿಕೊಳ್ಳುತ್ತದೆ.

ನಾವು ನಮ್ಮ ಹುಚ್ಚು ಸಂಕಲ್ಪವನ್ನು ಬಿಡಬೇಕಾದರೆ ಮೊದಲು ನಮ್ಮ ಇಂದ್ರಿಯ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮಲ್ಲಿ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಹಿಂದೆ ಚಿಕ್ಕ ಮಕ್ಕಳಿಗೆ ಅನೇಕ ಅಧ್ಯಾತ್ಮಿಕ ಸಂಸ್ಕಾರವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನಸ್ಸು ಹಸಿ ಮಣ್ಣಿನಂತೆ, ಏನು ಹೇಳಿದರೂ ಅದರ ಯಥಾರ್ಥ ಗ್ರಹಣವಾಗುತ್ತದೆ. ಮನಸ್ಸಿನ ಗುಣವೆಂದರೆ ಅದನ್ನು ನಾವು ಒಂದು ಕಡೆ ನಿರ್ಬಂಧ ಮಾಡಿದಾಗ ಅದು ಇನ್ನೊಂದು ಕಡೆ ಜಾರಿ ನುಣುಚಿಕೊಳ್ಳುತ್ತದೆ. ಕೃಷ್ಣ ಹೇಳುತ್ತಾನೆ “ಮನಸ್ಸನ್ನು ಜಾರಲು ಬಿಡಬೇಡ, ಎಲ್ಲ ಸಂಕಲ್ಪವನ್ನು ತ್ಯಾಗ ಮಾಡಿ ಭಗವಂತ ಒದಗಿಸಿಕೊಟ್ಟಿದ್ದನ್ನು ಭಗವದ್ ಪ್ರಸಾದವೆಂದು ಸ್ವೀಕರಿಸು, ಸಂತೋಷವಾಗಿ ಅದನ್ನು ಭೋಗಿಸು-ಅನುಭವಿಸು, ಇಲ್ಲದ್ದನ್ನು ಬೇಕು ಎಂದು ಬಯಸಿ ಕೊರಗಬೇಡ” ಎಂದು.

ಈ ಹಿಂದೆ ಹೇಳಿದಂತೆ ಮನಸ್ಸನ್ನು ಒಮ್ಮೆಗೆ ತಿರುಗಿಸಲು ಬರುವುದಿಲ್ಲ. ಅದನ್ನು ಬಹಳ ನಿದಾನವಾಗಿ ತಿರುಗಿಸಬೇಕು. ಮೆಲ್ಲ-ಮೆಲ್ಲನೆ ಆ ಉತ್ಕೃಷ್ಟ ಆನಂದಕ್ಕೆ ಮನಸ್ಸನ್ನು ತಿರುಗಿಸಬೇಕು. ಇದಕ್ಕಾಗಿ “ನಿನ್ನ ವಿಶ್ಲೇಷಕ ಬುದ್ಧಿಯನ್ನು ಬಳಸು” ಎನ್ನುತ್ತಾನೆ ಕೃಷ್ಣ. ಇದಕ್ಕೆ ಛಲ ಬೇಕು ಧೈರ್ಯ ಬೇಕು. ಗುರಿ ಮುಟ್ಟುವ ತನಕ ನಾನು ವಿಚಲಿತನಾಗಲಾರೆ ಎನ್ನುವ ಬುದ್ಧಿ(conviction), ಧೃತಿ(courage) ಬಹಳ ಮುಖ್ಯ. ಹೀಗೆ ತರ್ಕವನ್ನು ಮೀರಿ ತರ್ಕಾತೀತ ಭಗವಂತನತ್ತ ಮನಸ್ಸನ್ನು ತಿರುಗಿಸಬೇಕು.ಮನಸ್ಸು ಮೊದಲು ನಮ್ಮ ಸ್ವರೂಪವನ್ನು ಗುರುತಿಸಿ ಅಲ್ಲಿ ನೆಲೆನಿಂತು ಆ ನಂತರ ಸ್ವರೂಪದಲ್ಲಿರುವ ಭಗವಂತನಲ್ಲಿ ನೆಲೆ ನಿಲ್ಲಬೇಕು. ಒಮ್ಮೆ ನೆಲೆ ನಿಂತ ಮನಸ್ಸನ್ನು ಬೇರೆ ಯಾವುದೇ ಚಿಂತೆಗೆ ಒಡ್ಡದೆ ಅದನ್ನು ಅಲ್ಲೇ ನೆಲೆಗೊಳಿಸಬೇಕು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *