ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 17

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥

ಯುಕ್ತ ಆಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು ।

ಯುಕ್ತ ಸ್ವಪ್ನ ಅವಬೋಧಸ್ಯ ಯೋಗಃ ಭವತಿ ದುಃಖ ಹಾ-ತಕ್ಕ ತಿನಿಸು-ತಿರುಗಾಟ, ತಕ್ಕಷ್ಟೆ ಕಾಯಕ, ತಕ್ಕಂತೆ ನಿದ್ದೆ-ಎಚ್ಚರ ಸಾಧಿಸಿದವನಿಗೆ ಧ್ಯಾನಯೋಗದಿಂದ ದುಗುಡದೂರ.

ಯೋಗಾಭ್ಯಾಸ ಮಾಡುವಾಗ ನಮ್ಮ ಜೀವನಕ್ರಮ ಶಿಸ್ತುಬದ್ಧವಾಗಿರಬೇಕು. ನಿಯಮಿತವಾದ ಹಾಗು ಯೋಗ್ಯವಾದ ಆಹಾರ ಸೇವನೆ ಬಹಳ ಮುಖ್ಯ. ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಸಾತ್ವಿಕ ಆಹಾರ ಸೇವನೆ ಧ್ಯಾನಕ್ಕೆ ಪೂರಕ. ಕೆಲವು ಆಹಾರ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉದಾಹರಣೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ. ಇವುಗಳಲ್ಲಿ ಔಷಧೀಯ ಗುಣವಿದ್ದರೂ ಕೂಡ ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ. ನಾವು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದ ದಿನ ನಮಗೆ ಕೆಟ್ಟ ಕನಸು ಬೀಳುವುದು ಈ ಆಹಾರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ವೇದಾಧ್ಯಾಯನ ಮಾಡುವವರು ಇಂತಹ ಮನಸ್ಸನ್ನು ಕೆಡಿಸುವ ಆಹಾರವನ್ನು ಸೇವಿಸಬಾರದು. ನಮ್ಮ ದೇಹದ ಪೋಷಣೆಯ ಜೊತೆಗೆ ನಮ್ಮ ಮನಸ್ಸಿಗೆ ಸಾತ್ವಿಕ ಪೋಷಣೆ ಕೊಡುವ ಆಹಾರವನ್ನು ಇಲ್ಲಿ ಕೃಷ್ಣ “ಯುಕ್ತಾಹಾರ” ಎಂದು ಕರೆದಿದ್ದಾನೆ.

ನಮ್ಮ ಮನಸ್ಸಿಗೆ ನಾವು ಎಷ್ಟು ಬೇಕೋ ಅಷ್ಟು ವಿರಾಮ ಕೊಡುವುದು ಬಹಳ ಮುಖ್ಯ. ಆದರೆ ಈ ವಿರಾಮ ಸೋಮಾರಿತನವಾಗಿ ರೂಪುಗೊಳ್ಳಬಾರದು. ಮನಸ್ಸಿಗೆ ವಿರಾಮ ಕೊಡುವಾಗ ಯಾವ ಚಿಂತನೆ ಕೂಡ ಮಾಡದೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಆಗ ಮನಸ್ಸು ಧ್ಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. “ಯುಕ್ತಚೇಷ್ಟಸ್ಯ ಕರ್ಮಸು” ನಾವು ಮಾಡಬೇಕಾದ ಕೆಲಸ ಕಾರ್ಯವನ್ನು ಕ್ರಮಬದ್ಧವಾಗಿ ಪ್ರಮಾಣಬದ್ಧವಾಗಿ ನಾವೇ ಮಾಡಬೇಕು. ಮಾಡಬೇಕಾದ ಕೆಲಸದಲ್ಲಿ ಸೋಮಾರಿತನವಿರಬಾರದು.

ಹೀಗೆ ಶಾಸ್ತ್ರೀಯವಾದ ಶುದ್ಧವಾದ ಕ್ರಮಬದ್ದವಾದ ಆಹಾರ ಸೇವನೆ, ತಕ್ಕ ಕಾಲದಲ್ಲಿ ತಕ್ಕಷ್ಟು ನಿದ್ದೆ ಹಾಗು ಎಚ್ಚರ, ಕ್ರಮಬದ್ಧವಾದ ಪರಿಶ್ರಮ ಮತ್ತು ವಿರಾಮ- ಹೀಗೆ ಇದ್ದಾಗ “ಯೋಗೋ ಭವತಿ ದುಃಖಹಾ”- ದುಃಖ ರಹಿತ ಆನಂದಮಯ ಜೀವನ ಸಾಧ್ಯ.

ಧ್ಯಾನಯೋಗದಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಮನಸ್ಸು ಹದವಾದಾಗ ಹೊರಪ್ರಪಂಚದಲ್ಲಿ ನಾವು ಅನುಭವಿಸುವ ಸುಖ ದುಃಖಗಳು ನಿರ್ಲಿಪ್ತವಾಗಿ ನೋಡಲು ಅಭ್ಯಾಸವಾಗುತ್ತದೆ. ಇದರಿಂದ ಸುಖ ಬಂದಾಗ ಹಾರಾಟವಿಲ್ಲ, ದುಃಖ ಬಂದಾಗ ಪಾತಾಳಕ್ಕೆ ಕುಸಿಯುವುದೂ ಇಲ್ಲ. ಸುಖ-ದುಃಖ, ಸೋಲು-ಗೆಲುವಿನ ದ್ವಂದ್ವವೇ ಜೀವನ ಎನ್ನುವ ಸಮದೃಷ್ಟಿ ಧ್ಯಾನಯೋಗದಿಂದ ಬಂದುಬಿಡುತ್ತದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *