ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 16

ಸಮಾಧಿಯನ್ನು ಅಭ್ಯಾಸ ಮಾಡುವವರ ಜೀವನಕ್ರಮ ಹೇಗಿರಬೇಕು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಈ ಜೀವನಕ್ರಮ ಕೇವಲ ಧ್ಯಾನಕ್ಕೆ ಮಾತ್ರ ಪೂರಕವಲ್ಲ. ನಮ್ಮ ಅಧ್ಯಯನಕ್ಕೆ, ನಮ್ಮ ಆರೋಗ್ಯ ಜೀವನಕ್ಕೆ ಈ ಶಿಸ್ತು ಬಹಳ ಮುಖ್ಯ. ನಮ್ಮ ಪ್ರತಿಯೊಂದು ಅನುಷ್ಠಾನವನ್ನು ಶಾಸ್ತ್ರಕಾರರು ಇದಕ್ಕನುಗುಣವಾಗಿ ವಿನ್ಯಾಸ ಮಾಡಿದ್ದಾರೆ. ಆದರೆ ಇಂದು ನಮಗೆ ಈ ಎಚ್ಚರವಿಲ್ಲ. ಏಕಾದಶಿ ಉಪವಾಸವಿರಲಿ, ಇನ್ಯಾವುದೇ ಅನುಷ್ಠಾನವಿರಲಿ,ಅದನ್ನು ಧ್ಯಾನಕ್ಕೆ ಪೂರಕವಾಗಿ ಪಾಲಿಸಬೇಕು. ಈ ಜ್ಞಾನವಿಲ್ಲದೆ ಕೇವಲ ಯಾಂತ್ರಿಕವಾಗಿ ಪಾಲಿಸುವ ಯಾವ ಅನುಷ್ಠಾನವೂ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು.

ನಾತ್ಯಶ್ನತಸ್ತು ಯೋಗೋSಸ್ತಿ ನ ಚಾತ್ಯಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥೧೬॥

ನ ಅತಿ ಅಶ್ನತಃ ತು ಯೋಗಃ ಅಸ್ತಿ ನ ಚಾತ್ಯಂತಮ್ ಅನಶ್ನತಃ ।

ನ ಚ ಅತಿ ಸ್ವಪ್ನ ಶೀಲಸ್ಯ ಜಾಗ್ರತಃ ನ ಏವ ಚ ಅರ್ಜುನ- ಹೇ ಅರ್ಜುನ, ಹೊಟ್ಟೆಬಾಕನಿಗೆ ಧ್ಯಾನಯೋಗ ಸಾಧ್ಯವಿಲ್ಲ. ತೀರ ತಿನ್ನದವನಿಗೂ ಇಲ್ಲ. ತುಂಬಾ ತೂಕಡಿಸುವವನಿಗೂ ಇಲ್ಲ. ನಿದ್ದೆಗೇಡಿಗೂ ಇಲ್ಲ.

ಅತಿಯಾಗಿ ತಿನ್ನುವವನಿಗೆ ಧ್ಯಾನ ಸಾಧ್ಯವಿಲ್ಲ. ಹೊಟ್ಟೆಗೆ ಹೆಚ್ಚು ಆಹಾರ ಹೋದಾಗ ಮನಸ್ಸು ನಿಸ್ತೇಜವಾಗುತ್ತದೆ. ಆದ್ದರಿಂದ ಮನನಶೀಲ ಹೊಟ್ಟೆಬಾಕನಾಗಿರಬಾರದು. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಈ ಕಾರಣಕ್ಕಾಗಿ ಅತಿಥಿ ಸತ್ಕಾರದಲ್ಲಿ ಒತ್ತಾಯ ಮಾಡಿ ಬಡಿಸುವುದು ತಪ್ಪು. ಅದೇ ರೀತಿ ಯಾವಾಗಲೂ ಸರಿಯಾಗಿ ತಿನ್ನದೆ ಇದ್ದರೆ ಅದರಿಂದ ದೇಹ ಪೋಷಣೆ ಇಲ್ಲವಾಗಿ ದೇಹ ಕುಸಿಯುತ್ತದೆ. ಭಗವಂತನ ಸಾಕ್ಷಾತ್ಕಾರವಾಗುವುದು ಈ ದೇಹದ ಮೂಲಕವೇ. ಆದ್ದರಿಂದ ನಾವು ನಿಯತವಾದ ಆಹಾರವನ್ನು ನಿಯತ ಕಾಲದಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.

ಆಹಾರದ ಜೊತೆಗೆ ನಮ್ಮ ನಿದ್ದೆ ಮಾಡುವ ಅಭ್ಯಾಸ ನಿಯತವಾಗಿರಬೇಕು. ನಾವು ಹೇಗೆ ಅಭ್ಯಾಸ ಮಾಡಿಕೊಂಡೆವೋ ಹಾಗೆ ನಮ್ಮ ಮನಸ್ಸು. ಎಂದೂ ಅತಿ ನಿದ್ದೆ ಒಳ್ಳೆಯದಲ್ಲ, ಅದೇ ರೀತಿ ನಿದ್ದೆಗೆಟ್ಟರೆ ಖಂಡಿತ ಧ್ಯಾನ ಸಾಧ್ಯವಿಲ್ಲ. ಆಹಾರ ನಿದ್ದೆ ನಿಯತವಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕ ಹಾಗು ಧ್ಯಾನಕ್ಕೆ ಇದು ಅತ್ಯಗತ್ಯ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *