ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 11 & 12

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ ।
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್ ॥೧೧॥

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ ।
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ ॥೧೨॥

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ ।

ನ ಅತಿ ಉಚ್ಛ್ರಿತಮ್ ನ ಅತಿ ನೀಚಮ್ ಚೇಲ ಅಜಿನ ಕುಶ ಉತ್ತರಮ್

ತತ್ರ ಏಕ ಅಗ್ರಮ್ ಮನಃ ಕೃತ್ವಾ ಯತಚಿತ್ತ ಇಂದ್ರಿಯ ಕ್ರಿಯಃ ।

ಉಪವಿಶ್ಯ ಆಸನೇ ಯುಂಜ್ಯಾದ್ ಯೋಗಮ್ ಆತ್ಮ ವಿಶುದ್ಧಯೇ –ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕೂರುವ ಪ್ರದೇಶ ಸ್ವಚ್ಛವಾಗಿರಬೇಕು. ಮನೆಯಲ್ಲಿ ಸಾತ್ವಿಕ ಕಂಪನ(Vibration)ವಿರುವ ಸ್ಥಳವನ್ನು ಧ್ಯಾನಕ್ಕೆ ಆರಿಸಿಕೊಳ್ಳಬೇಕು. ಹಿಂದೆ ಮನೆಯಲ್ಲಿ ಹೆಚ್ಚು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿ ಅಲ್ಲಿ ದೇವರಮನೆಯನ್ನು ನಿರ್ಮಿಸುತ್ತಿದ್ದರು. ದುರಾದೃಷ್ಟಾವಶಾತ್ ಇಂದು ಮನೆ ಕಟ್ಟುವಾಗ ಎಲ್ಲಿ ಜಾಗ ಉಳಿದಿದೆ ಅದನ್ನು ದೇವರಮನೆಯಾಗಿ ಪರಿವರ್ತಿಸುತ್ತಿದ್ದೇವೆ. ನಾವು ಮನೆಯಲ್ಲಿ ಯಾವ ಭಾಗದಲ್ಲಿ ಕುಳಿತಾಗ ನಮಗೆ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾಗಿರುತ್ತದೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಾಗಿದೆ ಎಂದು ನಾವು ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನೇ ಇಲ್ಲಿ “ಶುಚಿ ದೇಶ” ಎಂದಿದ್ದಾರೆ.

ನಾವು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿದರೆ ಸಾಲದು; ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನವಿದ್ದರೂ ನಾವು ನೆಲದಲ್ಲಿ ಕುಳಿತರೆ ನೆಲದಲ್ಲಿರುವ ಕೆಟ್ಟ ಕಂಪನ ನಮ್ಮ ದೇಹವನ್ನು ಪ್ರವೇಶಿಸಬಹುದು. ಅದಕ್ಕಾಗಿ ನಾವು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಸರಿಯಾಗಿರಬೇಕು. ಸ್ಥಿರವಾದ ಆಸನ ಅತೀ ಮುಖ್ಯ. ಇದಕ್ಕಾಗಿ ಸೋಫಾದಂತಹ ಕುಶನ್ ಇರುವ ಆಸನವನ್ನು ಉಪಯೋಗಿಸಬಾರದು. ಇಲ್ಲಿ ಕೃಷ್ಣ ಯಾವ ರೀತಿಯ ಆಸನ ಯೋಗ್ಯ ಎನ್ನುವುದನ್ನು ವಿವರಿಸಿದ್ದಾನೆ. ನಾವು ಕುಳಿತು ಕೊಳ್ಳುವ ಆಸನ ಬಹಳ ತಗ್ಗಾಗಿ ಇರಬಾರದು ಬಹಳ ಎತ್ತರದಲ್ಲಿಯೂ ಇರಬಾರದು. ಕುಳಿತುಕೊಳ್ಳುವ ಸ್ಥಳದಲ್ಲಿ ಮೊದಲು ದರ್ಬೆಯ ಚಾಪೆಯನ್ನು ಹಾಸಬೇಕು. ಅದರ ಮೇಲೆ ಕೃಷ್ಣಾಜಿನವನ್ನು(ಸಂಸಾರಿಗಳು) ಅಥವಾ ವ್ಯಾಗ್ರಾಜಿನ(ಸಂಸಾರವನ್ನು ತ್ಯಜಿಸಿದ-ನೈಷ್ಠಿಕ ಬ್ರಹ್ಮಚಾರಿಗಳು)ವನ್ನು ಹಾಸಬೇಕು. ಅದರ ಮೇಲೆ ಬಟ್ಟೆ (ರೇಷ್ಮೆಯ ಪಟ್ಟೆ ಅಥವಾ ದಾವಳಿ). ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.

ಇಲ್ಲಿ ದರ್ಬೆಯ ಚಾಪೆಯನ್ನು ಉಪಯೋಗಿಸಲು ಹೇಳಿದ್ದಾರೆ. ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ. ಧ್ಯಾನ ಕಾಲದಲ್ಲಿ ಯಾವ ದುಷ್ಟಶಕ್ತಿ ನಮಗೆ ತೊಂದರೆ ಕೊಡದಂತೆ ಇಲ್ಲಿ ದರ್ಬೆಯ ಚಾಪೆ ನಮಗೆ ಸಹಾಯ ಮಾಡುತ್ತದೆ. ಕೃಷ್ಣಾಜಿನ ಹಾಗು ಪಟ್ಟೆ ಮಹತ್ತಾದ ಸಾತ್ವಿಕ ಕಂಪನವನ್ನು ನಮಗೊದಗಿಸುತ್ತದೆ. ಇದು ನೆಲದಿಂದ ನಮ್ಮ ದೇಹಕ್ಕೆ ಕೆಟ್ಟ ಕಂಪನ ಪ್ರವೇಶಿಸದಂತೆ ತಡೆಯುತ್ತದೆ. ನಮ್ಮಲ್ಲಿ ಕೆಲವರು ಮರದ ಮಣೆಯನ್ನು ಉಪಯೋಗಿಸುತ್ತಾರೆ. ಆದರೆ ಮಣೆಯಲ್ಲಿ ಕುಳಿತಾಗ ನಮ್ಮ ದೇಹದ ಕೆಲವು ಭಾಗ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕೃಷ್ಣ ಹೇಳಿದ ಈ ಮೇಲಿನ ಆಸನ ಬಹಳ ಸೂಕ್ತ. ಈ ರೀತಿಯ ಆಸನವನ್ನು ತಯಾರಿಸಿಕೊಂಡು ನಮಗೆ ಸಾಧ್ಯವಾದ ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ವಜ್ರಾಸನ ಬಹಳ ಪ್ರಸಿದ್ಧ. ಈ ಆಸನದಲ್ಲಿ ನಮ್ಮ ದೇಹ ನೆಟ್ಟಗಿರುತ್ತದೆ ಹಾಗು ಇದು ಧ್ಯಾನಕ್ಕೆ ಪೂರಕ. ಈ ಬಗ್ಗೆ ಮುಂದೆ ವಿವರವಾಗಿ ಹದಿಮೂರನೇ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

ಮೇಲೆ ಹೇಳಿದ ರೀತಿ ಆಸನವನ್ನು ಸಿದ್ಧ ಪಡಿಸಿಕೊಂಡು ಕುಳಿತ ತಕ್ಷಣ ಧ್ಯಾನ ಸಾಧ್ಯವಾಗುವುದಿಲ್ಲ. ಆಸನದ ಮೇಲೆ ಸೂಕ್ತ ಭಂಗಿಯಲ್ಲಿ ಕೂತು ಮನಸ್ಸನ್ನು ಭಗವಂತನ ಕಡೆಗೆ ಏಕಾಗ್ರ ಮಾಡಬೇಕು. ‘ಏಕಾಗ್ರ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಏಕ+ಅಗ್ರ-ಬಾಣದಂತೆ ಒಂದೇ ಗುರಿ. ಯಾವುದಕ್ಕೆ ಗುರಿ ಇಡುವುದು ಎಂದರೆ ಅದಕ್ಕೆ ಇದೇ ಪದದಲ್ಲಿ ಉತ್ತರವಿದೆ. ‘ಏಷ ಏವ ಕರೋತೀತಿ ಏಕಾಗ್ರಹಃ’ ಯಾರೊಬ್ಬನು ಎಲ್ಲ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾನ-ಬಂಧ-ಮೊಕ್ಷಗಳಿಗೆ ಕಾರಣನೋ ಅವನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಏಕಾಗ್ರ. ಬಾಲ್ಯದಿಂದ ಬೆಳೆಸಿಕೊಂಡು ಬಂದ ಅಭ್ಯಾಸವನ್ನು ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನನ್ನು ತಾನು ಅಣಿಗೊಳಿಸಬೇಕಾದರೆ ಮನಸ್ಸಿಗೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ಧ್ಯಾನಕ್ಕೆ ಕೂತ ತಕ್ಷಣ ಮನಸ್ಸು ಏಕಾಗ್ರವಾಗಲಿಲ್ಲ ಎಂದು ಯಾರೂ ಗಾಬರಿಯಾಗುವುದು ಬೇಡ. ನಿರಂತರ ಪ್ರಯತ್ನವನ್ನು ಎಂದೂ ಕೈಬಿಡದೆ ಛಲದಿಂದ ಸಾಧನೆ ಮಾಡಿದಾಗ ಏಕಾಗ್ರತೆ ಸಾಧ್ಯ.

ಮನಸ್ಸು ಏಕಾಗ್ರವಾದ ನಂತರ ‘ಯತಚಿತ್ತ ಇಂದ್ರಿಯ ಕ್ರಿಯಃ’ – ಎಲ್ಲ ಬಾಹ್ಯಇಂದ್ರಿಯ ಕ್ರಿಯೆಯನ್ನು ಸಂಪೂರ್ಣ ಸ್ಥಬ್ಧಗೊಳಿಸಬೇಕು. ಅಂದರೆ ಈ ಸ್ಥಿತಿಯಲ್ಲಿ ಹೊರಗಿನ ಶಬ್ದ ನಮಗೆ ಕೇಳಿಸದು, ಬಾಹ್ಯ ಕಂಪು ಮೂಗಿಗೆ ಬಡಿಯದು. ಒಂದು ವೇಳೆ ಒಂದು ಸೊಳ್ಳೆ ಕಚ್ಚಿದರೂ ಆ ನೋವಿನ ಅರಿವು ನಮಗಾಗುವುದಿಲ್ಲ. ಇದು ನಿದ್ದೆಯಂತೆ; ನಿದ್ದೆಯಲ್ಲಿ ನಮಗೆ ಅಂತರಂಗ ಪ್ರಪಂಚ ಎಚ್ಚರವಿರುವುದಿಲ್ಲ, ಆದರೆ ಧ್ಯಾನದಲ್ಲಿ ಅಂತರಂಗ ಪ್ರಪಂಚ ಎಚ್ಚರವಿರುತ್ತದೆ. ಹೀಗೆ ಬಾಹ್ಯೇಂದ್ರಿಯ ಕ್ರಿಯೆಯನ್ನು ಸ್ಥಬ್ಧಗೊಳಿಸಿ ನಂತರ ಚಿತ್ತವನ್ನು ನಿಯಂತ್ರಿಸಬೇಕು. ನಮ್ಮ ಚಿತ್ತದಲ್ಲಿ ಅದೆಷ್ಟು ವಿಚಾರ ಸಂಗ್ರಹವಾಗಿರುತ್ತದೆ. ಆದರೆ ಹಿಂದೆ ದಾಖಲಿಸಿರುವ ಎಲ್ಲ ವಿಷಯವನ್ನೂ ಬಿಟ್ಟು ಕೇವಲ ಭಗವಂತನ ಗುಣದ ಅಂಶವನ್ನು ಮಾತ್ರ ಧ್ಯಾನ ಮಾಡಬೇಕು.

ಹೀಗೆ ನಮ್ಮ ಮನಸ್ಸು ಚಿತ್ತವನ್ನು ನಿಯಂತ್ರಿಸಲು ಜನ್ಮ ಜನ್ಮಾಂತರದ ಸಾಧನೆ ಬೇಕು. ಕೆಲವರು ಈ ಸಾಧನೆಯಲ್ಲಿ ನಿರಂತರ ಪ್ರಯತ್ನ ಮಾಡಿ ಯಾವುದೇ ಸಿದ್ಧಿಫಲಿಸದೇ ನಿರಾಶರಾಗುವುದಿದೆ. ಆದರೆ ಹಿಂದೆ ಹೇಳಿದಂತೆ ನಾವು ಅಧ್ಯಾತ್ಮದಲ್ಲಿ ಇಡುವ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ. ಈ ಜನ್ಮದಲ್ಲಿ ಸಿದ್ಧಿ ಸಾಧ್ಯವಾಗದೇ ಇದ್ದರೆ ಖಂಡಿತ ಮುಂದಿನ ಜನ್ಮದಲ್ಲಿ ನಮ್ಮ ಸಾಧನೆ ನಾವು ಈ ಜನ್ಮದಲ್ಲಿ ಎಲ್ಲಿ ನಿಂತಿದ್ದೆವೋ ಅಲ್ಲಿಂದ ಆರಂಭವಾಗುತ್ತದೆ. ಆದ್ದರಿಂದ ಎಂದೂ ನಿರಾಶೆ ಬೇಡ, ಪ್ರಯತ್ನ ಮಾತ್ರ ನಿರಂತರವಾಗಿರಲಿ.

ಹೀಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮೇಲೆ ನಾವು ಅದನ್ನು ಅದೇ ಸ್ಥಿತಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು(ಯುಂಜ್ಯಾದ್ ಯೋಗಮ್). ಈ ಸ್ಥಿತಿಯಲ್ಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡಿದ ಕೊಳೆ ತೊಳೆದುಹೋಗಿ ಆತ್ಮಶುದ್ಧಿಯಾಗುತ್ತದೆ. ಇಂತಹ ಶುದ್ಧವಾದ ಆತ್ಮದಿಂದ ಪವಿತ್ರನಾದ ಭಗವಂತನನ್ನು ಕಾಣಲು ಸಾಧ್ಯ.

ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನ ಭಂಗಿ(ಕುಳಿತುಕೊಳ್ಳುವ ರೀತಿ)ಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣವನ್ನು ಕೊಡುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *