ಶ್ಲೋಕ – 10
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿ ಮಿವಾಂಭಸಾ ॥೧೦॥
ಬ್ರಹ್ಮಣಿ ಆಧಾಯ ಕರ್ಮಾಣಿ ಸಂಗಮ್ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸಃ ಪಾಪೇನ ಪದ್ಮಪತ್ರಮ್ ಇವ ಅಂಭಸಾ-ಕರ್ಮಗಳನ್ನು ಭಗವಂತನಲ್ಲಿ ಒಪ್ಪಿಸಿ, ನಂಟು ನೀಗಿ ಮಾಡುವವನು ಪಾಪದಿಂದ ಅಂಟಿಸಿಕೊಳ್ಳುವುದಿಲ್ಲ-ತಾವರೆ ಎಲೆ ನೀರಿನಿಂದ ಹೇಗೆ ಹಾಗೆ.
ನಾವು ಪೂಜೆಯ ಕೊನೆಯಲ್ಲಿ “ಶ್ರೀ ಕೃಷ್ಣಾರ್ಪಣ ಮಸ್ತು” ಎಂದು ಹೇಳುತ್ತೇವೆ. ಇದರ ಅರ್ಥ ” ಆ ಭಗವಂತನಲ್ಲಿ ಅರ್ಪಿತ”. ಅರ್ಪಿಸುವುದು ಎಂದರೆ ” ಈ ಕರ್ಮವನ್ನು ಭಗವಂತ ತನ್ನ ಪೂಜಾರೂಪವಾಗಿ ನನ್ನ ಮೂಲಕ ನನ್ನ ಉದ್ಧಾರಕ್ಕಾಗಿ ಅವನೇ ಮಾಡಿಸಿಕೊಂಡ” ಎನ್ನುವ ಸಂಕಲ್ಪ. ಹೀಗೆ ನಾವು ಕರ್ಮವನ್ನು ಮಾಡಿದಾಗ ಯಾವ ಕರ್ಮದ ಲೇಪವೂ ನಮಗೆ ಅಂಟುವುದಿಲ್ಲ. ‘ನಾನು, ನನ್ನದು, ನನ್ನಿಂದ’ ಎನ್ನುವ ಅಹಂಕಾರ ಹೊರಟುಹೋಗುತ್ತದೆ. ಇದು ಆನಂದಮಯವಾದ ವಿಸ್ಮಯ. ತಾವರೆ ಎಲೆ ನೀರಿನಲ್ಲೇ ಇದ್ದರೂ ಕೂಡಾ ಹೇಗೆ ನೀರನ್ನು ತನಗೆ ಅಂಟಿಸಿಕೊಳ್ಳುವುದಿಲ್ಲ ಹಾಗೆ ಕರ್ಮದ ಜೊತೆಗೇ ಇದ್ದು, ಕರ್ಮ ಮಾಡಿ, ಕರ್ಮವನ್ನು ಅಂಟಿಸಿಕೊಳ್ಳದೆ ಇರುವುದು ಈ ಅನುಸಂಧಾನದಿಂದ ಮಾತ್ರ ಸಾಧ್ಯ.