ಶ್ಲೋಕ – 08 & 09
ಕರ್ಮ ಸಂನ್ಯಾಸ ಮತ್ತು ಕರ್ಮಯೋಗ ಎರಡನ್ನು ಬೆರಸಿ ಜೀವನದಲ್ಲಿ ಕರ್ಮಾನುಷ್ಠಾನ ಮಾಡಬೇಕು ಎಂದು ವಿವರಿಸಿದ ಕೃಷ್ಣ ನಮ್ಮ ದೈನಂದಿನ ಜೀವನದಲ್ಲಿ ಈ ರೀತಿಯ ಕರ್ಮಾನುಷ್ಠಾನ ಅಂದರೆ ಏನು ಎನ್ನುವುದರ ವಿವರಣೆಯನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.
ನೈವ ಕಿಂಚಿತ್ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥೮॥
ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ॥೯॥
ನ ಏವ ಕಿಂಚಿತ್ ಕರೋಮಿ ಇತಿ ಯುಕ್ತಃ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ||
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ ಅಪಿ ।
ಇಂದ್ರಿಯಾಣಿ ಇಂದ್ರಿಯ ಅರ್ಥೇಷು ವರ್ತಂತ ಇತಿ ಧಾರಯನ್ – ನಿಜವರಿತ ಸಾಧಕ ತಾನಾಗಿ ಏನೂ ಮಾಡುತ್ತಿಲ್ಲ ಎಂದು ತಿಳಿಯಬೇಕು- ಕಾಣುವಾಗ,ಕೇಳುವಾಗ,ಮುಟ್ಟುವಾಗ,ಮೂಸುವಾಗ,ತಿನ್ನುವಾಗ,ತಿರುಗುವಾಗ,ಮಲಗುವಾಗ, ಉಸಿರುವಾಗ,ಉಸುರುವಾಗ,ಕಳೆಯುವಾಗ,ಕೊಳ್ಳುವಾಗ,ಎವೆ ಮುಚ್ಚುವಾಗ,ಎವೆ ಬಿಚ್ಚುವಾಗ ಕೂಡಾ-ಇಂದ್ರಿಯಗಳು ತಮ್ಮ ಕೆಲಸದಲ್ಲಿ ತೊಡಗಿವೆ ಎಂದು ಭಾವಿಸುತ್ತ.
ನಮ್ಮ ಜೀವನದಲ್ಲಿ ದೇವರಪೂಜೆ ಮಾತ್ರ ಅನುಷ್ಠಾನವಲ್ಲ. ನಮ್ಮ ಪ್ರತಿಯೊಂದು ನಡೆಯೂ ಒಂದು ಕರ್ಮಯೋಗವಾಗಬೇಕು. ಯಾವುದೋ ಕಾಲ ವಿಶೇಷದಲ್ಲಿ ಮಾತ್ರ ದೇವರ ಪೂಜೆ ಮಾಡುವುದಲ್ಲ. ಇಡೀ ಬದುಕೇ ಒಂದು ಯಜ್ಞವಾಗಬೇಕು. ಯಜ್ಞವನ್ನು ಕನ್ನಡದಲ್ಲಿ ಬೇಳುವೆ ಎನ್ನುತ್ತಾರೆ. ನಮ್ಮ ಬಾಳುವೆಯೇ ಒಂದು ಬೇಳುವೆಯಾಗಬೇಕು.
ಕರ್ಮಾನುಷ್ಠಾನ ಮಾಡುವವನು “ನಾನು ನಾನಾಗಿ ಏನನ್ನೂ ಮಾಡುತ್ತಿಲ್ಲ, ನಾನು ಮಾಡುವ ಕ್ರಿಯೆಯಲ್ಲಿ ನಾನು ಸ್ವತಂತ್ರನಲ್ಲ, ನನ್ನದು ಇಚ್ಛಾಪೂರ್ವಕ ಕೃತಿ ಆದರೆ ಇಲ್ಲಿ ನನಗೆ ಸ್ವಾತಂತ್ರವಿಲ್ಲ” ಎನ್ನುವ ಸತ್ಯವನ್ನು ಅರಿತಿರಬೇಕು. ನಾವು ಮಾಡಬೇಕು ಎಂದುಕೊಂಡಿದ್ದನ್ನು ನಮ್ಮಿಂದ ಮಾಡಲು ಆಗುವುದಿಲ್ಲ, ನಾವು ಬಯಸಿದ್ದು ಸಿಗುವುದಿಲ್ಲ, ಫಲದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಇದು ಪ್ರತಿಯೊಬ್ಬರ ಅನುಭವಕ್ಕೆ ಬರುವ ವಿಷಯ. ಆದರೆ ಕ್ರಿಯೆ ಮಾತ್ರ ನಮ್ಮ ಮುಖೇನ ಆಗುತ್ತದೆ.
‘ನಾನು ಇಂಥದ್ದೇ ಸಿಗಬೇಕು, ಇಂಥದ್ದು ಸಿಗಬಾರದು ಎನ್ನುವ ಇಚ್ಛೆಯಿಂದಾಗಲಿ, ನಾನು ಮಾಡುತ್ತಿದ್ದೇನೆ ಎನ್ನುವ ಅಹಂಕಾರದಿಂದಾಗಲಿ ಮಾಡುತ್ತಿಲ್ಲ; ನನ್ನೊಳಗಿರುವ ಭಗವಂತ ಇದನ್ನು ಮಾಡಿಸುತ್ತಿದ್ದಾನೆ’ ಎಂದು ತತ್ವಜ್ಞಾನಿ ತಿಳಿದಿರುತ್ತಾನೆ. ಆದ್ದರಿಂದ ಯಾವುದರಲ್ಲೂ “ನಾನು, ನನ್ನದು” ಎನ್ನುವ ಅಹಂಕಾರವಿಲ್ಲ. ಅವನು ಏನು ಒದಗಿಸಿ ಕೊಟ್ಟ ಹಾಗೆ ನಡೆಯುತ್ತದೆ ಹೊರತು ಇಲ್ಲಿ ನಾವು ಸ್ವತಂತ್ರ ಕರ್ತಾರರಲ್ಲ. ಇದನ್ನು ತತ್ವವನ್ನು ಅರಿತವನು ತನ್ನ ಪ್ರತಿಯೊಂದು ಕ್ರಿಯೆಯಲ್ಲಿ ಅನುಸರಿಸುತ್ತಾನೆ.
ಪಶ್ಯನ್-ನೋಡುವಾಗ, ಶೃಣ್ವನ್-ಕೇಳುವಾಗ, ಸ್ಪೈಶನ್-ಸ್ಪರ್ಶದಲ್ಲಿ, ಜಿಘ್ರನ್-ಮೂಸುವಾಗ, ಅಶ್ನನ್-ತಿನ್ನುವಾಗ, ಗಚ್ಛನ್-ತಿರುಗುವಾಗ, ಸ್ವಪನ್-ಮಲಗುವಾಗ, ಶ್ವಸನ್-ಉಸಿರಿನಲ್ಲಿ, ಪ್ರಲಪನ್-ಮಾತಿನಲ್ಲಿ, ವಿಸೃಜನ್-ವಿಸರ್ಜಿಸುವಾಗ, ಗೃಹ್ಣನ್-ಸ್ವೀಕರಿಸುವಾಗ, ಉನ್ಮಿಷನ್-ತೆರೆಯುತ್ತ, ನಿಮಿಷನ್-ಮುಚ್ಚುತ್ತ ಹೀಗೆ ತನ್ನೆಲ್ಲಾ ಕ್ರಿಯೆಯಲ್ಲಿ ತಾನೇನೂ ಮಾಡುತ್ತಿಲ್ಲ ಅನ್ನುವ ಅರಿವನ್ನು ತತ್ವಜ್ಞಾನಿ ತಿಳಿದಿರುತ್ತಾನೆ. ಉದಾಹರಣೆಗೆ-ನಾವು ಒಂದು ಹೂವಿನ ಅಂದವನ್ನು ಕಣ್ಣಿನಿಂದ ಸವಿಯುತ್ತೇವೆ, ಅದರ ಪರಿಮಳವನ್ನು ಮೂಗಿನಿಂದ ಆಸ್ವಾಧಿಸುತ್ತೇವೆ, ಆ ಹೂವನ್ನು ಮುಟ್ಟಿ-ಮುಡಿದು ಸಂತೋಷ ಪಡುತ್ತೇವೆ. ಈ ಹೂವನ್ನು ಸೃಷ್ಟಿಸಿದವ, ಅದಕ್ಕೆ ಅಂದವನ್ನು ಕೊಟ್ಟವ ಆ ಭಗವಂತ. ಆ ಹೂವನ್ನು ನೋಡುವ ಕಣ್ಣನ್ನು ನಮಗೆ ಕೊಟ್ಟವ ಆತ(ಹುಟ್ಟು ಕುರುಡನಿಗೆ ಈ ಯೋಗವಿಲ್ಲ). ಈ ಅನುಸಂಧಾನವಿದ್ದರೆ ನೋಡುವ-ಮುಟ್ಟುವ-ಮೂಸವ ಕ್ರಿಯೆಯಲ್ಲಿ ‘ನನ್ನದು’ ಎನ್ನುವ ಅಹಂಕಾರಕ್ಕೆ ಎಡೆಯಿಲ್ಲ. ಅದೇ ರೀತಿ ತಿನ್ನುವುದು: ಈ ಪ್ರಪಂಚದಲ್ಲಿ ಎಷ್ಟೋ ಜನ ಒಂದು ಹೊತ್ತಿನ ಆಹಾರಕ್ಕೂ ಗತಿ ಇಲ್ಲದೆ ಇನ್ನೊಬ್ಬರ ಮುಂದೆ ಕೈಚಾಚಿಕೊಂಡು ಬದುಕುತ್ತಾರೆ. ಆದರೆ ನಮಗೆ ಭಗವಂತ ಮೂರು ಹೊತ್ತಿನ ತುತ್ತಿಗೆ ಅನುಕೂಲ ಮಾಡಿ ಕೊಟ್ಟಿದ್ದಾನೆ ಅನ್ನುವ ಅನುಸಂಧಾನದಿಂದ ಊಟ ಮಾಡಿದಾಗ ಅದೊಂದು ಯಜ್ಞವಾಗುತ್ತದೆ. ಇನ್ನು ನಿದ್ದೆ: ನಿದ್ದೆಯಲ್ಲಿ ನಾವು ಭಗವಂತನ ಸಮೀಪದಲ್ಲಿರುತ್ತೇವೆ. ಆದರೆ ಆ ಎಚ್ಚರ ನಮಗಿರುವುದಿಲ್ಲ. ಒಂದು ವೇಳೆ ನಿದ್ದೆಯೇ ಬಾರದಿದ್ದರೆ? ಇಡೀ ರಾತ್ರಿ ಕನಸಿನಲ್ಲೇ ಕಳೆದರೆ? ಇದನ್ನು ನಮ್ಮಿಂದ ಉಹಿಸುವುದೂ ಕಷ್ಟ. ಹುಟ್ಟಿದಾಗ ನಮಗರಿವಿಲ್ಲದಂತೆ ಉಸಿರಾಟ ಆರಂಭವಾಯಿತು, ನಿದ್ದೆಯಲ್ಲೂ ನಮಗರಿವಿಲ್ಲದಂತೆ ನಮ್ಮ ಉಸಿರಿನ ಕ್ರಿಯೆ ನಿರಂತರ. ಆದರೆ ಈ ಉಸಿರು ಯಾವಾಗ ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಹೀಗೆ ಪ್ರತಿಯೊಂದು ಕ್ರಿಯೆಯಲ್ಲಿ ಆ ವಿಶ್ವಶಕ್ತಿಯ ಅನುಸಂಧಾನ.
ಭಗವಂತ ನಮಗೆ ಅಮೂಲ್ಯವಾದ ಕೈ ಕೊಟ್ಟಿದ್ದಾನೆ. ಪ್ರಾಣಿಗಳಿಗೆ ನಾಲ್ಕೂ ಕಾಲೇ, ಕೈ ಇಲ್ಲ. ತನ್ನ ಮೈ ಮೇಲೆ ಯಾವುದೋ ಜೀವಿ ಕುಳಿತು ರಕ್ತ ಹೀರುತ್ತಿದ್ದರೂ ಅದನ್ನು ಓಡಿಸುವ ಕೈ ಅವುಗಳಿಗಿಲ್ಲ. ಇಂತಹ ಅಮೂಲ್ಯವಾದ ಕೈಯನ್ನು ಭಗವಂತ ನಮಗೆ ಕರುಣಿಸಿದ್ದಾನೆ. ಅತ್ಯಂತ ಸೂಕ್ಷ್ಮ ಇಂದ್ರಿಯವಾದ ಕಣ್ಣನ್ನು ರಕ್ಷಿಸುವ ರೆಪ್ಪೆಗಳು, ಅವು ನಿರಂತರ ತೆರೆಯವುದು-ಬಿಚ್ಚುವುದರಿಂದ ಕಣ್ಣಿನ ರಕ್ಷಣೆ. ಒಂದು ವೇಳೆ, ಕಣ್ಣಿಗೆ ಏನಾದರೂ ಕಸ ಬಿದ್ದರೆ ನಮಗರಿವಿಲ್ಲದಂತೆ ಕಣ್ಣಿಗೆ ನೀರಿನ ಸರಬರಾಜಾಗಿ ಕಣ್ಣು ರಕ್ಷಣೆ ಆಗುತ್ತದೆ. ಈ ಅಪೂರ್ವ ಯಂತ್ರದ ವಿನ್ಯಾಸ ಮಾಡಿದ ಶಿಲ್ಪಿ ಆ ಭಗವಂತ.
ನಮ್ಮ ಪ್ರತಿಯೊಂದು ಇಂದ್ರಿಯಗಳನ್ನೂ ಇಂದ್ರಿಯಾಭಿಮಾನಿ ದೇವತೆಗಳು ನಿಯಂತ್ರಿಸುತ್ತಾರೆ ಎನ್ನುವ ವಿಚಾರವನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಉದಾಹರಣೆಗೆ ಸೂರ್ಯ ಕಣ್ಣಿನ, ಚಂದ್ರ ಕಿವಿಯ ದೇವತೆ. ಸುಪರ್ಣಿ-ವಾರುಣಿ-ಪಾರ್ವತಿ ಶಬ್ದ-ಸ್ಪರ್ಶ-ಗಂಧದ ಅಭಿಮಾನಿ ದೇವತೆಯರು. ಮನೋಭಿಮಾನಿ ದೇವತೆಯಾಗಿ ಗರುಡ ಶೇಷ ರುದ್ರ. ಹೀಗೆ ನಮ್ಮ ಕ್ರಿಯೆಯ ಹಿಂದೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿ ಕೆಲಸ ಮಾಡುತ್ತಿದೆ.