ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 03

ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ ॥೩॥

ಜ್ಞೇಯಃ ಸ ನಿತ್ಯಸಂನ್ಯಾಸೀ ಯಃ ನ ದ್ವೇಷ್ಟಿ ನ ಕಾಂಕ್ಷತಿ ।

ನಿರ್ದ್ವಂದ್ವಃ ಹಿ ಮಹಾಬಾಹೋ ಸುಖಮ್ ಬಂಧಾತ್ ಪ್ರಮುಚ್ಯತೇ –ದ್ವೇಷಿಸದವನು, ಮತ್ತು ಬಯಸದವನು ನಿಜವಾದ ಸಂನ್ಯಾಸಿಯೆಂದರಿಯಬೇಕು. ಮಹಾವೀರ, ಇಂಥ ದ್ವಂದ್ವಗಳನ್ನು ಗೆದ್ದವನು ಹಾಯಾಗಿ ಕರ್ಮ ಸೆರೆಯಿಂದ ಪಾರಾಗುತ್ತಾನೆ.

ಇಲ್ಲಿ ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ಒಗಟಿನ ರೂಪದಲ್ಲಿದೆ. ಈ ಶ್ಲೋಕವನ್ನು ಎಚ್ಚರಿಕೆಯಿಂದ ಬಿಡಿಸಿ ಅರ್ಥೈಸಿಕೊಳ್ಳಬೇಕು. ಇಲ್ಲಿ ಹೇಳುವ ಸಂನ್ಯಾಸ ಸಂನ್ಯಾಸಾಶ್ರಮವಲ್ಲ. ಯಾರು ರಾಗ ದ್ವೇಷವನ್ನು ದಾಟಿ ನಿಲ್ಲುತ್ತಾನೋ ಅವನು ಸಂನ್ಯಾಸಿ. ಸ+ಅಹಂ+ನ್ಯಾಸ-ಸಂನ್ಯಾಸ. ‘ಸ’ ಅಂದರೆ ಸಂಪೂರ್ಣವಾದ, ಸಮೀಚೀನವಾದ, ದೋಷರಹಿತ ಮತ್ತು ಗುಣಪೂರ್ಣನಾದ ಭಗವಂತ. ಅವನಲ್ಲಿ ನಮ್ಮ ಅಹಂ(ರಾಗ ದ್ವೇಷ-ಅಹಂಕಾರ)ನ್ನು ನ್ಯಾಸ ಮಾಡುವುದು ಸಂನ್ಯಾಸ. ಕೃಷ್ಣ ಹೇಳುತ್ತಾನೆ: “ಕರ್ಮಯೋಗ ಕರ್ಮಸಂನ್ಯಾಸಕ್ಕಿಂತ ಮಿಗಿಲು” ಎಂದು. ಏಕೆಂದರೆ ಇಲ್ಲಿ ಅರ್ಜುನ ‘ನನಗೆ ಕೌರವರ ಮೇಲೆ ದ್ವೇಷವಿಲ್ಲ, ನಾವೇ ಗೆಲ್ಲಬೇಕು ಎನ್ನುವ ಬಯಕೆ ಇಲ್ಲ, ನನಗೆ ಯಾವ ಫಲದ ಆಸೆಯೂ ಇಲ್ಲ’ ಎಂದು ಯುದ್ಧ ಮಾಡದೇ ನಿರ್ಲಿಪ್ತನಾಗಿ-ನಿಷ್ಕ್ರೀಯನಾಗಿ ಕುಳಿತರೆ ಅದು ಕರ್ಮಸಂನ್ಯಾಸವಾಗುತ್ತದೆ. ಆದರೆ ಹೀಗೆ ಸುಮ್ಮನೆ ಕುಳಿತರೆ ಕರ್ತವ್ಯಕರ್ಮ(ಕರ್ಮಯೋಗ) ಮಾಡಿದಂತಾಗುವುದಿಲ್ಲ . ಇದರಿಂದಾಗಿ ಅಧರ್ಮಕ್ಕೆ ಜಯವಾಗುತ್ತದೆ. ಆದ್ದರಿಂದ ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರಬೇಕು. ಕರ್ಮಯೋಗವಿಲ್ಲದ ಕರ್ಮಸಂನ್ಯಾಸ ಎಂದೂ ಶ್ರೇಯಸ್ಸನ್ನು ತರುವುದಿಲ್ಲ ಎನ್ನುವುದು ಕೃಷ್ಣನ ಉತ್ತರ.

ಸಂನ್ಯಾಸ ಅನ್ನುವುದು ಅರ್ಥಪೂರ್ಣವಾಗಬೇಕಾದರೆ ಕಾಮ ಕ್ರೋಧಗಳ ತ್ಯಾಗದ ಜೊತೆಗೆ ಕ್ರಿಯೆ ಇರಬೇಕು. ಹೋರಾಡಬೇಕು-ಆದರೆ ರಾಗದ್ವೇಷದಿಂದಲ್ಲ. ಕ್ರಿಯೆ ಇಲ್ಲದೆ ರಾಗ-ದ್ವೇಷ ತ್ಯಾಗಕ್ಕೆ ಅರ್ಥವಿಲ್ಲ. ಆದ್ದರಿಂದ ದ್ವಂದ್ವಾತೀತವಾಗಿ ಕರ್ಮ ಮಾಡಬೇಕು ಎನ್ನುವುದು ಕೃಷ್ಣನ ಸಂದೇಶ.

ನಮ್ಮ ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮದಿಂದ ದೂರ ಸರಿದು, ರಾಗ-ದ್ವೇಷ, ಕಾಮ-ಕ್ರೋಧವನ್ನು ಬಿಟ್ಟು, ನಿಷ್ಕ್ರೀಯನಾಗಿ, ‘ಕರ್ಮಸಂನ್ಯಾಸವನ್ನು ಸಾಧಿಸಿದೆ’ ಎಂದುಕೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ ಎಂದೂ ಶ್ರೇಯಸ್ಸಿಲ್ಲ ಮತ್ತು ಮೋಕ್ಷವಿಲ್ಲ. ರಾಗ-ದ್ವೇಷ ತ್ಯಾಗದ ಜೊತೆಗೆ, ಬದುಕು ಎನ್ನುವ ಜೀವನ ಸಂಗ್ರಾಮದಲ್ಲಿ ನಮ್ಮ ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವುದೇ ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ ಬದುಕನ್ನು ಬಾಳುವವನು ಕರ್ಮದ ಸೆರೆಯಿಂದ ಪಾರಾಗುತ್ತಾನೆ.

ಇಲ್ಲಿ ಕೃಷ್ಣ ಅರ್ಜುನನ್ನು ಮಹಾಬಾಹು ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಮಹಾಬಾಹು ಎಂದರೆ ಮಹಾವೀರ ಎನ್ನುವುದು ಮೇಲ್ನೋಟದ ಅರ್ಥ.ಇಲ್ಲಿ ಈ ವಿಶೇಷಣಕ್ಕೆ ವಿಶೇಷ ಅರ್ಥವಿದೆ. ‘ಮಹಾಬಾ’ ಅಂದರೆ ರಾಗ-ದ್ವೇಷ, ಮತ್ತು ಕಾಮನೆಗಳ ಮಡುವಿನಲ್ಲಿರುವವ. ಇಂತಹ ಮಹತ್ತರವಾದ ರಾಗ-ದ್ವೇಷಗಳನ್ನು ತ್ಯಾಗ ಮಾಡಿದವ ಮಹಾಬಾಹು. “ನಿನ್ನಲ್ಲಿ ಕರ್ಮಸಂನ್ಯಾಸವಿದೆ, ಅದರ ಜೊತೆಗೆ ಕರ್ಮಯೋಗ ಮಾಡಲು ಅರ್ಹತೆಯುಳ್ಳ ಮಹಾವೀರ ನೀನು” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ನಮ್ಮ ಜೀವನ ಸಂಗ್ರಾಮದಲ್ಲಿ ರಾಗ-ದ್ವೇಷಗಳನ್ನು ಬಿಟ್ಟು ಕರ್ಮ ಮಾಡಬೇಕು. ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟಿಗಿರಬೇಕು ಎನ್ನುವುದು ಮೂಲ ಸಂದೇಶ. ಅದಕ್ಕೆ ಹೊಂದಿಕೆಯಾಗುವಂತೆ ಇಲ್ಲಿ ‘ಮಹಾಬಾಹು’ ಎನ್ನುವ ವಿಶೇಷಣ ಬಳಕೆಯಾಗಿದೆ

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *