ಶ್ಲೋಕ – 27 & 28
ಬಾಹ್ಯ ಸುಖದಿಂದ ಅಂತರಂಗದ ಸ್ವರೂಪಭೂತವಾದ ಸಹಜ ಸುಖದ ಕಡೆ ತಿರುಗುವ ಸಂದೇಶವನ್ನು ಕೊಟ್ಟ ಕೃಷ್ಣ, ಅದಕ್ಕೆ ಪೂರಕವಾದ ಧ್ಯಾನದ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ॥೨೭॥
ಯತೇಂದ್ರಿಯಮನೋವೃತ್ತಿರ್ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ॥೨೮॥
ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್ ಚಕ್ಷುಃ ಚ ಏವ ಅಂತರೇ ಭ್ರುವೋಃ ।
ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ ||
ಯತ ಇಂದ್ರಿಯ ಮನಃ ವೃತ್ತಿಃ ಮುನಿಃ ಮೋಕ್ಷ ಪರಾಯಣಃ ।
ವಿಗತ ಇಚ್ಛಾ ಭಯ ಕ್ರೋಧಃ ಯಃ ಸದಾ ಮುಕ್ತಃ ಏವ ಸಃ –ಹೊರಗಣ ವಿಷಯ ಸಂಬಂಧಗಳನ್ನು ಹೊರಗಟ್ಟಿ, ನೋಟವನ್ನು ಹುಬ್ಬುಗಳ ನಡುವಿರಿಸಿ, ಹೊರಳೆಯೊಳಗೆ ಚರಿಸುವ ಪ್ರಾಣಾಪಾನಗಳನ್ನು ಕುಂಭಕದಲ್ಲಿ ಸಮಗೊಳಿಸಿ, ಇಂದ್ರಿಯಗಳ ಮತ್ತು ಮನದ ಚೆಲ್ಲಾಟವನ್ನು ಹಿಡಿತದಲ್ಲಿಟ್ಟವನು, ಬಿಡುಗಡೆಗಾಗಿ ಕಾತರಿಸುವವನು, ಬಯಕೆ-ಅಂಜಿಕೆ-ಸಿಡುಕುಗಳನ್ನು ತೊಡೆದುಕೊಂಡವನು-ಇಂಥ ಸಾಧಕನು ಸದಾ ಮುಕ್ತನೇ ಸರಿ.
ನಾವು ನಮ್ಮ ಮನಸ್ಸನ್ನು ನಿಯಂತ್ರಿಸಬೇಕಾದರೆ ಮೊದಲು ನಮ್ಮ ಇಂದ್ರಿಯಗಳು ಹೊರ ಪ್ರಪಂಚದಲ್ಲಿ ಸಂಚರಿಸುವುದನ್ನು ನಿಯಂತ್ರಿಸಬೇಕು. “ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್”- ಬಾಹ್ಯೇಂದ್ರಿಯ ನಿಯಂತ್ರಣ ಮಾಡದೆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಹೊರ ಪ್ರಪಂಚದ ರೂಪ-ರಸ-ಸ್ಪರ್ಶ-ಶಬ್ದ-ಗಂಧ ಎನ್ನುವ ಸುಖದ ಭ್ರಮೆಯನ್ನು ಹೊರಗೇ ಬಿಡಬೇಕು, ಜೊತೆಗೆ ಅನಪೇಕ್ಷಿತವಾಗಿ ನಮ್ಮೊಳಗೆ ತುಂಬಿರುವ, ಸತ್ಯವನ್ನು ಕಾಣುವುದಕ್ಕೆ ಅಡ್ಡಗೋಡೆಯಾಗಿರುವ, ಈ ಪ್ರಪಂಚದ ಅನುಭೂತಿಯನ್ನು ಹೊರಹಾಕಬೇಕು. ಸಾಮಾನ್ಯವಾಗಿ ನಮಗೆ ಧ್ಯಾನಕ್ಕೆ ಕುಳಿತಾಗ ಏನೇನೊ ಕಾಣಲು ಆರಂಭವಾಗುತ್ತದೆ. ಸುಂದರವಾದದ್ದು, ಭಯಾನಕವಾದದ್ದು, ಇತ್ಯಾದಿ. ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಇವೆಲ್ಲವೂ ನಾವು ನಮ್ಮೊಳಗೆ ತುಂಬಿಕೊಂಡಿರುವ ಅನಗತ್ಯ ವಿಚಾರಗಳು. ಅವು ಹೊರ ಹೋಗುವಾಗ ಈ ರೀತಿ ನಮಗೆ ದರ್ಶನ ಕೊಡುತ್ತವೆ. ಹಠಬಿಡದೆ ಸಾಧನೆ ಮುಂದುವರಿಸಿದಾಗ ಕ್ರಮೇಣವಾಗಿ ಈ ಎಲ್ಲಾ ವಿಚಾರಗಳು ಹೊರಹೋಗಿ ಮನಸ್ಸು ನಿರ್ಮಲವಾಗುತ್ತದೆ. ಇದು ಒಂದೇ ದಿನದಲ್ಲಿ ಆಗುವಂತದ್ದಲ್ಲ, ಇದಕ್ಕೆ ನಿರಂತರ ಸಾಧನೆ ಅಗತ್ಯ. ಒಮ್ಮೆ ಅಂತಃಕರಣ ಸ್ವಚ್ಛವಾದರೆ ಅದರಲ್ಲಿ ಏನನ್ನು ಬೇಕಾದರೂ ಪ್ರತಿಬಿಂಬಿಸಬಹುದು.
ಧ್ಯಾನಕ್ಕೆ ಬೇಕಾದ ಇನ್ನೊಂದು ಮುಖ್ಯವಾದ ಅಂಶ ಅನ್ನಮಯಕೋಶ(ದೇಹ) ಸ್ಥಿರಗೊಳಿಸುವುದು. ದೇಹ ಚಲಿಸಿದರೆ ಮನಸ್ಸು ಚಲಿಸುತ್ತದೆ-ಆಗ ಏಕಾಗ್ರತೆ ಸಾಧ್ಯವಿಲ್ಲ. ಅದಕ್ಕಾಗಿ ನಾವು ನೆಟ್ಟಗೆ(erect and straight body), ನಮಗೆ ಸಾಧ್ಯವಾದ ಆಸನ(Posture)ದಲ್ಲಿ ನಮ್ಮ ದೇಹವನ್ನು ಸ್ಥಿರಗೊಳಿಸಬೇಕು. ಕೃಷ್ಣ ಹೇಳುತ್ತಾನೆ “ಚಕ್ಷುಃ ಚ ಏವ ಅಂತರೇ ಭ್ರುವೋಃ” ಎಂದು. ಅಂದರೆ ನಮ್ಮ ದೃಷ್ಟಿಯನ್ನು ನಮ್ಮ ಎರಡು ಹುಬ್ಬಿನ ನಡುವೆ ನೆಡುವುದು.(ಇದು ಕಷ್ಟವಾದರೆ ಮೂಗಿನ ತುದಿಯನ್ನೂ ಆರಿಸಿಕೊಳ್ಳಬಹುದು ಎಂದು ಶಾಸ್ತ್ರಕಾರರು ಹೇಳುತ್ತಾರೆ). ನಮ್ಮ ಎರಡು ಹುಬ್ಬಿನ ನಡುವೆ ಆಜ್ಞಾಚಕ್ರವಿದೆ, ಅಲ್ಲಿ ನಾವು ನಮ್ಮ ದೃಷ್ಟಿಯನ್ನು ನೆಟ್ಟಾಗ ಈ ಶಕ್ತಿ ಕೇಂದ್ರ ಜಾಗೃತವಾಗುತ್ತದೆ. ಇದರಿಂದ ಅನ್ನಮಯ ಕೋಶ ಸ್ಥಿರವಾಗುತ್ತದೆ.
ಅನ್ನಮಯಕೋಶದ ನಂತರ ಪ್ರಾಣಮಯಕೋಶ. “ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ”-ನಮ್ಮೊಳಗೆ ನಿರಂತರ ವಾಯುವಿನ ಚಲನೆ ಇರುತ್ತದೆ; ಈ ಚಲನೆಯನ್ನು ಸ್ಥಿರಗೊಳಿಸುವುದು-ಇದನ್ನು ಕುಂಭಕ ಎನ್ನುತ್ತಾರೆ. ಇದರಲ್ಲಿ ಎರಡು ವಿಧ. ಒಂದು ಅಂತಃಕುಂಭಕ ಹಾಗು ಇನ್ನೊಂದು ಬಾಹ್ಯಕುಂಭಕ. ಅಂತಃಕುಂಭಕದಲ್ಲಿ ಮೊದಲು ಸಂಪೂರ್ಣ ಒಳಗಿರುವ ಗಾಳಿಯನ್ನು ಹೊರಹಾಕಿ ನಂತರ ಎಷ್ಟು ಹೆಚ್ಚುಸಾಧ್ಯವೋ ಅಷ್ಟು ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಂಡು, ಉಸಿರನ್ನು ಸ್ಥಗನಗೊಳಿಸಬೇಕು. [ಈ ರೀತಿಯ ಪ್ರಾಣಾಯಾಮವನ್ನು ಗುರುವಿನಿಂದ ಕಲಿತು ಮಾಡಬೇಕು ಇಲ್ಲದಿದ್ದರೆ ಇದರಿಂದ ಅಪಾಯವಿದೆ]. ಬಾಹ್ಯಕುಂಭಕದಲ್ಲಿ ಒಳಗಿನ ಗಾಳಿಯನ್ನು ಸಂಪೂರ್ಣ ಹೊರಹಾಕಿ ಅದೇ ಸ್ಥಿತಿಯಲ್ಲಿ ಉಸಿರನ್ನು ಸ್ಥಗನಗೊಳಿಸುತ್ತಾರೆ. ಸಾಮಾನ್ಯವಾಗಿ ಹೃದಯ ರೋಗವಿದ್ದವರಿಗೆ ಅಂತಃಕುಂಭಕ ಅಪಾಯಕಾರಿ, ಅವರು ಬಾಹ್ಯಕುಂಭಕ ಮಾಡಬಹುದು. ಹೀಗೆ ಕುಂಭಕದಿಂದ ಪ್ರಾಣಮಯಕೊಶ ಸ್ಥಿರವಾಗುತ್ತದೆ. ನಂತರದ ಹೆಜ್ಜೆ ಮನೋಮಯ ಮತ್ತು ವಿಜ್ಞಾನಮಯಕೋಶ. ನಮ್ಮ ಮನಸ್ಸು ಚಂಚಲ, ಅದು ಒಂದುಕಡೆ ನಿಲ್ಲುವುದಿಲ್ಲ, ಅದನ್ನು ಸ್ಥಿರಗೊಳಿಸಬೇಕು. ‘ಈ ದಾರಿಯಲ್ಲಿ ನಾನು ಸಾಗಿ-ಸಾಧಿಸಿ ಸಿದ್ಧಿ ಪಡೆದೇ ಪಡೆಯುತ್ತೇನೆ’ ಎನ್ನುವ ಹಠತೊಟ್ಟು ಮನಸ್ಸನ್ನು ಅದಕ್ಕೆ ಅಣಿಗೊಳಿಸಬೇಕು. ಇದರಿಂದ ಚಿತ್ತ ಭಗವಂತನ ಕಡೆ ಏಕಾಗ್ರವಾಗುತ್ತದೆ. ಈ ಸ್ಥಿತಿ ಪಂಚಬೌತಿಕವಾಗಿ ನಾವು ತಲುಪಬಹುದಾದ ಅತ್ಯಂತ ಮಹತ್ತಾದ ಸ್ಥಿತಿ. ಇಲ್ಲಿರುವ ಆನಂದ ಅಪರಿಮಿತ. ಈ ಸ್ಥಿತಿಯಲ್ಲಿರುವ ಸುಖವನ್ನು ಅನುಭವಿಸಿದರೆ ಮುಂದೆ ಬಾಹ್ಯ ಪ್ರಪಂಚದಲ್ಲಿನ ಸುಖದ ಹಿಂದೆ ನಮ್ಮ ಮನಸ್ಸು ಎಂದೂ ಹರಿಯುವುದಿಲ್ಲ.ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಇದರಿಂದ ನಮ್ಮ ಆಸೆ-ಭಯ-ಕ್ರೋಧ ಎಲ್ಲವೂ ಇಲ್ಲವಾಗುತ್ತದೆ. “ಇಂತಹ ಸಾಧಕ ಸದಾ ಮುಕ್ತನೇ ಸರಿ” ಎನ್ನುತ್ತಾನೆ ಕೃಷ್ಣ.
ಕೃಷ್ಣ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ ಮತ್ತು ವಿಜ್ಞಾನಮಯಕೋಶವೆಂಬ ಚತುರ್ವಿದ ಅಂತಃಕರಣವನ್ನು ಪಕ್ವಗಳಿಸಿ ಹೇಗೆ ನಾವು ನಮ್ಮೊಳಗಿನ ಭಗವಂತನ ದರ್ಶನವನ್ನು ಪಡೆಯಬಹುದು ಎನ್ನುವುದನ್ನು ವಿವರಿಸಿದ. ಮುಂದಿನ ಶ್ಲೋಕದಲ್ಲಿ ನಾವೆಂದೂ ಕಾಣದ ಆ ಭಗವಂತನನ್ನು ಯಾವ ರೀತಿ ಕಾಣಬೇಕು ಎನ್ನುವುದನ್ನು ವಿವರಿಸುತ್ತಾನೆ.