ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 22

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥೨೨॥

ಯೇ ಹಿ ಸಂಸ್ಪರ್ಶ ಜಾಃ ಭೋಗಾಃ ದುಃಖ ಯೋನಯಃ ಏವ ತೇ ।

ಆದಿ ಅಂತ ವಂತಃ ಕೌಂತೇಯ ನ ತೇಷು ರಮತೇ ಬುಧಃ –ವಿಷಯದ ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ ಬರಿದಾಗುವಂಥವು. ಕೌಂತೇಯ, ಬಲ್ಲವರು ಅವನ್ನು ಮೆಚ್ಚುವುದಿಲ್ಲ.

ಬಾಹ್ಯ ವಿಷಯ ಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು? ಒಂದು ಗುಲಗಂಜಿಯಷ್ಟು ಸುಖಕ್ಕಾಗಿ ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ. ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ. ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ ಸತ್ಯವನ್ನರಿಯದೆ ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ.

ಅಧ್ಯಾತ್ಮದ ಬಗ್ಗೆ ಕೆಲವರು ಹೇಳುವುದಿದೆ “ಈಗಾಗಲೇ ನಮಗೇಕೆ ಅಧ್ಯಾತ್ಮ, ಅದೆಲ್ಲಾ ಅರವತ್ತರ ಶಾಂತಿ ಆದ ಮೇಲೆ” ಎಂದು. ಇದು ಏಕೆ ಸರಿಯಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *