ಶ್ಲೋಕ – 20
ಹಿಂದಿನ ಶ್ಲೋಕದಲ್ಲಿ ಕೃಷ್ಣ ಅಧ್ಯಾತ್ಮಿಕವಾಗಿ ಭಗವಂತನ ರೂಪದ ಸಮದೃಷ್ಟಿ ಬಗ್ಗೆ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕವಾಗಿ ನಮ್ಮ ಬದುಕಿನಲ್ಲಿ ಹೇಗೆ ಸಮದೃಷ್ಟಿ ಬೆಳೆಸಿಕೊಳ್ಳಬೇಕು ಎನ್ನುವುದನ್ನು ವಿವರಿಸುತ್ತಾನೆ.
ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ ।
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥೨೦॥
ನ ಪ್ರಹೃಷ್ಯೇತ್ ಪ್ರಿಯಮ್ ಪ್ರಾಪ್ಯ ನ ಉದ್ವಿಜೇತ್ ಪ್ರಾಪ್ಯ ಚ ಅಪ್ರಿಯಮ್ ।
ಸ್ಥಿರ ಬುದ್ಧಿಃ ಅಸಮ್ಮೂಢಃ ಬ್ರಹ್ಮವಿತ್ ಬ್ರಹ್ಮಣಿ ಸ್ಥಿತಃ –ಸುಖ ಬಂದಾಗ ಹಿಗ್ಗಬಾರದು; ದುಃಖ ಬಂದಾಗ ಕುಗ್ಗಬಾರದು. ಇಂಥವನು ಬಗೆಗಟ್ಟಿಗೊಂಡವನು. ಎಚ್ಚರ ತಪ್ಪದವನು. ಭಗವಂತನನ್ನರಿತವನು.ಭಗವಂತನಲ್ಲೇ ನೆಲೆ ನಿಂತವನು.
ನಮ್ಮ ಜೀವನ ಎನ್ನುವುದು ಸುಖ-ದುಃಖದ ಚಕ್ರಭ್ರಮಣ. ಯಾರಿಗೂ ಕೇವಲ ಸುಖ ಎಂದಾಗಲಿ, ಕೇವಲ ದುಃಖ ಎಂದಾಗಲಿ ಇಲ್ಲ. ಎಂತಹ ಸಂಪತ್ತಿನ ಸುಪ್ಪತ್ತಿಗೆಯಲ್ಲಿದ್ದರೂ ಜೀವನದಲ್ಲಿ ಕಷ್ಟದ ಕ್ಷಣಗಳು ಇದ್ದೇ ಇರುತ್ತವೆ. ಅದೇ ರೀತಿ ಕಷ್ಟದಲ್ಲಿರುವವನಿಗೂ ಸುಖದ ಕ್ಷಣಗಳು ಇದ್ದೇ ಇದೆ. ಬದುಕು ಎನ್ನುವುದು ಸುಖ ದುಃಖಗಳ ಪ್ರವಾಹ. ಈ ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ “ನಮಗೆ ಸುಖ-ದುಃಖವೆಂಬ ದ್ವಂದ್ವದಲ್ಲಿ ಸಮದೃಷ್ಟಿ ಇರಬೇಕು” ಎಂದು. ಸಾಮಾನ್ಯವಾಗಿ ನಮಗೆ ಇಷ್ಟವಾದದ್ದು ಫಲಿಸಿದಾಗ ನಾವು ಹಿಗ್ಗುತ್ತೇವೆ, ನಮಗೆ ಅಪ್ರೀಯವಾದದ್ದು, ನಾವು ಬಯಸದಂತಹ ಘಟನೆಗಳು ಸಂಭವಿಸಿದಾಗ ಉದ್ವೆಗಕ್ಕೊಳಗಾಗಿ ಕುಸಿದುಬಿಡುತ್ತೇವೆ, ತಳಮಳಿಸುತ್ತೇವೆ. ಇದು ಸಹಜವಾಗಿ ನಮ್ಮ ಬದುಕಿನಲ್ಲಿ ನಾವು ನೋಡತಕ್ಕಂತಹ ಸ್ಥಿತಿ. ಕೃಷ್ಣ ಹೇಳುತ್ತಾನೆ “ಇವೆರಡೂ ಆಗದಂತೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು” ಎಂದು. ಯಾವುದು ಅನಿವಾರ್ಯವೋ ಅದನ್ನು ಸಹಜವಾಗಿ ಸ್ವೀಕರಿಸಬೇಕು. ಅದನ್ನು ಬಿಟ್ಟು ‘ಹೀಗಾಗಬಾರದು, ಹಾಗಾಗಬಾರದು’ ಎಂದು ಕುಳಿತರೆ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಇದು ಮನಃಶಾಸ್ತ್ರ. ಇದರ ಅರ್ಥ ಸುಖ ಬಂದಾಗ ಅದನ್ನು ಅನುಭವಿಸಬಾರದು ಎಂದಲ್ಲ. ಯಾವುದು ಬಂತೋ ಅದನ್ನು ಹಾಗೇ ಸ್ವೀಕರಿಸು, ಆದರೆ ಅತಿಯಾದ ಹಾರಾಟ ಬೇಡ. ಬದುಕಿನಲ್ಲಿ ಎಲ್ಲವೂ ಬರುತ್ತದೆ ಹೋಗುತ್ತದೆ ಯಾವುದೂ ಶಾಶ್ವತವಲ್ಲ ಎನ್ನುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೋ ಒಂದನ್ನು ಅತಿಯಾಗಿ ಹಚ್ಚಿಕೊಂಡರೆ ಒಂದು ವೇಳೆ ಅದು ನಮ್ಮಿಂದ ದೂರವಾದರೆ ತಡೆದುಕೊಳ್ಳಲಾಗುವುದಿಲ್ಲ. ಇದರಿಂದ ನಾವು ಮಾನಸಿಕವಾಗಿ ವ್ಯಾಕುಲತೆಗೊಳಗಾಗುತ್ತೇವೆ. ಅದರಿಂದ ಚಿಕ್ಕ ಚಿಕ್ಕ ವಿಷಯಕ್ಕೆ ಆತ್ಮಹತ್ಯೆಯಂತಹ ಘೋರ ಪಾಪವನ್ನು ಮಾಡಲು ನಮ್ಮ ಮನಸ್ಸು ಮುಂದಾಗುತ್ತದೆ. ಆದ್ದರಿಂದ ಬದುಕಿನ ಯಶಸ್ವೀ ಸೂತ್ರ ಎಂದರೆ ಯಾವುದನ್ನೂ ತಲೆಕೆಡಿಸಿಕೊಳ್ಳದೆ ಬಂದಿದ್ದನ್ನು ಬಂದಂತೆ ಅನುಭವಿಸುವುದು. ನಾವು ಬಯಸಿದಂತೆ ಪ್ರಪಂಚವಿಲ್ಲ-ಪ್ರಪಂಚವಿದ್ದಂತೆ ನಾವು. ಅದನ್ನು ಸ್ವಾಗತಿಸಿ ಯಾವ ಉದ್ವೇಗ ಇಲ್ಲದೆ ಬದುಕುವುದನ್ನು ಕಲಿತಾಗ ಮನಸ್ಸು ಗಟ್ಟಿಯಾಗುತ್ತದೆ.
ಆಧ್ಯಾತ್ಮಿಕವಾಗಿ ನೋಡಿದಾಗ ನಮಗೆ ಪ್ರಿಯವಾದದ್ದು-ಅಪ್ರೀಯವಾದದ್ದು ಎಂದು ನಾವು ಯಾವುದಕ್ಕೆ ಹೇಳುತ್ತೇವೆ- ಅದು ನಿಜವಾಗಿಯೂ ಒಳ್ಳೆಯದು ಎಂದು ಹೇಳಲು ಬರುವುದಿಲ್ಲ. ಇಷ್ಟವಾದದ್ದು ಒಳ್ಳೆಯದು ಎಂದು ಹೇಳಲು ಬರುವುದಿಲ್ಲ. ಕೆಲವೊಮ್ಮೆ ನಮಗೆ ಅಪ್ರೀಯವಾದದ್ದು ನಮಗೆ ಹಿತವನ್ನು ಕೊಡುತ್ತದೆ. ಆದರೆ ಅದು ನಮಗೆ ತಿಳಿಯುವುದು ಮಾತ್ರ ತಡವಾಗಿ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಘಟನೆ ನಮ್ಮ ಮುಂದಿನ ಬೆಳವಣಿಗೆಗೆ ಪೂರಕವಾಗಿರುತ್ತದೆ. ಒಬ್ಬ ಮನುಷ್ಯ ಅಧಃಪಾತ ಹೊಂದುವ ಪ್ರಾರಾಬ್ಧಕರ್ಮ ಹೊಂದಿದ್ದರೆ ಆತನಿಗೆ ಬೇಕಾದಷ್ಟು ಸುಖ ಬರಬಹುದು! ಅವನು ಆ ಸುಖದಲ್ಲಿ ಮೈಮರೆತು ಮಾಡಬಾರದ್ದನ್ನು ಮಾಡಿ ಅಧಃಪಾತ ಹೊಂದಬಹುದು; ಕಷ್ಟದಲ್ಲಿ ಜೀವ ಪಕ್ವವಾಗಬಹುದು. ಉಪನಿಷತ್ತಿನಲ್ಲಿ ಈ ವಿಚಾರವನ್ನು ವ್ಯಂಗ್ಯವಾಗಿ ಹೀಗೆ ಹೇಳಿದ್ದಾರೆ: “ಹಿತವಾದದ್ದು ಮತ್ತು ಇಷ್ಟವಾದದ್ದು ಎರಡೂ ಮುಂದೆ ಬಂದಾಗ ಇಷ್ಟವಾದುದ್ದನ್ನು ಆಯ್ಕೆ ಮಾಡುತ್ತಾರೆ-ಅವರು ತಿಳಿಗೇಡಿಗಳು” ಎಂದು.
ನಮಗೆ ಇಷ್ಟವಾದದ್ದು ಹಿತವಾಗಿರಬೇಕೆಂದಿಲ್ಲ, ಅದಕ್ಕಾಗಿ ಹಾರಾಡುವುದು ಅರ್ಥಶೂನ್ಯ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಅನಿಷ್ಠ ಘಟನೆ ನೆಡೆದಾಗ ಅದಕ್ಕಾಗಿ ಎಂದೂ ಗೊಂದಲಕ್ಕೊಳಗಾಗಬೇಕಿಲ್ಲ. ಅದರಿಂದಲೇ ಮುಂದೆ ನಮಗೆ ಹಿತವಾಗಬಹುದು. ಈ ವಿಚಾರ ಹೆಚ್ಚಿನವರಿಗೆ ಅನುಭವಕ್ಕೆ ಬಂದಿರುತ್ತದೆ. ‘ಹೀಗೇಕೆ-ಹೀಗಾಗಬಾರದಿತ್ತು’ ಎಂದು ಯೋಚಿಸುತ್ತಿರುತ್ತೇವೆ ಆದರೆ ಮುಂದೆ ಹಾಗೆ ಆದುದರಿಂದಲೇ ನಮ್ಮ ಸಮಸ್ಯೆಗೊಂದು ದಾರಿ ಕಾಣುತ್ತದೆ. ಆದರೆ ಅದು ತಿಳಿಯುವುದು ಮಾತ್ರ ತಡವಾಗಿ.ಈ ಎಲ್ಲಾ ಕಾರಣದಿಂದ ಸುಖಬಂದಾಗ ಸುಖದ ಭ್ರಮೆ ಬೇಡ, ದುಃಖ ಬಂದಾಗ ವ್ಯಾಕುಲತೆ ಬೇಡ. ಎರಡರ ಬಗ್ಗೆಯೂ ಸಮದೃಷ್ಟಿ ಇರಲಿ. ಭಗವಂತ ಕೊಟ್ಟಿದ್ದನ್ನು ಪ್ರಾಮಾಣಿಕವಾಗಿ ಅನುಭವಿಸುತ್ತೇನೆ ಎನ್ನುವ ಅನುಸಂಧಾನವಿರಲಿ. ಮಾನಸಿಕ ಗೊಂದಲ ಬೇಡ.ಬದುಕಿನಲ್ಲಿ ಯಾವುದು ಹಿತ-ಯಾವುದು ಅಹಿತ ಎನ್ನುವುದು ಭಗವಂತನಿಗೆ ಗೊತ್ತಿದೆ ಎನ್ನುವ ಎಚ್ಚರ ಉಳ್ಳವನು ತನ್ನ ಮನಸ್ಸನ್ನು ಸುಖ-ದುಃಖದಲ್ಲಿ ನೆಟ್ಟಿರುವುದಿಲ್ಲ ಬದಲಾಗಿ ಅವನ ಮನಸ್ಸು ಭಗವಂತನಲ್ಲಿ ನೆಟ್ಟಿರುತ್ತದೆ. ಭಗವಂತ ನಮ್ಮನ್ನು ತಾಯಿ ಮಗುವನ್ನು ನೋಡಿಕೊಂಡಂತೆ ನೋಡಿಕೊಳ್ಳುತ್ತಾನೆ. ತಾಯಿಯಿಂದ ಬರುವ ಎಲ್ಲಾ ವಿಚಾರ ಮಗುವಿಗೆ ಇಷ್ಟವಾಗುವುದಿಲ್ಲ. ಆದರೆ ತಾಯಿ ಮಗುವಿನ ಉದ್ಧಾರಕ್ಕೋಸ್ಕರ ಮಗುವಿನಲ್ಲಿ ಆ ಕೆಲಸವನ್ನು ಮಾಡಿಸುತ್ತಾಳೆ. ಅಲ್ಲಿ ಇಷ್ಟ ಮುಖ್ಯವಲ್ಲಿ, ಯಾವುದು ಹಿತ ಅದು ಮುಖ್ಯ.