ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 18

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥೧೮॥

ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।

ಶುನಿ ಚ ಏವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ –ನಿಜವಾದ ಪಂಡಿತ-ವಿದ್ಯಾವಿನಯಸಂಪನ್ನ, ಬ್ರಾಹ್ಮಣವರ್ಣ, ಆಕಳು,ಆನೆ, ನಾಯಿ,ಹೊಲಗೇಡಿ ಹೀನ ಮಾನವನಲ್ಲಿ ಕೂಡ ಏಕರೂಪನಾದ ಭಗವಂತನನ್ನು ಕಾಣಬಲ್ಲ.

ಈ ಶ್ಲೋಕ ಬಹಳ ಮಂದಿಗೆ ಅರ್ಥವಾಗುವುದಿಲ್ಲ ಅಥವಾ ಅರ್ಥವಾಗದೆ ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಒಬ್ಬ ಸಾಧಕನ ಉಪಾಸನೆಯಲ್ಲಿ ಇರಬೇಕಾದ ಇನ್ನೊಂದು ಮುಖವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಇದು ತುಂಬಾ ಒಳ ನೋಟವನ್ನು ಅಪೇಕ್ಷಿಸುವ ಶ್ಲೋಕ. ಇಲ್ಲಿ ಮೂರು ತರಹದ ಮನುಷ್ಯನ ಸ್ಥಿತಿಯನ್ನು ಮತ್ತು ಮೂರು ತರಹದ ಪ್ರಾಣಿಗಳ ಸ್ಥಿತಿಯನ್ನು ಕೃಷ್ಣ ವಿವರಿಸಿದ್ದಾನೆ. ಮಾನವರಲ್ಲಿ: ವಿದ್ಯಾವಿನಯಸಂಪನ್ನ, ಬ್ರಾಹ್ಮಣ ಮತ್ತು ಶ್ವಪಾಕ. ಪ್ರಾಣಿಗಳಲ್ಲಿ: ಗೋವು, ಆನೆ ಮತ್ತು ನಾಯಿ.

ಮನುಷ್ಯರಲ್ಲಿ ಜ್ಞಾನದ ತುತ್ತ ತುದಿಯನ್ನು ತಲುಪಿದವ ಮತ್ತು ಅತ್ಯಂತ ಶ್ರೇಷ್ಠ ‘ವಿದ್ಯಾ ವಿನಯಸಂಪನ್ನ’. ವೇದದ ಕೆಲವು ಭಾಗವನ್ನು ಪ್ರಾಮಾಣಿಕವಾಗಿ ಮನನ ಮಾಡಿ ಉಪಾಸನೆ ಮಾಡುವವ ಬ್ರಾಹ್ಮಣ. (ಇಲ್ಲಿ ಹೇಳುವ ಬ್ರಾಹ್ಮಣ ಬ್ರಾಹ್ಮಣವರ್ಣ; ಜಾತಿ ಅಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದ್ದೇವೆ). ಸಮಸ್ತ ವೇದವನ್ನು ಓದಿ ಆ ವೇದೋಕ್ತವಾದ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡವ ವೇದಜ್ಞ. ವೇದದ ಅಂತರಂಗದ ಅರ್ಥವನ್ನು ತಿಳಿದವ ‘ವೇದ ಅರ್ಥಜ್ಞ’-ಆತನೇ ‘ವಿದ್ಯಾ ವಿನಯಸಂಪನ್ನ’

ಇನ್ನು ಮಾನವರಲ್ಲಿ ಅತೀ ಕೀಳು ಅಂದರೆ ಶ್ವಪಾಕ. ಶ್ವಪಾಕ ಎಂದರೆ ನಾಯಿಯ ಮಾಂಸ ತಿನ್ನುವವ ಎಂದರ್ಥ. ಅಂದರೆ ಆತನಿಗೆ ಯಾವ ಸಂಸ್ಕಾರವೂ ಇಲ್ಲ, ಹೊಟ್ಟೆಗಾಗಿ ಏನನ್ನಾದರೂ ತಿನ್ನುವವ. ಇದು ಮನುಷ್ಯನ ಅಧಃಪಾತದ ಪರಾಕಾಷ್ಠೆಯನ್ನು ಹೇಳುವಂತದ್ದು. ಹೀಗೆ ಅತ್ಯಂತ ಎತ್ತರಕ್ಕೇರಿದ ವಿದ್ಯಾವಿನಯಸಂಪನ್ನ, ಅದರಿಂದ ಕೆಳಗೆ ಬ್ರಾಹ್ಮಣವರ್ಣ, ಅತ್ಯಂತ ಕೆಳಗೆ ಶ್ವಪಾಕ.

ಪ್ರಾಣಿಗಳಲ್ಲಿ ಗವಿ(ಗೋವು) ಅತ್ಯಂತ ಶ್ರೇಷ್ಠ ಪಾಣಿ. ಅದರ ನಂತರ ಮಧ್ಯಮ ಹಸ್ತಿನಿ(ಆನೆ), ಕೊನೆಗೆ ನಾಯಿ. ಪ್ರಾಚೀನರು ಮನಸ್ಸನ್ನು ಯಾವುದು ಶುದ್ಧಗೊಳಿಸುತ್ತದೆ ಅದನ್ನು ಶುದ್ಧ ಎಂದು ತೀರ್ಮಾನ ಮಾಡಿದರು. ಉದಾಹರಣೆಗೆ ಜಿಂಕೆ ಮತ್ತು ಹುಲಿ ಚರ್ಮ ಮನಸ್ಸನ್ನು ಏಕಾಗ್ರ ಮಾಡಲು ಸಹಕರಿಸುತ್ತದೆ. ಆದ್ದರಿಂದ ಅದು ಶುದ್ಧ ಮತ್ತು ಶ್ರೇಷ್ಠ. ಅದೇ ರೀತಿ ಗೋವು; ಈ ಪ್ರಾಣಿಯಲ್ಲಿ ಯಾವಾಗಲೂ ಸಾತ್ವಿಕವಾದ ಸ್ಪಂದನ(Vibration)ವಿರುತ್ತದೆ. ಹಸುವಿನಲ್ಲಿರುವ ಇನ್ನೊಂದು ಶ್ರೇಷ್ಠ ಅಂಶ ಎಂದರೆ: ಈ ಪ್ರಪಂಚದಲ್ಲಿ ಎಲ್ಲ ಪ್ರಾಣಿಗಳ ಮಲ-ಮೂತ್ರ ವರ್ಜ್ಯ, ಆದರೆ ಹಸುವಿನ ಮಲ ಮೂತ್ರ ಶ್ರೇಷ್ಠ. ಹೀಗೆ ಪ್ರಾಣಿಗಳಲ್ಲಿ ಹಸು ಅತ್ಯಂತ ಶ್ರೇಷ್ಠ. ಪ್ರಾಚೀನರು ನಾಯಿಯನ್ನು ಅತ್ಯಂತ ಕೆಳವರ್ಗ ಎಂದು ಪರಿಗಣಿಸಿದರು. ನಮಗೆ ತಿಳಿದಂತೆ ನಾಯಿ ತನ್ನ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ಕೊಡಲು ಸಿದ್ಧವಿರುವ ಸಾಕು ಪ್ರಾಣಿ. ಆದರೆ ಇದು ಅತಿ ಹೆಚ್ಚು ತಾಮಸಿಕ ಸ್ಪಂದನ(Vibration)ವಿರುವ ಪ್ರಾಣಿ. ಆದ್ದರಿಂದ ನಾಯಿಯಿಂದ ನಮ್ಮ ಮಾನಸಿಕ ಅಭಿವೃದ್ಧಿಗೆ ಏನೂ ಪೋಷಣೆ ಇಲ್ಲ. ಈ ಕಾರಣದಿಂದ ನಾಯಿಯನ್ನು ಪ್ರಾಚೀನರು ಅತ್ಯಂತ ಕನಿಷ್ಠ ಸ್ಥಾನದಲ್ಲಿರಿಸಿದರು. ಹೀಗೆ ಪ್ರಾಣಿಗಳಲ್ಲಿ ಹಸು ಶ್ರೇಷ್ಠ, ಆನೆ ಮಧ್ಯಮ ಮತ್ತು ನಾಯಿ ಕನಿಷ್ಠ.

ಇಲ್ಲಿ ಕೃಷ್ಣ ಹೇಳುತ್ತಾನೆ: “ಪಂಡಿತಾಃ ಸಮದರ್ಶಿನಃ” ಎಂದು. ಅಂದರೆ ಪಂಡಿತರು ಸಮದೃಷ್ಟಿ ಉಳ್ಳವರಾಗಿರುತ್ತಾರೆ ಎಂದರ್ಥ. ಅವರು ಪ್ರತಿಯೊಂದರಲ್ಲೂ, ಅದರೊಳಗಿರುವ ಭಗವಂತನ ವಿಶೇಷ ಅಭಿವ್ಯಕ್ತವನ್ನು ಕಾಣುತ್ತಾರೆ. ಹಸುವಾಗಿರಲಿ, ನಾಯಿಯಾಗಿರಲಿ, ವಿದ್ಯಾವಿನಯಸಂಪನ್ನರಾಗಿರಲಿ ಏನೇ ಇರಲಿ. ಏಕೆಂದರೆ ಭಗವಂತ ಸರ್ವಾಂತರ್ಯಮಿ, ಆತ ಎಲ್ಲರ ಒಳಗೂ ಇದ್ದಾನೆ. ಆತನ ಅಭಿವ್ಯಕ್ತಿ ಮಾತ್ರ ಬೇರೆ ಬೇರೆ. ಆತ ಒಂದೊಂದು ಜೀವಿಯಲ್ಲೂ ಒಂದೊಂದು ಅನನ್ಯ ಅಸಾಧಾರಣ ಗುಣಧರ್ಮ(Exclusive Quality)ದಿಂದ ಅಭಿವ್ಯಕ್ತನಾಗುತ್ತಾನೆ. ಉದಾಹರಣೆಗೆ: ಮುಟ್ಟಿದರೆ ಮುನಿ ಗಿಡ (Touch me not); ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯ ಜೊತೆಗೆ ಬೇಯಿಸಿ, ಆ ಗಂಜಿಯನ್ನು ಸೇವಿಸಿದರೆ ಅಥವಾ ಈ ಗಿಡದ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ. ಅದೇ ರೀತಿ ಜೇನುನೊಣ: ಹೂವಿಂದ ರಸವನ್ನು ಹೀರಿ ಜೇನನ್ನು ತಯಾರಿಸುವ ಅಸಾಧಾರಣ ಶಕ್ತಿ ಇರುವುದು ಈ ಪುಟ್ಟ ಹುಳದಲ್ಲಿ. ನಮ್ಮ ತಾಂತ್ರಿಕತೆಯಿಂದ ಕೃತಕವಾಗಿ ಜೇನನ್ನು ತಯಾರಿಸಲು ಬರುವುದಿಲ್ಲ.

ಈ ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ, ನಿಯಾಮಕ ಶಕ್ತಿಯಾದ ಜನೇಶ್ವರ ಭಗವಂತನನ್ನು ಅಪರೋಕ್ಷ ಜ್ಞಾನಿಗಳು ಪ್ರತ್ರಿಯೊಂದರಲ್ಲೂ ಕಾಣುತ್ತಾರೆ. ನಾಯಿ ಇರಲಿ, ಹಸು ಇರಲಿ, ಶ್ವಪಾಕನಿರಲಿ, ವಿದ್ಯಾವಿನಯಸಂಪನ್ನನಿರಲಿ. ಪಂಡಿತ ಎಲ್ಲವುದರಲ್ಲೂ ಆ ಭಗವಂತನ ಮಹಿಮೆಯನ್ನೇ ಕಾಣುತ್ತಾನೆ.

ತಾನು ಎಲ್ಲವುದರಲ್ಲೂ ಅಂತರ್ಯಾಮಿಯಾಗಿ ಅತ್ಯಂತ ಶುದ್ಧನಾಗಿ ತುಂಬಿದ್ದು, ನಿರ್ಲಿಪ್ತನಾಗಿ, ಒಂದೊಂದು ವಸ್ತುವಿಗೆ ಒಂದೊಂದು ರೀತಿಯ ವಿಶಿಷ್ಟ ಶಕ್ತಿಯನ್ನು ಕೊಡುವ ಭಗವಂತ, ಈ ಅನಂತ ಪ್ರಪಂಚವನ್ನು ಸೃಷ್ಟಿ ಮಾಡಿ ನಮ್ಮ ಕಣ್ಣ ಮುಂದೆ ಇಟ್ಟ. ಇಂತಹ ಭಗವಂತನ ಮಹಿಮೆಯನ್ನು ಪ್ರತಿಯೊಂದು ವಸ್ತುವಿನಲ್ಲೂ ನೋಡುತ್ತ ಅನುಸಂಧಾನ ಮಾಡಬೇಕು. ಆತ ಎಲ್ಲ ಕಡೆಯೂ ಜ್ಞಾನಾನಂದಪೂರ್ಣನಾಗಿ, ಸರ್ವಗುಣಪೂರ್ಣ-ಸರ್ವಗತನಾಗಿ, ಪ್ರತಿಯೊಂದು ಅಣು-ಕಣದೊಳಗೆ ತುಂಬಿದ್ದಾನೆ ಎನ್ನುವ ಅನುಸಂಧಾನ -ಅಪರೋಕ್ಷ ಜ್ಞಾನಕ್ಕೆ ಬೇಕಾದ ಸಮದರ್ಶನ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *