ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 17

ತದ್ ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್ ಪರಾಯಣಾಃ ।
ಗಚ್ಛಂತ್ಯ ಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ॥೧೭॥

ತತ್ ಬುದ್ಧಯಃ ತತ್ ಆತ್ಮಾನಃ ತತ್ ನಿಷ್ಠಾಃ ತತ್ ಪರಾಯಣಾಃ ।

ಗಚ್ಛಂತಿ ಅಪುನಃ ಆವೃತ್ತಿಮ್ ಜ್ಞಾನ ನಿರ್ಧೂತ ಕಲ್ಮಷಾಃ -ಅವನಲ್ಲೆ ಬಗೆ ನೆಟ್ಟವರು, ಅವನೆ ಸ್ವಾಮಿಯೆಂದು ನಂಬಿದವರು, ಅವನಲ್ಲೆ ನೆಲೆಗೊಡವರು, ಅವನಿಗೇ ಶರಣಾದವರು, ಅವನನ್ನು ಕಂಡು ಬಾಳ ಕೊಳೆಯನ್ನು ಕಳೆದುಕೊಂಡವರು ಮತ್ತೆ ಮರಳಿಬಾರದ ತಾಣಕ್ಕೆ ತೆರಳುತ್ತಾರೆ.

ಅಜ್ಞಾನವನ್ನು ಅಳಿಸುವ ಮಾರ್ಗವನ್ನು ಕೃಷ್ಣ ಇಲ್ಲಿ ಸೊಗಸಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಭಗವಂತನಲ್ಲೇ ಬುದ್ಧಿಯನ್ನಿಡುವುದು(ತತ್ ಬುದ್ಧಯಃ); ನಮ್ಮ ಮನಸ್ಸು ಎಲ್ಲಾ ವಿಷಯಗಳನ್ನು ಗ್ರಹಿಸುತ್ತದೆ, ಬುದ್ಧಿ ತೀರ್ಮಾನ ಮಾಡುತ್ತದೆ. ನಾವು ಭಗವಂತನಲ್ಲಿ ಸ್ಥಿರವಾಗಿ ನಮ್ಮ ಬುದ್ಧಿಯನ್ನು ಇಟ್ಟರೆ ಆತ ನಮ್ಮ ಬುದ್ಧಿಯಲ್ಲಿ ಬಂದು ಕೂರುತ್ತಾನೆ. ಇದಕ್ಕಾಗಿ ನಾವು ಭಗವಂತನ ಕುರಿತಾಗಿ ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕು. ಭಗವಂತನ ವಿಷಯದ ನಿರಂತರ ಸಾಧನೆಯಿಂದ ನಾವು ಭಗವಂತನಲ್ಲಿ ನಮ್ಮ ಬುದ್ಧಿಯನ್ನು ನೆಲೆಗೊಳಿಸಿದಾಗ, ಭಗವಂತ ನಮ್ಮ ಬುದ್ಧಿಯಲ್ಲಿ ನೆಲೆಗೊಳ್ಳುತ್ತಾನೆ.

ಭಗವಂತನಿಗೆ ನಿನ್ನ ಆತ್ಮವನ್ನು, ನಿನ್ನ ಮನಸ್ಸನ್ನು ಅರ್ಪಿಸು(ತತ್ ಆತ್ಮಾನಃ), ಅವನು ನಿನ್ನ ಸ್ವಾಮಿಯಾಗಲಿ, ನೀನು ‘ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು’, ಅವನ ನಿಯಂತ್ರಣದಲ್ಲಿ ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ ಎಂದು ನಿರಂತರ ಪ್ರಾರ್ಥನೆ ಮಾಡು.

ಭಗವಂತನಲ್ಲಿ ನಿಷ್ಠೆ(ತತ್ ನಿಷ್ಠಾಃ) ಇಲ್ಲದೆ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಷ್ಠಾ ಅಂದರೆ ಭಕ್ತಿ. ಆದ್ದರಿಂದ ಭಗವಂತನಲ್ಲಿ ಸದಾ ಭಕ್ತಿ ಇರಬೇಕು. ಭಕ್ತಿ ಇಲ್ಲದೆ ಧ್ಯಾನ, ಪೂಜೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಒಮ್ಮೆ ನಮಗೆ ಭಗವಂತನ ಬಗ್ಗೆ ಜ್ಞಾನ ಬಂದರೆ ಭಕ್ತಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಜ್ಞಾನವಿಲ್ಲದ ಭಕ್ತಿ-ಮೂಡಭಕ್ತಿ. ಜ್ಞಾನವಿದ್ದು ಭಕ್ತಿ ಇಲ್ಲದಿದ್ದರೆ(ಅಹಂಕಾರದಿಂದ) ಆ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಅದು ಶುಷ್ಕ ಪಾಂಡಿತ್ಯವೆನಿಸುತ್ತದೆ.

ಹೀಗೆ ಮನಸ್ಸು-ಬುದ್ಧಿಯನ್ನು ಭಗವಂತನಲ್ಲಿ ನೆಲೆಸಿ ಜ್ಞಾನಪೂರ್ವಕ ಭಕ್ತಿಯನ್ನು ರೂಢಿಸಿಕೊಂಡಾಗ ಎಲ್ಲಕ್ಕಿಂತ ದೊಡ್ಡ ಆಶ್ರಯ ಭಗವಂತ(ತತ್ ಪರಾಯಣಾಃ) ಎನ್ನುವ ಅರಿವು ಬರುತ್ತದೆ. ಇದರಿಂದ ಸಂಸಾರವೆ ಸರ್ವಸ್ವ ಎನ್ನುವ ಭ್ರಮೆ ಹೊರಟು ಹೋಗುತ್ತದೆ. ಪುರಂದರದಾಸರು ಹೇಳಿದಂತೆ “ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ” ಅಂದರೆ ಈ ಸಂಸಾರ ಶಾಶ್ವತ ಅಲ್ಲ ಹಾಗು ಯಾವಾಗ ಇಲ್ಲಿಂದ ಹೊರಡಬೇಕೋ ನಮಗೆ ಗೊತ್ತಿಲ್ಲ. ಹಾಗಿರುವಾಗ ‘ನನ್ನದು’ ಎನ್ನುವ ಅಹಂಕಾರ ಏಕೆ? ಇದು ಪಲಾಯನವಾದವಲ್ಲ, ನಾವು ಯಾವುದನ್ನೂ ಬಿಡಬೇಕಾಗಿಲ್ಲ,ಆದರೆ ಅದೇ ಸರ್ವಸ್ವ ಎನ್ನುವ ಭ್ರಮೆಯನ್ನು ಬಿಡುವುದು ಅಷ್ಟೇ. ಭಗವಂತ ಕೊಟ್ಟಿದ್ದಾನೆ, ಕೊಟ್ಟಷ್ಟು ಕಾಲ ಇಟ್ಟಷ್ಟು ಕಾಲ ಇರುವುದು. ಅದೇ ರೀತಿ ಯಾವ ತತ್ವಾಭಿಮಾನಿ ದೇವತೆಗಳನ್ನೂ ನಾವು ತಿರಸ್ಕರಿಸಬಾರದು. ಅವರು ನಮಗೆ ಭಗವಂತನನ್ನು ಸೇರುವ ಮಾರ್ಗ ತೋರಿಸುವ ಭಗವಂತನ ಪರಿವಾರ, ಆದರೆ ಅವರೇ ಸರ್ವಸ್ವ ಅಲ್ಲ.

ಎಲ್ಲಕ್ಕಿಂತ ಮೇಲೆ ಎಲ್ಲರಿಗೂ ಆಶ್ರಯವಾಗಿರತಕ್ಕಂತಹ ಪರತತ್ವದ ಎಚ್ಚರದೊಂದಿಗೆ ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ಭಗವಂತನ ಪ್ರಸಾದವೆಂದು ಮಾಡು. ಓಡಿಹೋಗಬೇಡ, ಸಂಸಾರದಲ್ಲಿ ಬದುಕು, ಭಗವಂತ ಕೊಟ್ಟಿದ್ದನ್ನು ಸ್ವೀಕರಿಸು. ನಿನ್ನೆಲ್ಲಾ ಸರ್ವಸ್ವವನ್ನು ‘ಪರಮ ರಕ್ಷಕ ಭಗವಂತ’ ಎಂದು ಅವನಲ್ಲಿ ಅರ್ಪಿಸು. ಹೀಗೆ ಬದುಕುವುದರಿಂದ, ನಮ್ಮ ಆತ್ಮಕ್ಕೆ ಅಂಟಿದ ಕೊಳೆ ತೊಳೆದು ಹೋಗುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ. ಆಗ ಜ್ಞಾನ ಬೆಳಗುತ್ತದೆ-ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದರಿಂದ ಮತ್ತೆ ಮರಳಿ ಬಾರದ ಶಾಶ್ವತ ಮೋಕ್ಷವನ್ನು ಜೀವ ಪಡೆಯಬಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *