ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 16

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ॥೧೬॥

ಜ್ಞಾನೇನ ತು ತತ್ ಅಜ್ಞಾನಮ್ ಯೇಷಾಮ್ ನಾಶಿತಮ್ ಆತ್ಮನಃ ।

ತೇಷಾಮ್ ಆದಿತ್ಯ ವತ್ ಜ್ಞಾನಮ್ ಪ್ರಕಾಶಯತಿ ತತ್ ಪರಮ್-ಭಗವಂತನ ಅರಿವಿನಿಂದ ಅವಿದ್ಯೆಯನ್ನು ಅಳಿಸಿಕೊಂಡವರ ಆ ಅರಿವು ಸೂರ್ಯನಂತೆ ಪರತತ್ವವನ್ನು ಬೆಳಗಿಸುತ್ತದೆ.

ನಾವು ನಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಲು ಇರುವುದು ಕೇವಲ ಒಂದೇ ಮಾರ್ಗ. ಜ್ಞಾನ ಮಾರ್ಗದಲ್ಲಿ ಸಾಧನೆ ಮಾಡಿ ಸತ್ಯವನ್ನು ತಿಳಿದುಕೊಳ್ಳುವುದು. ನಮ್ಮ ಸಮಸ್ಯೆ ಅಂದರೆ ನಮ್ಮೊಳಗೆ ಇರುವ ಜೀವ ಸ್ವರೂಪದಲ್ಲಿ ಜ್ಞಾನವಿದೆ-ಆದರೆ ಅದನ್ನು ಅಜ್ಞಾನವೆಂಬ ಮುಸುಕು ಕವಿದಿದೆ. ನಾವು ನಮ್ಮ ಜೀವ ಸ್ವರೂಪವನ್ನು ಅಜ್ಞಾನವೆಂಬ ಪೆಟ್ಟಿಗೆಯೊಳಗೆ ಭದ್ರವಾಗಿ ಮುಚ್ಚಿಟ್ಟಿದ್ದೇವೆ. ಜ್ಞಾನಕ್ಕೆ ಮುಚ್ಚಳ-ಅಜ್ಞಾನದ್ದು ಹಾಗು ನಮಗೆ ಆ ಮುಚ್ಚಳವನ್ನು ತೆಗೆಯಲು ಇಷ್ಟವಿಲ್ಲ.

ನಾವು ಮೊದಲು ತಿಳಿಯಬೇಕಾದ ಸಂಗತಿ ‘ನಾನು ಅಂದರೆ ಏನು’ ಎನ್ನುವುದನ್ನು.ಅದು ಗೊತ್ತಾದಾಗ ನನ್ನ ಸೀಮಿತತೆ ಏನು, ನನ್ನ ಶಕ್ತಿ ಏನು, ನನ್ನ ಅಲ್ಪತ್ವವೇನು ಎನ್ನುವುದು ತಿಳಿಯುತ್ತದೆ. ನಮ್ಮ ಇಂದ್ರಿಯದ ಒಡೆತನ ನಮಗಿಲ್ಲ; ನಮ್ಮ ಮನಸ್ಸು ನಾವು ಹೇಳಿದಂತೆ ಕೇಳುವುದಿಲ್ಲ. ಆದ್ದರಿಂದ ನಾನು ಇವೆಲ್ಲವುದರ ಜೊತೆಗಿದ್ದೇನೆ, ಯಾರೋ ಇದನ್ನೆಲ್ಲ ಇಲ್ಲಿ ಇಟ್ಟಿದ್ದಾರೆ; ಇಂದ್ರಿಯದಿಂದ ಅನುಭವ ಬರುತ್ತದೆ ನಾನು ಅನುಭವಿಸುತ್ತೇನೆ ಎನ್ನುವ ಅರಿವು ಮೂಡುತ್ತದೆ. ಈ ಇಂದ್ರಿಯಗಳನ್ನು ಕೊಟ್ಟವನ್ಯಾರು, ಅದರಿಂದ ಅನುಭವ ಕೊಡುವವನ್ಯಾರು ಎನ್ನುವುದು ಅರ್ಥವಾದಾಗ, ತಾನು ಕೇವಲ ಪ್ರತಿಬಿಂಬ ಮತ್ತ ಮೂಲ ಬಿಂಬ ಭಗವಂತ ಎನ್ನುವ ಅರಿವು ಮೂಡುತ್ತದೆ.

ನಾವು ಹೇಗೆ ನಮ್ಮ ಅಜ್ಞಾನದ ಪರದೆಯನ್ನು ಕಳಚಿ ಜ್ಞಾನದ ಮಾರ್ಗವನ್ನು ಹಿಡಿಯಬಹುದು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. “ಜ್ಞಾನ ಎನ್ನುವುದು ಬೆಂಕಿಯಂತೆ. ಒಳಗಿರುವ ಜ್ಞಾನದ ಕಿಡಿಯನ್ನು ಸತತ ಅಂತರಂಗದ ಮನನದಿಂದ ಪ್ರಜ್ವಲಿಸು. ಆಗ ಅದು ಈ ಅಜ್ಞಾನವೆಂಬ ಪರದೆಯನ್ನು ಸುಟ್ಟುಬಿಡುತ್ತದೆ”. ನಿರಂತರ ಅಂತರಂಗದ ಮನನ ಮಾತ್ರ ನಮ್ಮ ಅಂತರಂಗದ ಜ್ಞಾನವನ್ನು ಪ್ರಜ್ವಲಿಸಬಲ್ಲದು. ಹೊರಗಿನ ಶ್ರವಣ, ಅಧ್ಯಯನ ಇದಕ್ಕೆ ಪೂರಕ. ಒಮ್ಮೆ ಅಜ್ಞಾನದ ಪರದೆ ಸುಟ್ಟು ನಾಶವಾದಾಗ ನಮಗೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇದರಿಂದ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬರಲು ಸಾಧ್ಯವೇ ಇಲ್ಲ. ಈ ಜ್ಞಾನದ ಬೆಂಕಿ ಸೂರ್ಯ ಪ್ರಕಾಶಕ್ಕಿಂತ ದೊಡ್ಡದು ಎನ್ನುತ್ತಾನೆ ಕೃಷ್ಣ. ಹೇಗೆ ಹೊರ ಪ್ರಪಂಚವನ್ನು ಸೂರ್ಯ ಬೆಳಗಿಸುತ್ತಾನೋ ಹಾಗೇ ಈ ಜ್ಞಾನ ಅಂತರಂಗ ಪ್ರಪಂಚವನ್ನು ಬೆಳಗಿಸುತ್ತದೆ. ಇದು ಅಪರೋಕ್ಷ ಜ್ಞಾನ ಹಾಗು ಈ ಜ್ಞಾನ ಭಗವಂತನ ಸಾಕ್ಷಾತ್ಕಾರ ಮಾಡಿಸುತ್ತದೆ.

ಕೃಷ್ಣನ ಈ ವಿವರಣೆಯನ್ನು ಕೇಳಿದಾಗ ನಮಗೆ ನಾವೂ ಅಪರೋಕ್ಷ ಜ್ಞಾನವನ್ನು ಪಡೆಯಬೇಕು ಅನ್ನಿಸುತ್ತದೆ. ಆದರೆ ಅದು ಹೇಗೆ? ಅಪರೋಕ್ಷ ಜ್ಞಾನ ಬರಬೇಕಾದರೆ ನಾವು ಏನು ಮಾಡಬೇಕು? ಇದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *