ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 15

ನಾSದತ್ತೇ ಕಸ್ಯಚಿತ್ಪಾಪಂ ನ ಚೈವ ಸುಕೃತಂ ವಿಭುಃ ।
ಅಜ್ಞಾನೇನಾSವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೧೫॥

ನ ಆದತ್ತೇ ಕಸ್ಯಚಿತ್ ಪಾಪಮ್ ನ ಚ ಏವ ಸು ಕೃತಮ್ ವಿಭುಃ ।

ಅಜ್ಞಾನೇನ ಆವೃತಮ್ ಜ್ಞಾನಮ್ ತೇನ ಮುಹ್ಯಂತಿ ಜಂತವಃ -ಜಡಕ್ಕಿಂತ ಮಿಗಿಲೆನಿಸಿದ ಜೀವ ಯಾರ ಪಾಪವನ್ನೂ ತೊಡೆಯಲಾರ; ಪುಣ್ಯವನ್ನು ಕೂಡಾ. [ಯಾವ ಜೀವಿಯ ಪಾಪ-ಪುಣ್ಯಗಳ ನಂಟೂ ಭಗವಂತನಿಗಿಲ್ಲ.]ಅರಿವಿಗೆ ಅವಿದ್ಯೆಯ ಮಸುಕಿದೆ. ಅದರಿಂದ ಜನರು ಮೈಮರೆಯುತ್ತಾರೆ.

ಈ ಶ್ಲೋಕವನ್ನು ‘ಜೀವದ’ ಪರವಾಗಿ ಮತ್ತು ‘ಭಗವಂತ’ನ ಪರವಾಗಿ ಎರಡು ರೂಪದಲ್ಲಿ ನೋಡಬಹುದು. ಜೀವನ ಪರದಲ್ಲಿ ನೋಡಿದಾಗ ವಿಭುಃ ಅಂದರೆ ವಿಶಿಷ್ಟ, ವೈವಿಧ್ಯ, ವಿವಿಧ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಜಡಕ್ಕಿಂತ ವಿಶಿಷ್ಟನಾಗಿ-ಇಚ್ಛೆ, ಯೋಚನೆ, ಜ್ಞಾನ ಇರುವ ಜೀವ ವಿಶಿಷ್ಟ. ಬೇರೆ ಬೇರೆ ಜನ್ಮದಲ್ಲಿ ಬೇರೆ ಬೇರೆ ಜೀವಿಯಾಗಿ ಹುಟ್ಟಬಹುದಾದ ಜೀವ, ಒಂದು ಜನ್ಮದಲ್ಲೇ ಅನೇಕ ವೈವಿಧ್ಯತೆಯನ್ನು ಕಾಣಬಹುದು. ಉದಾಹರಣೆಗೆ ಮನುಷ್ಯನಾದವನು ಶ್ರೀಮಂತನಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕಬಹುದು, ದಾರಿದ್ರ್ಯದಲ್ಲಿರಬಹುದು. ದೊಡ್ಡ ವಿದ್ವಾಂಸನಾಗಿ ಬದುಕಬಹುದು ಅಥವಾ ಏನೂ ಅರಿವಿಲ್ಲದ ಮೂಢನಾಗಿ ಬದುಕಬಹುದು.ಈ ರೀತಿಯ ವೈವಿದ್ಯತೆ ಜೀವದಲ್ಲಿದೆ-ಅದಕ್ಕಾಗಿ ಜೀವ ವಿಭುಃ. ಒಂದೇ ಜನ್ಮದಲ್ಲಿ ಹುಟ್ಟಿ ಸಾಯುವ ತನಕ ಅನೇಕ ಮಜಲುಗಳಲ್ಲಿ ಅನೇಕ ವೈವಿಧ್ಯತೆಯನ್ನು ನಾವು ಅನುಭವಿಸಬಹುದು. ಶ್ರೀಮಂತನಾಗಿದ್ದವನು ಎಲ್ಲವನ್ನು ಕಳೆದುಕೊಂಡು ದಾರಿದ್ರ್ಯವನ್ನು ಪಡೆಯಬಹುದು. ಹೀಗಾದಾಗ ನಾವು ಅದರ ಹಿಂದೆ ಏನೇನೋ ಕಾರಣಗಳನ್ನು ಹುಡುಕುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ಮೊದಲ ಕೆಲಸ ಯಾವುದೋ ಜೋತಿಷಿಗಳಲ್ಲಿ ಹೋಗಿ ಪ್ರಶ್ನೆ ಹಾಕುವುದು. ಹಾಗೆ ಕೇಳಿದಾಗ ಅವರು ಯಾರೋ ವಾಮಾಚಾರ(Witchcraft) ಮಾಡಿದ್ದರಿಂದ ನೀನು ನಷ್ಟ ಅನುಭವಿಸುತ್ತಿರುವುದು ಇತ್ಯಾದಿಯಾಗಿ ಹೇಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ಯಾರ ಪಾಪವನ್ನು ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗು ಇನ್ನೊಬ್ಬರ ಪುಣ್ಯ ನಮಗೆ ಬರುವುದಿಲ್ಲ; ನಾವು ಏನು ಅನುಭವಿಸುತ್ತೇವೆ ಅದು ನಾವು ಮಾಡಿದ ಕರ್ಮ ಫಲ” ಎಂದು. ಈ ಕಾರಣದಿಂದ ಇನ್ನೊಬ್ಬರಿಂದ ನಾವು ಹಾಳಾದೆವು ಎನ್ನುವುದು ತಪ್ಪು ಎನ್ನುವುದು ಇಲ್ಲಿ ಸ್ಪಷ್ಟ. ಹಾಗಿದ್ದರೆ ವಾಮಾಚಾರ ಇತ್ಯಾದಿ ಮಾಡಲು ಬರುವುದಿಲ್ಲವೋ, ಅದರಿಂದ ತೊಂದರೆ ಆಗುವುದು ಸುಳ್ಳೋ, ಎಂದರೆ -ನಮ್ಮ ಸುಕೃತದ ಫಲ ನಮ್ಮನ್ನು ರಕ್ಷಣೆ ಮಾಡುವಷ್ಟು ಕಾಲ ಯಾವ ವಾಮಾಚಾರವೂ ನಮ್ಮನ್ನು ಏನೂ ಮಾಡುವುದಿಲ್ಲ. ಇದನ್ನು ಜೋತಿಷಿಗಳು “ನಿಮ್ಮ ಗ್ರಹಗತಿ ಚನ್ನಾಗಿತ್ತು ಆದ್ದರಿಂದ ಈವರೆಗೆ ಏನೂ ಆಗಿಲ್ಲ, ಆದರೆ ಈಗ ಅದು ಕೆಟ್ಟಿದೆ” ಇತ್ಯಾದಿಯಾಗಿ ಹೇಳುತ್ತಾರೆ. ಇಲ್ಲಿ ಗ್ರಹಗತಿ ಕೆಟ್ಟಿದೆ ಅಂದರೆ ನಮ್ಮ ಪಾಪದ ಫಲ ಪಕ್ವವಾಗಿದೆ ಎಂದರ್ಥ. ಆದ್ದರಿಂದ ಯಾರು ನಮ್ಮ ಮೇಲೆ ಕೃತ್ರಿಮ ಪ್ರಯೋಗ ಮಾಡಿದರೂ, ಅದರಿಂದ ನಮಗೆ ಅನಿಷ್ಠವಾಗಬೇಕಾದರೆ ನಾವು ಹಿಂದೆ ಅನಿಷ್ಠಕರ್ಮ ಮಾಡಿರಬೇಕು, ಅದರ ಫಲವಾಗಿ ಇಲ್ಲಿ ನಮಗೆ ಅದು ಅನುಭವಕ್ಕೆ ಬರುತ್ತದೆ. ನಮ್ಮ ದೋಷಗಳು, ನಮ್ಮ ಬಡತನ, ನಮ್ಮ ಅಜ್ಞಾನ, ರೋಗ-ರುಜಿನ ಇತ್ಯಾದಿಗಳಿಗೆ ಇನ್ನೊಬ್ಬರನ್ನು ತೋರಿಸುವುದು, ಅವರಿಂದ ಹೀಗಾಯ್ತು ಎನ್ನುವುದು ತಪ್ಪು. ನಮಗೆ ರೋಗ ಉಲ್ಬಣವಾಗಿ ಅದನ್ನು ಅನುಭವಿಸುವ ಪ್ರರಾಬ್ಧ ಕರ್ಮ ಇದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಬರುವುದಿಲ್ಲ. ಇದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ತಪ್ಪು. ಯಾರೋ ಮಾಡಿದ ಪಾಪಕರ್ಮದ ಫಲವನ್ನು ನಾನು ಅನುಭವಿಸುವುದಿಲ್ಲ. ನಾನು ಮಾಡಿದ ಪಾಪ ಕರ್ಮದ ಫಲವನ್ನೇ ನಾನು ಅನುಭವಿಸುವುದು.

ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ, ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ(Exception) ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲ ಹೊರತು ಇನ್ನೊಬ್ಬರದ್ದಲ್ಲ.

ಜನರಿಗೆ ಸರಿಯಾದ ಅರಿವಿಲ್ಲದ ಕಾರಣ ‘ಇನ್ನೊಬ್ಬರಿಂದ ನನಗೆ ತೊಂದರೆ ಆಯ್ತು’ ಎಂದು ತಿಳಿಯುತ್ತಾರೆ. ಇದಕ್ಕೆಲ್ಲಾ ಮೂಲಕಾರಣ ಕರ್ಮದ ಬಗ್ಗೆ, ಜೀವದಬಗ್ಗೆ, ಪರಮಾತ್ಮನ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು. ಜ್ಞಾನವೆನ್ನುವುದು ಅಜ್ಞಾನದ ಮುಸುಕಿನಲ್ಲಿ ಮುಚ್ಚಿಹೋಗಿ ಅದರಿಂದ ತಪ್ಪು ತಿಳುವಳಿಕೆ ಹಾಗು ಮೋಹದ ಭ್ರಾಂತಿ ನಮ್ಮನ್ನು ಆವರಿಸಿರುವುದು.

ಈ ಶ್ಲೋಕದ ಇನ್ನೊಂದು ಮುಖ ನೋಡಿದರೆ ‘ವಿಭುಃ’ ಅಂದರೆ ಸರ್ವ ಸಮರ್ಥನಾದ, ಸರ್ವಗತನಾದ ಭಗವಂತ. ಈ ಅರ್ಥದಲ್ಲಿ ನೋಡಿದಾಗ: ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ಆತ ಜೀವ ಸ್ವರೂಪದಲ್ಲಿನ ಅಂತರವನ್ನು ಗುರುತಿಸಿ ಅದಕ್ಕೆ ತಕ್ಕಂತೆಯೇ ಬೆಳವಣಿಗೆಯನ್ನು ಕೊಡುತ್ತಾನೆ. ಆತ ಎಂದೂ ಪಕ್ಷಪಾತಿ ಅಲ್ಲ. (Equal treatment of unequal is discrimination). ಪಾಪದ-ಪುಣ್ಯದ ಎರಡರ ಲೇಪವೂ ಆತನಿಗಿಲ್ಲ. ಆದರೆ ಭಗವಂತನ ಈ ಕರ್ಮಸಿದ್ಧಾಂತ, ಆತನ ಸರ್ವಸಮರ್ಥತೆ ಮತ್ತು ಅವನ ನಿರ್ಲಿಪ್ತತೆ ಇದರ ಅರಿವು ಬಹಳ ಜನಕ್ಕೆ ತಿಳಿದಿಲ್ಲ-ಆದ್ದರಿಂದ ಭಗವಂತನ ಬಗೆಗೆ ಗೊಂದಲಕ್ಕೊಳಗಾಗುತ್ತಾರೆ.

‘ನಮಗೆ ಸ್ವತಂತ್ರವಾದ ಕರ್ತೃತ್ವವಿಲ್ಲ, ನಾವು ಆತನ ಅಧೀನ’ ಎನ್ನುವ ವಿಚಾರದಲ್ಲಿ ನಾವು ಸದಾ ಗೊಂದಲಕ್ಕೊಳಗಾಗುತ್ತೇವೆ. ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ ಅನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಎಷ್ಟು ಅಧ್ಯಯನ ಮಾಡಿದರೂ ಈ ಕರ್ಮಸಿದ್ಧಾಂತ ಅರ್ಥವಾಗುವುದಿಲ್ಲ. ಇದಕ್ಕೆ ಕಾರಣ ಅರಿವಿನ ಅಭಾವ. ಈ ಅರಿವು ಕೇವಲ ಓದುವುದರಿಂದ ಬರುವುದಿಲ್ಲ. ಅದನ್ನು ಗ್ರಹಿಸಿ-ಗ್ರಹಿಸಿ, ಅನುಭವಿಸಿ ಮನವರಿಕೆ ಮಾಡಿಕೊಳ್ಳಬೇಕು. ಇದನ್ನು ಕೃಷ್ಣ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *