ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 05

ಶ್ಲೋಕ – 11

ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾSSತ್ಮಶುದ್ಧಯೇ ॥೧೧॥

ಕಾಯೇನ ಮನಸಾ ಬುದ್ಧ್ಯಾ ಕೇವಲೈಃ ಇಂದ್ರಿಯೈಃ ಅಪಿ ।

ಯೋಗಿನಃ ಕರ್ಮ ಕುರ್ವಂತಿ ಸಂಗಮ್ ತ್ಯಕ್ತ್ವಾ ಆತ್ಮ ಶುದ್ಧಯೇ-ಯೋಗಿಗಳು ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಬರಿಯ ಇಂದ್ರಿಯಗಳಿಂದ ಕರ್ಮ ಮಾಡುತ್ತಾರೆ. ನಂಟು ನೀಗಿ, ಬಗೆಯ ಶುದ್ಧಿಗಾಗಿ.

ಶಾಸ್ತ್ರದ ಸಂಪ್ರದಾಯದಂತೆ ಒಂದು ವಿಷಯವನ್ನು ಹೇಳಿ ಕೊನೆಗೆ ಆ ರೀತಿ ಅನುಷ್ಠಾನ ಮಾಡಿದವರ ಬಗ್ಗೆ ಹೇಳಿ, ನಮಗೆ ಆ ವಿಷಯದಲ್ಲಿ ಭರವಸೆ ಬರುವಂತೆ ಮಾಡುತ್ತಾರೆ. ಇದನ್ನು ‘ಅರ್ಥವಾದ’ ಎನ್ನುತ್ತಾರೆ. ಯಾವುದೇ ವಿಷಯವನ್ನು ನಾವೇ ಮೊದಲು ಆರಂಭಿಸುವುದು ಅಂದರೆ ಸ್ವಲ್ಪ ಕಷ್ಟ. ಆದರೆ ‘ಅದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಚಾರ’ ಎಂದಾಗ ಆ ವಿಷಯದ ಬಗ್ಗೆ ನಮಗೆ ಧೈರ್ಯ ಹೆಚ್ಚು. ಹಾಗೇ ಕೃಷ್ಣ ಇಲ್ಲಿ ಜ್ಞಾನಿಗಳು ಸಂನ್ಯಾಸಯುಕ್ತವಾದ ಕರ್ಮಯೋಗ ಮಾಡುವುದನ್ನು ಪ್ರಸ್ತಾಪಿಸುತ್ತಾನೆ.

ಯೋಗಿಗಳು ದ್ವಂದ್ವಾತೀತವಾದ, ಫಲಕಾಮನೆ ಇಲ್ಲದೆ, ‘ನನ್ನೊಳಗೆ ಭಗವಂತ ತನ್ನ ಪೂಜೆಯನ್ನು ನನ್ನ ಮೂಲಕ ನನ್ನ ಉದ್ಧಾರಕ್ಕೋಸ್ಕರ ಮಾಡಿಸುತ್ತಿದ್ದಾನೆ’ ಎಂದು ತಿಳಿದು ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡುತ್ತಾರೆ, ಅವರಿಗೆ ಅಹಂಕಾರ-ಮಮಕಾರ ಇರುವುದಿಲ್ಲ; ಇದರಿಂದ ಮನಸ್ಸು ಶುದ್ಧವಾಗುತ್ತದೆ. ಶುದ್ಧಮನಸ್ಸಿಗೆ ಶುದ್ಧ ವಿಷಯ ಗ್ರಹಣ ಮಾಡಲು ಸಾಧ್ಯ. ಶುದ್ಧ ವಿಷಯ ಗ್ರಹಣ ಎಂದರೆ ಶಾಸ್ತ್ರಕಾರರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅದೇ ಅರ್ಥದಲ್ಲಿ ಗ್ರಹಿಸುವುದು. ಹೀಗೆ ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸು ಶಾಸ್ತ್ರಕಾರರ ಮನಸ್ಸಿಗೆ ಶ್ರುತಿಗೂಡಬೇಕು(tuning) ಅಥವಾ ನಾವು ಅವರ ಸ್ಥಾನಕ್ಕೇರಬೇಕು ಹಾಗು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಇಲ್ಲದಿದ್ದರೆ ನಿಜವಾದ ವಿಷಯ ಗ್ರಹಣವಾಗುವುದಿಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ “ಯೋಗಿಗಳೂ ಕೂಡಾ ಅಹಂಕಾರ-ಮಮಕಾರ ತೊರೆದು (ಸಂಗಂ ತ್ಯಕ್ತ್ವಾ) ಭಗಾವದರ್ಪಣ ಬುದ್ಧಿಯಿಂದ- ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಇಂದ್ರಿಯಗಳಿಂದ ಕರ್ಮನುಷ್ಠಾನವನ್ನು ಮಾಡುತ್ತಾರೆ” ಎಂದು. ಈ ವಿಚಾರವನ್ನು ಮತ್ತಷ್ಟು ಒತ್ತು ಕೊಟ್ಟು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *