ಶ್ಲೋಕ – 08
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ॥೮॥
ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನ ಅರ್ಥಾಯ ಸಂಭವಾಮಿ ಯುಗೇಯುಗೇ-ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.
ಯಾರು ಸಮಾಜಕ್ಕೆ ಕೆಟ್ಟದ್ದನ್ನು, ಕೇಡನ್ನು ಮಾಡಿ ಅದರಿಂದ ಲಾಭ ಪಡೆದು ಮೆರೆಯುತ್ತಾರೋ, ಅಂಥವರ ಪೂರ್ಣನಾಶಕ್ಕಾಗಿ, ಸಜ್ಜನರ ಮತ್ತು ಪ್ರಪಂಚದ ಸಮಗ್ರ ರಕ್ಷಣೆಗಾಗಿ, ಧರ್ಮದ ಬೀಜ ಬಿತ್ತಲು ಭಗವಂತ ಭೂಲೋಕದಲ್ಲಿ ಅವತರಿಸುತ್ತಾನೆ. ಇಲ್ಲಿ ಯುಗೇ ಯುಗೇ ಅನ್ನುವಲ್ಲಿನ ಅರ್ಥ ‘ಯುಗ-ಯುಗದಲ್ಲೂ’. ಅಂದರೆ ಭಗವಂತ ಪ್ರತೀ ಯುಗದಲ್ಲೂ ಅವತರಿಸುತ್ತಾನೆ ಎಂದರ್ಥವಲ್ಲ. ಆತ ಅವತರಿಸುವುದು ಮೇಲೆ ಹೇಳಿದ ಸಂದರ್ಭ ಬಂದಾಗ ಮಾತ್ರ. ಒಂದೊಂದು ಯುಗದಲ್ಲಿ ಅನೇಕ ಅವತಾರವಿರಬಹುದು; ಇನ್ನು ಕೆಲವು ಯುಗದಲ್ಲಿ ಅವತಾರವೇ ಇಲ್ಲದಿರಬಹುದು. ಆದರೆ ಭಗವಂತನ ಆವಿರ್ಭಾವವಿರುವ ಅನೇಕ ಮಹಾಪುರುಷರು ಯುಗ-ಯುಗದಲ್ಲೂ ಬಂದು ಹೋಗುತ್ತಿರುತ್ತಾರೆ. ಅವರ ಮುಖೇನ ಭಗವಂತನ ಧರ್ಮ ರಕ್ಷಣೆ ಯುಗ ಯುಗದಲ್ಲೂ ನಿರಂತರ.