ಶ್ಲೋಕ – 06
ಅಜೋSಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋSಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ ॥೬॥
ಅಜಃ ಅಪಿ ಸನ್ ಅವ್ಯಯ ಆತ್ಮಾ ಭೂತಾನಾಮ್ ಈಶ್ವರಃ ಅಪಿ ಸನ್ |
ಪ್ರಕೃತಿಮ್ ಸ್ವಾಮ್ ಅಧಿಷ್ಠಾಯ ಸಂಭವಾಮಿ ಆತ್ಮಮಾಯಯಾ-ನನಗೆ ಹುಟ್ಟೆಂಬುದಿಲ್ಲ. ನನ್ನ ದೇಹಕ್ಕೆ ಕೂಡಾ ಸಾವಿಲ್ಲ. ನಾನು ಎಲ್ಲಾ ಜೀವಿಗಳ ಒಡೆಯರಿಗೂ ಒಡೆಯ. ಆದರೂ ನನ್ನಂಕೆಯಲ್ಲಿರುವ ಪ್ರಕೃತಿಮಯವಾದ ಶರೀರವನ್ನು ಹೊಕ್ಕು ಜ್ಞಾನ ಸ್ವರೂಪದಿಂದಲೇ (ನನ್ನ ಸಹಜ ಸ್ವಭಾವವನ್ನಾಧರಿಸಿ ನನ್ನಿಚ್ಛೆಯಿಂದಲೇ ) ಮೂಡಿಬರುವೆ.
ಸಮಸ್ತ ಜೀವ ಜಾತದ ಒಡೆಯನಾದ ಭಗವಂತ ಅನೇಕ ಬಾರಿ ಭೂಮಿಗೆ ಇಳಿದು ಬರುತ್ತಾನೆ. ಆತನಿಗೆ ಹುಟ್ಟು ಅನ್ನುವುದಿಲ್ಲ. ಆದರೂ ಹುಟ್ಟಿ ಬರುತ್ತಾನೆ. ಆತ ಅವ್ಯಯ; ಆತ ನಶ್ವರವಾದ ದೇಹವನ್ನು ಹೊತ್ತು ಹುಟ್ಟುವುದಿಲ್ಲ. ಆದ್ದರಿಂದ ದೇಹದ ಮೂಲಕ ಹುಟ್ಟು-ಸಾವು ಭಗವಂತನಿಗಿಲ್ಲ. ಇಲ್ಲಿ ಬಂದಿರುವ ‘ಆತ್ಮ ಮಾಯಯಾ’ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜೀವಕ್ಕೆ ಕವಿದ ಮೋಹದ ಪರದೆ ಆತ್ಮ ಮಾಯೆ; ಭಗವಂತನ ಮಹಿಮೆ ಆತ್ಮ ಮಾಯೆ; ಭಗವಂತನ ಸ್ವಂತ ಇಚ್ಚೆ ಹಾಗು ಜ್ಞಾನ ಆತ್ಮ ಮಾಯೆ. ಭಗವಂತ ಭೂಮಿಗೆ ಇಳಿದು ಬರುವುದು ಆತನ ಜ್ಞಾನದ ಮಹಿಮೆಯಿಂದ ಹೊರತು ಯಾವುದೋ ಮಾಯೆಯ ಅಧೀನನಾಗಿ ಅಲ್ಲ. ಭಗವಂತ ತನ್ನ ಭಕ್ತರ ಕಳಕಳಿಯನ್ನು ಈಡೇರಿಸುವುದಕ್ಕೊಸ್ಕರ ಇಚ್ಛಾಪೂರ್ವಕವಾಗಿ ತಾನೇ ನಿರ್ಮಿಸಿರುವ ಪ್ರಕೃತಿಯನ್ನು ಮಾಧ್ಯಮವಾಗಿ ಬಳಸಿ ಇಳಿದು ಬರುತ್ತಾನೆ. ಇದು ಆತನ ಮಹಿಮೆ. ಮೋಹದ ಪರದೆಯಲ್ಲಿ ಬದುಕುವ ನಮಗೆ ಇದು ಒಂದು ಸಾಮಾನ್ಯ ಹುಟ್ಟು ಎನ್ನುವಂತೆ ಕಾಣುತ್ತದೆ. ಏಕೆಂದರೆ ನಮಗೆ ಆತನ ಜ್ಞಾನಾನಂದಮಯ ಶರೀರವನ್ನು ಕಾಣಲು ಸಾಧ್ಯವಿಲ್ಲ. ನಮಗೆ ಸ್ವಯಂ ನಮ್ಮ ಜೀವ ಸ್ವರೂಪದ ಅರಿವೇ ಇಲ್ಲ-ಹೀಗಿರುವಾಗ ಭಗವಂತನನ್ನು ಅರಿಯುವುದು ಸಾಧ್ಯವೇ? ಈ ಕಾರಣದಿಂದ ನಮಗೆ ಭಗವಂತ ಪಾಂಚಭೌತಿಕ ಶರೀರದವನಂತೆ ಕಾಣುತ್ತಾನೆ. ನಮಗೆ ತಿಳಿದಂತೆ ಕೆಲವು ಪ್ರಾಣಿಗಳಿಗೆ ಬಣ್ಣ ಕಾಣುವುದಿಲ್ಲ. ಅವುಗಳ ಕಣ್ಣಿಗೆ ಆ ಶಕ್ತಿ ಇಲ್ಲ. ಆದ್ದರಿಂದ ಎಲ್ಲವೂ ಕಪ್ಪು ಬಿಳುಪು. ಆದರೆ ನಿಜವಾಗಿ ಪ್ರಪಂಚದಲ್ಲಿ ಬಣ್ಣವಿದೆ, ಆ ಪ್ರಾಣಿಗಳಿಗೆ ಬಣ್ಣವನ್ನು ಗ್ರಹಿಸುವ ಶಕ್ತಿ ಇಲ್ಲ ಅಷ್ಟೇ. ಹಾಗೇ ಮೋಹದ ಪರದೆಯಲ್ಲಿ ಬದುಕುವ ನಮಗೆ ಭಗವಂತನ ಜ್ಞಾನಾನಂದ ಸ್ವರೂಪ ಶರೀರ ಕಾಣಿಸುವುದಿಲ್ಲ, ಬದಲಿಗೆ ಪಾಂಚಭೌತಿಕ ಶರೀರ ಹುಟ್ಟಿ ನಾಶವಾದಂತೆ ಕಾಣುತ್ತದೆ. ಆದರೆ ಮೂಲತಃ ಭಗವಂತನಿಗೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಆತ ತನ್ನ ಸಹಜ ಸ್ವಭಾವದಿಂದ ಸ್ವ ಇಚ್ಚೆಯಿಂದ ಮೂಡಿ ಬರುತ್ತಾನೆ.
ಭಗವಂತ ಯಾವ ಕಾರಣಕ್ಕೋಸ್ಕರ ಭೂಮಿಗಿಳಿದು ಬರುತ್ತಾನೆ? ಅದರ ಹಿಂದಿರುವ ದೈವೀ ಸಂಕಲ್ಪ ಏನು? ಈ ಪ್ರಶ್ನೆಗೆ ಉತ್ತರ ಮುಂದಿನ ಎರಡು ಶ್ಲೋಕದಲ್ಲಿ ಕಾಣಬಹುದು.