ಶ್ಲೋಕ – 41
ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ ।
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥೪೧॥
ಯೋಗ ಸಂನ್ಯಸ್ತ ಕರ್ಮಾಣಮ್ ಜ್ಞಾನ ಸಂಛಿನ್ನ ಸಂಶಯಮ್
ಆತ್ಮವಂತಮ್ ನ ಕರ್ಮಾಣಿ ನಿಬಧ್ನಂತಿ ಧನಂಜಯ- ಧನಂಜಯ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ.
ಜೀವನದಲ್ಲಿ ಕರ್ಮ ಮಾಡು, ಕರ್ಮ ಮಾಡುತ್ತಾ ಕರ್ಮ ಸನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮ ಸನ್ಯಾಸ ಅಂದರೆ ಕರ್ಮ ತ್ಯಾಗವಲ್ಲ. ‘ಈ ಕರ್ಮ ಭಗವಂತನಿಗೆ ಸೇರಿದ್ದು ಎಂದು ಭಗವಂತನಲ್ಲಿ ಕರ್ಮವನ್ನು ಅರ್ಪಿಸುವುದು’- ಕರ್ಮ ಸನ್ಯಾಸ(ಈ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ವಿವರಣೆಯನ್ನು ಕಾಣಬಹುದು). ಕರ್ಮಫಲದ ಬಗ್ಗೆ ಆಸೆ ಆಕಾಕ್ಷೆಗಳನ್ನು ಬಿಟ್ಟು ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತಾ, ನಿರ್ವೀಕಾರನಾಗಿ ನಿರಂತರ ಕರ್ಮ ಮಾಡುವುದು ಕರ್ಮಸನ್ಯಾಸ. ಕರ್ಮವನ್ನು ಭಗವಂತನಲ್ಲಿ ಅರ್ಪಿಸಿ, ಜ್ಞಾನದಿಂದ ಸಂಶಯವನ್ನು ಪರಿಹರಿಸಿಕೊಂಡು, ವಿವೇಕಿಯಾಗಿ ಚಿತ್ತವನ್ನು ಜಾಗೃತಿಗೊಳಿಸಿ, ಆತ್ಮವಂತನಾಗಿ ಬದುಕುವುದನ್ನು ಕಲಿತಾಗ ಯಾವ ಕರ್ಮವೂ ಎಂದೂ ನಮಗೆ ಬಂಧಕವಾಗುವುದಿಲ್ಲ. “ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ಧನವನ್ನು ಗೆದ್ದ ನೀನು, ಜ್ಞಾನಧನವನ್ನು ಗೆದ್ದ ಧನಂಜಯ, ನಿನ್ನನ್ನು ಕರ್ಮ ಬಂಧಿಸದು” ಎನ್ನುತ್ತಾನೆ ಕೃಷ್ಣ.