ಶ್ಲೋಕ – 04
ಅರ್ಜುನ ಉವಾಚ ।
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥೪॥
ಅರ್ಜುನಃ ಉವಾಚ-ಅರ್ಜುನ ಕೇಳಿದನು :ಅಪರಮ್ ಭವತಃ ಜನ್ಮ ಪರಮ್ ಜನ್ಮ ವಿವಸ್ವತಃ |
ಕಥಮ್ ಏತತ್ ವಿಜಾನೀಯಾಮ್ ತ್ವಮ್ ಆದೌ ಪ್ರೋಕ್ತವಾನ್ ಇತಿ-ನೀನು ಹುಟ್ಟಿದ್ದು ಇತ್ತೀಚೆಗೆ. ಸೂರ್ಯ ಮೊದಲು ಹುಟ್ಟಿದವನು. ನೀನೇ ಮೊದಲು ಹೇಳಿದವನು ಎಂದರೆ ಇದನ್ನು ಹೇಗೆ ಅರ್ಥೈಸಲಿ?
ಜ್ಞಾನ ಪರಂಪರೆಯನ್ನು ವಿವರಿಸುವಾಗ ಕೃಷ್ಣ “ನಾನು ಮೊದಲು ಸೂರ್ಯನಿಗೆ(ದೇವತೆಗಳಿಗೆ) ಹೇಳಿದೆ” ಎಂದಿದ್ದಾನೆ. ಇಲ್ಲಿ ಅರ್ಜುನ ಕೃಷ್ಣನನ್ನು ಈ ಕುರಿತು ಪ್ರಶ್ನಿಸುತ್ತಾನೆ. ಕೃಷ್ಣ ಅರ್ಜುನನಿಗಿಂತ ಸುಮಾರು ಆರು ತಿಂಗಳು ಹಿರಿಯ. ಹಾಗಿರುವಾಗ ಕೋಟಿ-ಕೋಟಿ ವರ್ಷಗಳ ಹಿಂದೆ ಸೂರ್ಯನಿಗೆ ಹೇಳಿದೆ ಅಂದರೆ ಇದನ್ನು ಹೇಗೆ ಅರ್ಥೈಸಲಿ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನನಿಗೆ ಸ್ವಯಂ ಭಗವಂತನಿಂದ ಈ ಪ್ರಶ್ನೆಗೆ ಉತ್ತರ ಪಡೆಯುವ ಆಸೆ. ಅದಕ್ಕಾಗಿ ಈ ಪ್ರಶ್ನೆಯನ್ನು ಹಾಕಿದ್ದಾನೆ. ಇಷ್ಟೇ ಅಲ್ಲದೆ ಎಲ್ಲಾ ನರರ ಪ್ರತಿನಿಧಿಯಾಗಿ ನಿಂತ ಮಹಾಜ್ಞಾನಿ ಅರ್ಜುನ, ನಮ್ಮ ನಿಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಹಾಕುತ್ತಾನೆ. ಈ ಬಗ್ಗೆ ಪ್ರಾರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಕೃಷ್ಣ ಹೇಳಿದ್ದ: “ನಾವೆಲ್ಲರೂ ಹಿಂದೆಯೂ ಇದ್ದೆವೂ ಹಾಗು ಈಗ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ” ಎಂದು(ಅ-2 ,ಶ್ಲೋ-12). ಅದರ ಸಂಪೂರ್ಣ ವಿವರಣೆ ಇಲ್ಲಿ ಬರುತ್ತದೆ. ಯಾವ ಕರ್ಮಬಂಧನವಿಲ್ಲದ ಸರ್ವ ಸಮರ್ಥನಾದ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಉತ್ತರಿಸಿದ್ದಾನೆ.