ಶ್ಲೋಕ – 39
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ ॥೩೯॥
ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್ ಪರಃ ಸಂಯತ ಇಂದ್ರಿಯಃ ।
ಜ್ಞಾನಮ್ ಲಬ್ಧ್ವಾ ಪರಾಮ್ ಶಾಂತಿಮ ಆಚಿರೇಣ ಅಧಿಗಚ್ಛತಿ-ಇಂದ್ರಿಯಗಳನ್ನು ಹದ್ದಿನಲ್ಲಿಟ್ಟು, ಶ್ರದ್ಧೆಯಿಂದ ನನ್ನನ್ನೇ ಪರದೈವವೆಂದು ನಂಬಿದವನು ತಿಳಿವನ್ನುಗಳಿಸಿ ಶೀಘ್ರವಾಗಿ ಸಂತಸದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.
ನಮ್ಮಲ್ಲಿ ಅರಿವು ಮೂಡಬೇಕೆಂದರೆ ಬರಿಯ ಅಧ್ಯಯನ ಸಾಲದು. ಒಂದು ವಿಷಯ ನಮಗೆ ಮನವರಿಕೆಯಾಗಬೇಕಾದರೆ ಮೊದಲು ನಮಗೆ ಶ್ರದ್ಧೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಮುಖ್ಯ. ನಾನು ತಿಳಿದಿದ್ದೇ ದೊಡ್ಡದು ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ ಅನ್ನುವ ಅಹಂಕಾರವನ್ನು ಮೊದಲು ಬಿಡಬೇಕು. ನನಗೆ ಯಾವುದು ತಿಳಿದಿಲ್ಲವೋ ಅದು ಸತ್ಯವಾಗಿರಲು ಸಾಧ್ಯ ಎನ್ನುವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂತಿಲ್ಲ. ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಕೇವಲ ಅತೀ ಚಿಕ್ಕ ಅಂಶ. ನಮಗೆ ಗೊತ್ತಿಲ್ಲದೇ ಇರುವ ಸತ್ಯ ಇದೆ ಎಂದು ತಿಳಿಯುವುದೇ ಶ್ರದ್ಧೆ. ನಮ್ಮ ಬದುಕಿನ ಗುರಿ ಜ್ಞಾನ ಮತ್ತು ಸತ್ಯದ ತಿಳುವಳಿಕೆಯಾಗಬೇಕು. ಜ್ಞಾನದ ತೃಷೆ ಜೊತೆಗೆ ಇಂದ್ರಿಯಗಳ ಚಾಪಲ್ಯಕ್ಕೆ ಹಿಡಿತ. ಹೀಗೆ ಇದ್ದಾಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ-ಕೊನೆಗೆ ಪರಮಾತ್ಮನ ಸಾಕ್ಷಾತ್ಕಾರ. ಈ ನಡೆಯಿಂದ ಅಪರೋಕ್ಷ ಜ್ಞಾನ ಸಿದ್ಧಿಯಾಗುತ್ತದೆ ಮತ್ತು ಇದರಿಂದ ಸದಾ ಜ್ಞಾನಾನಂದಪೂರ್ಣನಾದ ಭಗವಂತನನ್ನು(ಮೋಕ್ಷವನ್ನು) ಪಡೆಯಲು ಸಾಧ್ಯ.