ಶ್ಲೋಕ – 37
ಯಥೈಧಾಂಸಿ ಸಮಿದ್ಧೋSಗ್ನಿರ್ಭಸ್ಮಸಾತ್ ಕುರುತೇ ಅರ್ಜುನ ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ॥೩೭॥
ಯಥಾ ಏಧಾಂಸಿ ಸಮಿದ್ಧಃ ಅಗ್ನಿಃ ಭಸ್ಮ ಸಾತ್ ಕುರುತೇ ಅರ್ಜುನ ।
ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ ಕುರುತೇ ತಥಾ- ಅರ್ಜನ, ಉರಿಯುವ ಬೆಂಕಿ ಉರುವಲನ್ನುಸುಟ್ಟುಬಿಡುವ ಹಾಗೆ ಅರಿವಿನ ಬೆಂಕಿ ಎಲ್ಲ ಕರ್ಮಗಳನ್ನೂ ಸುಟ್ಟುಬಿಡುತ್ತದೆ.
ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ. ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೆ ಜ್ಞಾನದ ಬೆಂಕಿ ಎಲ್ಲ ಪಾಪ ಕರ್ಮವನ್ನು ಸುಟ್ಟುಬಿಡುತ್ತದೆ. ಭಾಗವತದಲ್ಲಿ ಹೇಳುವಂತೆ ಆಧ್ಯಾತ್ಮಿಕವಾಗಿ ಬೆಂಕಿ ಸತ್ವ ಗುಣದ ಪ್ರತೀಕ. ಏಕೆಂದರೆ ಅದು ಬೆಳಕು ಕೊಡುವ ಹಾಗು ಸದಾ ಊರ್ಧ್ವ ಮುಖವಾಗಿರುವ ಶಕ್ತಿ. ಅದೇ ರೀತಿ ಕಟ್ಟಿಗೆ ಸದಾ ಕೆಳಕ್ಕೆಳೆಯುವ ತಮೋಗುಣದ ಪ್ರತೀಕ. ಬೆಂಕಿ ಕಟ್ಟಿಗೆಯನ್ನು ಸುಟ್ಟಂತೆ ಒಬ್ಬ ಸಾಧಕನಲ್ಲಿರುವ ಜ್ಞಾನ ತಮಸ್ಸನ್ನು ಸುಟ್ಟುಬಿಡುತ್ತದೆ. ಇಲ್ಲಿ ಕೃಷ್ಣ ‘ಅರ್ಜುನ’ ಎಂದು ಸಂಬೋಧಿಸಿದ್ದಾನೆ. ಅರ್ಜುನ ಎಂದರೆ ‘ಅರ್ಜನ’ ಮಾಡಿದವ, ಜ್ಞಾನವೆಂಬ ಬೆಂಕಿ ಉಳ್ಳವ. ಈ ಸಂಬೋಧನೆಯಿಂದ ಕೃಷ್ಣ ಅರ್ಜುನನ ಜ್ಞಾನಕ್ಕೆ ಆವರಿಸಿರುವ ಮೋಹದ ಪರದೆಯನ್ನು ಸರಿಸುತ್ತಿದ್ದಾನೆ.